ಬಳ್ಳಾರಿ ಮೆಡಿಕಲ್ ಕಾಲೇಜ್ ನಲ್ಲಿ ಬಾಣಂತಿಯರ ಅನುಮಾನಾಸ್ಪದ ಸಾವು,ಔಷಧ ನಿಯಂತ್ರಣ ಇಲಾಖೆಯನ್ನು ಬಲಿ ತೆಗೆದುಕೊಂಡಿದೆ.ಅಪರ ಔಷಧ ನಿಯಂತ್ರಕರು ಮತ್ತು ಪ್ರಭಾರಿ ಔಷಧ ನಿಯಂತ್ರಕರು ಆಗಿದ್ದ ಡಾ.ಉಮೇಶ್ ಎಸ್.ಅವರನ್ನು ಸರಕಾರ ಅಮಾನತ್ತು ಗೊಳಿಸಿದೆ.
ಔಷಧ ನಿಯಂತ್ರಣ ಇಲಾಖೆಯನ್ನು ‘ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಆಡಳಿತ’ (ಎಫ಼್. ಡಿ.ಎ.) ಎಂದು ಬದಲಾಯಿಸಲಾಗಿದೆ.ಆಹಾರ ಸುರಕ್ಷತೆಯ ಆಯುಕ್ತರನ್ನು ಔಷಧ ನಿಯಂತ್ರಣ ಇಲಾಖೆಯ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ ಹಾಗೂ
ಮೈಸೂರು ವಿಭಾಗದ ಉಪ ಔಷಧ ನಿಯಂತ್ರಕರಾದ ಬಿ.ಪಿ.ಅರುಣ,ಔಷಧ ನಿಯಂತ್ರಣ ಇಲಾಖೆಯ ಲೈಸೆನ್ಸಿಂಗ್ ಅಥಾರಿಟಿ ಎಂದು ನೇಮಕವಾಗಿದ್ದಾರೆ.
ಇತರ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕ ರಾಜ್ಯದಲ್ಲಿಯೂ ‘ಎಫ಼್.ಡಿ.ಎ.’ ಅನ್ನು ಅಸ್ತಿತ್ವಕ್ಕೆ ತರಬೇಕೆಂದು,ಬಹಳ ವರ್ಷಗಳಿಂದ ಔಷಧ ಮಾರಾಟಗಾರರ ಸಂಘಗಳು ಮತ್ತು ಫ಼ಾರ್ಮಸಿಸ್ಟ ಸಂಘಗಳು ಒತ್ತಾಯಿಸುತ್ತಾ ಬಂದಿದ್ದರೂ ಪ್ರಯೋಜನವಾಗಿರಲಿಲ್ಲ.ಆದರೆ ಬಳ್ಳಾರಿ ಪ್ರಕರಣದ ನಂತರ ಧೀಡೀರ್ ಆಗಿ ಸರಕಾರ ‘ಎಫ಼್.ಡಿ.ಎ.’ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಈ ಹಿಂದೆ ಐ.ಪಿ.ಎಸ್.ಅಧಿಕಾರಿ ಡಾ.ಸುರೇಶ್ ಮೊಹಮ್ಮದ್ ಕುನ್ನಿ ಅವರನ್ನು ಸರಕಾರ ಔಷಧ ನಿಯಂತ್ರಕರನ್ನಾಗಿ ನೇಮಕ ಮಾಡಿತ್ತು. ಔಷಧ ನಿಯಂತ್ರಕರ ಹುದ್ದೆ ತಾಂತ್ರಿಕ ಹುದ್ದೆಯಾಗಿರುವುದರಿಂದ ಈ ನೇಮಕವನ್ನು ಹೈಕೋರ್ಟನಲ್ಲಿ ಪ್ರಶ್ನಿಸಲಾಗಿತ್ತು. ಹೀಗಾಗಿ ಈ ನೇಮಕ ರದ್ದಾಗಿತ್ತು.ಈ ಪ್ರಕರಣವನ್ನು ಹೈಕೋರ್ಟನಲ್ಲಿ ದಾಖಲಿಸಲು,ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳ ‘ತನು,ಮನ,ಧನ’ ಗಳ ಸಹಾಯವಿತ್ತು ಎನ್ನಲಾಗಿತ್ತು.
