ಕರ್ನಾಟಕ ರಾಜ್ಯದಲ್ಲಿ ಔಷಧ ವ್ಯಾಪಾರಿಗಳು ತಾವೂ ಸಂಘಟಿತರಾಗುವುದಿಲ್ಲ.ಸಂಘಟನೆಯಾಗುವವರನ್ನೂ ಬಿಡುವುದಿಲ್ಲ.ಇದು ಹಲವು ವರ್ಷಗಳಿಂದ ಸಾಭೀತು ಆಗುತ್ತಲೇ ಬಂದಿದೆ.ರಾಜ್ಯದಲ್ಲಿ ಮಾತ್ರವಲ್ಲ ಜಿಲ್ಲೆಗಳಲ್ಲಿಯೂ ಇಂತಹ ಸ್ಥಿತಿ ಮೂರು ದಶಕಗಳಿಂದಲೂ ಬೇರೂರಿದೆ.ಇದರ ಪಿಡುಗು ಹಲವು ತಾಲೂಕುಗಳಿಗೂ ಹಬ್ಬಿದೆ.
ಕರ್ನಾಟಕ ಔಷಧ ವ್ಯಾಪಾರಿಗಳ ಸಂಘಕ್ಕೆ ಪರ್ಯಾಯವಾಗಿ ಮೂರ್ನಾಲ್ಕು ಸಂಘಗಳು ಹುಟ್ಟಿಕೊಂಡವಾದರೂ,ಈಗ ಉಳಿದಿರುವ ಎರಡು ಸಂಘಗಳು ಮಾತ್ರ ಒಂದಿಷ್ಟು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.ಉಳಿದವು ಹುಟ್ಟಿದ ಒಂದೆರಡು ವರ್ಷಗಳಲ್ಲಿ ಜೀವ ಕಳೆದು ಕೊಂಡವು.
ಫ಼ೆಡರೇಷನ್ ಆಫ಼್ ಕೆಮಿಸ್ಟ & ಡ್ರಗ್ಗಿಸ್ಟ ಆಫ಼್ ಕರ್ನಾಟಕ ಎಂಬ ಸಂಸ್ಥೆ ಕಟ್ಟಿದ್ದ ಶ್ರೀ ವಿ.ಹರಿಕೃಷನ್ ಅಚಾನಕ್ಕಾಗಿ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ ಬಿಟ್ಟರು.ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಮತ್ತು ಅಖೀಲ ಭಾರತ ಔಷಧ ವ್ಯಾಪಾರಿಗಳ ಸಂಘದ ಭರ್ಜರಿ ಸಮಾರಂಭವನ್ನು ಬೆಂಗಳೂರಿನಲ್ಲಿ ನೆರವೇರಿಸಿದರು.ನಂತರ ಮತ್ತೇ ಅದೇ ಭಿನ್ನಾಭಿಪ್ರಾಯ ಅವರನ್ನು ಆ ಸಂಘದಿಂದ ಹೊರ ಬರುವಂತೆ ಮಾಡಿತು.
ಜಿಲ್ಲೆಯಲ್ಲಿ ಎರಡೆರಡು ಸಂಘಗಳು ಹುಟ್ಟಿ ಕೊಳ್ಳುವುದು ಕಡ್ಡಾಯ ಆಗಿದೆ.ಬೆಂಗಳೂರು ನಗರದಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ಸಂಘಗಳು ಹುಟ್ಟಿಕೊಂಡಿವೆ. ಜಿಲ್ಲೆಗಳಲ್ಲಿನ ಸಂಘಗಳು ಸದಸ್ಯ-ಸದಸ್ಯರಲ್ಲಿ ‘ಚೀಟಿ’ ವ್ಯವಹಾರ ನಡೆಸಿ,ಅದರಿಂದ ಬಂದ ಲಾಭದಲ್ಲಿ ಅಸ್ತಿತ್ವವನ್ನು ಉಳಿಸಿಕೊಂಡು ಮುಂದುವರಿದಿವೆ.
ರಾಜ್ಯದಲ್ಲಿ ಅದ್ದೂರಿ ಕಾರ್ಯಕ್ರಮ ಮತ್ತು ಗಟ್ಟಿ ನಿರ್ಧಾರಕ್ಕೆ ಬದ್ಧರಾಗಿದ್ದ ಶ್ರೀ ವಿ.ಹರಿಕೃಷ್ಣನ್ ನಿಧನರಾದ ಹಿನ್ನೆಲೆಯಲ್ಲಿ ಅವರು ಕಟ್ಟಿದ ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘವನ್ನು ಉಳಿಸುವ-ಬೆಳೆಸುವ ಕಾರ್ಯದಲ್ಲಿ ಸಾಕಷ್ಟು ಪ್ರಯತ್ನಗಳು ನಡೆದಿವೆ.