ನಂತರದಲ್ಲಿ ಡಾ.ಶಾಲಿನಿ ರಜನೀಶ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ,ಔಷಧ ನಿಯಂತ್ರಕರು
ಆರೋಗ್ಯ ಇಲಾಖೆಯ ಆಯುಕ್ತರ ಹತ್ತಿರ ವರದಿ ಸಲ್ಲಿಸಿಕೊಳ್ಳಲು ಆದೇಶಿಸಿದ್ದರು.ಆದರೆ ಅದೂ ಮುಂದುವರೆಯಲಿಲ್ಲ.
ಔಷಧ ನಿಯಂತ್ರಣ ಇಲಾಖೆಗೆ ಆಡಳಿತಾಧಿಕಾರಿಯನ್ನಾಗಿ ಐ.ಎ.ಎಸ್.ಅಧಿಕಾರಿಯನ್ನು ನೇಮಿಸಬೇಕೆಂದು ಹಲವಾರು ವರ್ಷಗಳಿಂದ ಸರಕಾರಕ್ಕೆ ಮನವಿ ಸಲ್ಲಿಸದಾಗಲೆಲ್ಲಾ “ಔಷಧ ನಿಯಂತ್ರಕರ ಹುದ್ದೆ ತಾಂತ್ರಿಕ ಹುದ್ದೆಯಾಗಿದ್ದು, ಇತರರನ್ನು ಔಷಧ ನಿಯಂತ್ರಕರನ್ನಾಗಿ ನೇಮಕ ಮಾಡಲು ಬರುವುದಿಲ್ಲ” ಎಂದೇ ರಾಜ್ಯದ ಔಷಧ ನಿಯಂತ್ರಕರಾಗಿದ್ದವರು ಪತ್ರ ಬರೆಯುತ್ತಲೇ ಬಂದಿದ್ದರು.
ಆದರೆ ಅವರು ನಿವೃತ್ತಿ ಅಂಚಿಗೆ ಬಂದು ನಿಂತಾಗ “ರಾಜ್ಯ ಔಷಧ ನಿಯಂತ್ರಣ ಇಲಾಖೆಗೆ ಆಡಳಿತಾಧಿಕಾರಿ ನೇಮಕ ಮಾಡುವುದು ಸರಕಾರದ ಮಟ್ಟದಲ್ಲಿ ನಿರ್ಧರಿಸಬೇಕಾದ ವಿಷಯವಾದ್ದರಿಂದ,ಸರಕಾರದ ಮುಖ್ಯಸ್ಥರನ್ನು ಸಂಪರ್ಕಿಸಲು ವಿನಂತಿ”.ಎಂದೇ ಮರು ಉತ್ತರ ಬರುತಿತ್ತು.
ಈ ಹಿಂದೆ ಇಲಾಖೆಯ ಒಳ ಜಗಳಗಳಿಂದ ಮೂರು ಪಾಲಾದದ್ದು ಸಹ ಹೀಗೆಯೇ.ಔಷಧ ನಿಯಂತ್ರಕರು, ಅಪರ ಔಷಧ ನಿಯಂತ್ರಕರು,ಪರವಾನಿಗೆ ಪ್ರಾಧಿಕಾರಿ ಬೇರೆ ಬೇರೆ ಆಗಿಯೇ ಕಾರ್ಯನಿರ್ವಹಿಸಿದ್ದರು. ಅಧಿಕಾರಿಗಳಲ್ಲಿ ಪರಸ್ಪರ ಹೊಂದಾಣಿಕೆಯ ಕೊರತೆಯೇ ಇಷ್ಟಕ್ಕೆಲ್ಲ ಕಾರಣವಾಗಿತ್ತು.
ಈಗ ‘ಔಷಧ ನಿಯಂತ್ರಣ ಇಲಾಖೆ’ ಎಫ಼್.ಡಿ.ಎ., ಆಗಿ ಬದಲಾಗಲು,ಹಲವು ಸಹಾಯಕ ಔಷಧ ನಿಯಂತ್ರಕರ ಪರೋಕ್ಷ ಬೆಂಬಲ ಇತ್ತು.ಮತ್ತು ತಾವು ನಿವೃತ್ತಿಯಾದ ನಂತರ ಇಲಾಖೆ ‘ಎಫ಼್.ಡಿ.ಎ.’ ಆಗಿ ಬದಲಾಗಬೇಕು ಎಂದು ಹಲವು ನಿವೃತ್ತ ಔಷಧ ನಿಯಂತ್ರಕರ ಮಹಾದಾಸೆಯಾಗಿತ್ತು.ಇದಕ್ಕಾಗಿ ಅವರು ಪ್ರಯತ್ನ ಪಟ್ಟಿದ್ದರು ಸಹ.
ಕಾಕತಾಳೀಯ ಎನ್ನುವಂತೆ ದಿನಾಂಕ:16-11-2024 ರಂದು ನಮ್ಮ ಸಂಘಟನೆಯಿಂದ ಔಷಧ ನಿಯಂತ್ರಣ ಇಲಾಖೆಗೆ ಐ.ಎ.ಎಸ್.,ಅಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲು ಇಮೇಲ್ ಮೂಲಕ ಸರಕಾರವನ್ನು ವಿನಂತಿಸಲಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.
ಹೊಸದಾಗಿ ಎಫ಼್.ಡಿ.ಎ.ರಚನೆಯಾಗಿದೆ.ಅದು ಸಂಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಒಂದೆರಡು ತಿಂಗಳು ಆಗಬಹುದು.ಅಲ್ಲಿಯವರೆಗೂ ಈಗಿರುವ ಅಧಿಕಾರಿಗಳು ಸಂಪೂರ್ಣ ಸ್ವತಂತ್ರರು ! ಈ ಔಷಧ ನಿಯಂತ್ರಣ ಇಲಾಖೆ ಎಂಬುದು ವಿಷವರ್ತುಲ, ತಮ್ಮ ಆಟಕ್ಕೆ ತಕ್ಕಂತೆ ಯಾರನ್ನು ಬೇಕಾದರೂ ಬಳಸಿಕೊಳ್ಳುತ್ತಾರೆ ಮತ್ತು ಬಿಸಾಡುತ್ತಾರೆ.
ಇಲ್ಲಿ ಕಾಸಿದ್ದವನಿಗೆ ಹಾಗೂ ರಾಜಕೀಯ ಬೆಂಬಲ ಇದ್ದವನಿಗೆ ಕೈಲಾಸ ! ಇಲ್ಲದಿದ್ದವನಿಗೆ ವನವಾಸ ! ಅದು ಅಧಿಕಾರಿಯಾಗಿರಬಹುದು,ವ್ಯಾಪಾರಿಯಾಗಿರಬಹುದು.
ಒಬ್ಬ ಅಧಿಕಾರಿಯ ಮೇಲೆ ದೂರು ಸಲ್ಲಿಕೆಯಾದರೆ ಸಾಕು,ಇಡೀ ಇಲಾಖೆಯೇ ಒಂದಾಗುತ್ತದೆ.ದೂರುದಾರರ ಮೇಲೆ ಇಲ್ಲ ಸಲ್ಲದ ಅಪಾದನೆ ಮಾಡುತ್ತಾರೆ, ಬಚಾವಾಗುತ್ತಾರೆ.
ರಾಜ್ಯ ಔಷಧ ನಿಯಂತಕರಾಗಿದ್ದ ಡಾ.ಉಮೇಶ್ ಅವರು ಅಮಾನತ್ತಾಗಲು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳ ಕೈವಾಡವೂ ಇಲ್ಲ ಎನ್ನಲಾಗುವುದಿಲ್ಲ.ಅವರ ಪ್ರಭಾವವು ಸಚಿವರ ಮೇಲೆ ಬೀರಿಲ್ಲ ಎನ್ನಲು ಬರುವುದಿಲ್ಲ.
ಬಳ್ಳಾರಿ ವೈದ್ಯಕೀಯ ಕಾಲೇಜ್ ನಲ್ಲಿ ಔಷಧ ಖರೀದಿಸುವ ಅಧಿಕಾರಿಗಳು ಬೇರೆ ಇರುತ್ತಾರೆ. ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ ಮತ್ತು ವೇರ್ ಹೌಸ್ ಸೊಸೈಟಿಯಿಂದ ಔಷಧಗಳು ಸರಬರಾಜು ಆಗುತ್ತವೆ. ವೈದ್ಯರ ಸಲಹೆಯ ಮೇರೆಗೆ ಕೆಲವು ಔಷಧಗಳ ಖರೀದಿಯೂ ನಡೆಯುತ್ತದೆ.
ವೈದ್ಯಕೀಯ ಮಹಾ ವಿದ್ಯಾಲಯಗಳಲ್ಲಿ ಮಾತ್ರವಲ್ಲ , ರಾಜ್ಯದ ಇತರ ಸರಕಾರಿ ಆಸ್ಪತ್ರೆಗಳಲ್ಲೂ ವೈದ್ಯರ ಸೂಚನೆಯ ಮೇರೆಗೆ ಔಷಧಗಳು ಖರೀದಿಯಾಗುತ್ತವೆ. ಆದರೆ ಇಂತಹ ಯಾವುದಾದರೂ ಅವಗಡಗಳು ನಡೆದಾಗ ಫ಼ಾರ್ಮಸಿಸ್ಟಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ! ಇದ್ಯಾವ ನ್ಯಾಯ ?
ಈ ಬಗ್ಗೆ ತನಿಖಾ ಸಮಿತಿ ನೇಮಕವಾಗಿದ್ದು ,ಯಾವುದೇ ವರದಿ ಬಂದರೂ ಇನ್ನು ಮುಂದೆ ಔಷಧ ನಿಯಂತ್ರಕ ಹುದ್ದೆ ಯಾರಿಗೂ ಧಕ್ಕುವುದೇ ಇಲ್ಲ.ಏನಿದ್ದರೂ ಲೈಸೆನ್ಸಿಂಗ್ ಅಥಾರಿಟಿಯಾಗಿ ಕೆಲಸ ಮಾಡಬೇಕು ಅಷ್ಟೇ !
ಬಳ್ಳಾರಿ ವೈದ್ಯಕೀಯ ಮಹಾ ವಿದ್ಯಾಲಯದ ಆಸ್ಪತ್ರೆಗೆ ಸರಬರಾಜು ಆದ ರಿಂಗರ್ ಲ್ಯಾಕ್ಟೇಟ್ ದ್ರಾವಣದಿಂದ ಈ ಸಾವು ಸಂಭವಿಸಿರುವ ಅನುಮಾನಗಳನ್ನು ವ್ಯಕ್ತಪಡಿಸಲಾಗುತ್ತಿದೆ.ಈ ದ್ರಾವಣದ ಉತ್ಪನ್ನಗಳ ಕೆಲವು ಬ್ಯಾಚ್ ಗಳನ್ನು ಹೊಂದಿರುವ ಬಾಟಲ್ ಗಳನ್ನು ಬಳಸದಿರಲು ಕರ್ನಾಟಕ ಡ್ರಗ್ ಟೆಸ್ಟಿಂಗ್ ಲ್ಯಾಬ್ ಸೂಚಿಸಿತ್ತು ಎನ್ನಲಾಗಿದೆ.ಆದರೆ ಸೆ೦ಟ್ರಲ್ ಡ್ರಗ್ ಟೆಸ್ಟಿಂಗ್ ಲ್ಯಾಬ್ ಈ ಬ್ಯಾಚ್ ಗಳನ್ನೊಳಗೊಂಡ ಬಾಟಲ್ ಗಳ ಬಳಕೆಗೆ ಗ್ರೀನ್ ಸಿಗ್ನಲ್ ನೀಡಿತ್ತು ಎಂದು ಹೇಳಲಾಗಿದೆ.ಆದರೆ ಈ ಎಲ್ಲಾ ಸಂಗತಿಗಳು,ಅಂತೆ-ಕಂತೆಗಳೇ ಹೊರತು,ಸ್ಪಷ್ಟವಾದ ಮಾಹಿತಿ ಇಲ್ಲ.
ಲೋಕಾಯುಕ್ತವು ಸ್ವಯಂ ಪ್ರೇರಿತವಾಗಿ ಇತರ ಅಧಿಕಾರಿಗಳನ್ನು ಸೇರಿಸಿ,ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.ವರದಿ ಬರುವ ಹೊತ್ತಿಗೆ ಅಪಾದಿತ ಅಧಿಕಾರಿಗಳು ಹೈರಾಣವಾಗಿರುತ್ತಾರೆ.ಇತರ ಅಧಿಕಾರಿಗಳು ಜೇಬು ಭದ್ರ ಮಾಡಿಕೊಳ್ಳುತ್ತಿರುತ್ತಾರೆ.
-ಅಶೋಕಸ್ವಾಮಿ ಹೇರೂರ.