ಔಷಧ ವ್ಯಾಪಾರಿಗಳಲ್ಲಿ ಬೆರಳೆಣಿಕೆಯ ಕೆಲವರನ್ನು ಬಿಟ್ಟರೆ,ಔಷಧ ವ್ಯಾಪಾರಿಗಳ ಸಂಘಗಳನ್ನು ಬೆಳೆಸುವ ಉತ್ಸಾಹ ಯಾರಿಗೂ ಇಲ್ಲ.ಔಷಧ ವ್ಯಾಪಾರಿಗಳು ತಾವಾಯ್ತು ,ತಮ್ಮ ವ್ಯಾಪಾರವಾಯ್ತು ಎಂದು ಇದ್ದು ಬಿಡುವವರೇ ಜಾಸ್ತಿ.ವ್ಯಾಪಾರ ಇಲ್ಲದವರು,ಔಷಧ ವಿತರಕರು ಔಷಧ ವ್ಯಾಪಾರಿಗಳ ಸಂಘದಲ್ಲಿ ಇರಲು ಉತ್ಸುಕರಾಗಿರುತ್ತಾರೆ ಅಷ್ಟೇ.
ಪುಕ್ಕಟ್ಟೆ ಊಟ ಮತ್ತು ಗಿಫ಼್ಟಗಳಿಗಾಗಿ ಸಭೆಗೆ ಹಾಜರಾಗುವವರನ್ನು ನಾನು ನೋಡಿದ್ದೇನೆ.ಸುಲಭ ಪ್ರಚಾರಕ್ಕಾಗಿ ಸಮಾರಂಭಗಳಿಗೆ ಬರುವವರನ್ನು ಕಂಡಿದ್ದೇನೆ.ಕೆಲವೇ ಕೆಲವರನ್ನು ಬಿಟ್ಟರೆ,ರಾಜ್ಯದ 99% ಜನರಿಗೆ ಔಷಧ ವ್ಯಾಪಾರಿಗಳ ಸಂಘಗಳು ಬೇಕಾಗಿಲ್ಲ.
ತೊಂದರೆ ಬಂದಾಗ ಸಂಘಗಳನ್ನು ಅಥವಾ ನಮ್ಮ ಪತ್ರಿಕೆಯನ್ನು ಸಂಪರ್ಕಿಸುವವರಿದ್ದಾರೆ.ದೂರು ಹೇಳುತ್ತಾರೆ, ತಮ್ಮ ಹೆಸರು ಬಯಲಿಗೆ ಬರಬಾರದು ಎಂದೇ ವಿಷಯ ಪ್ರಸ್ತಾಪಿಸುತ್ತಾರೆ.ಇಂತಹ ಹೇಡಿ ಮನೋಭಾವ ಇಟ್ಟುಕೊಂಡು ಔಷಧ ವ್ಯಾಪಾರ ಮಾಡುವುದಾದರೂ ಏಕೆ ?
ದೇಶದ ಸುದ್ದಿ ಬೇಕಿಲ್ಲ ,ರಾಜ್ಯದ ಸುದ್ದಿ ಬೇಕಿಲ್ಲ.ಬರೀ ಹಣ ಎಣಿಸುವುದೊಂದೆ ಹಲವು ಔಷಧ ವ್ಯಾಪಾರಿಗಳ ಕಾಯಕವಾಗಿ ಬಿಟ್ಟಿದೆ.ಜಾಗ್ರತೆ ಯಾರಿಗೂ ಬೇಕಾಗಿಲ್ಲ. ಒಂದು ದಿನ ಪತ್ರಿಕೆಯನ್ನು ಖರೀದಿಸಿ, ಓದಲು ಸಹ ಜಿಪುಣತನ ತೊರುವವರಿದ್ದಾರೆ.ಹೀಗಾದಲ್ಲಿ ಜಾಗ್ರತೆ ಬರುವುದಾದರೂ ಹೇಗೆ ?
ಅಧಿಕಾರಿಗಳು ತಮ್ಮಂತೆ ಇದ್ದು ಬಿಟ್ಟರೆ,ಯಾವ ಸಂಘವೂ ಔಷಧ ವ್ಯಾಪಾರಿಗಳಿಗೆ ಬೇಕಾಗಿಲ್ಲ. ಅಧಿಕಾರಿಗಳು ತಮ್ಮಷ್ಟಕ್ಕೆ ತಾವು ಕಾರ್ಯ ನಿರ್ವಾಹಿಸುತ್ತಾರೆ.ಅವರ ಕರ್ತವ್ಯ ಅವರು ಮಾಡಲಿ !
ಸಂಘಗಳು ಇರುವುದು ಅಧಿಕಾರಿಗಳನ್ನು ವಿರೋಧ ಕಟ್ಟಿಕೊಳ್ಳಲು ಅಲ್ಲ.ತಮ್ಮ ಔಷಧ ವ್ಯಾಪಾರಕ್ಕೆ ತೊಡಕಾದವರ ಹೆಡಮುರಗಿ ಕಟ್ಟಲು,ಬೆಂಬಲ ಪಡೆಯಲು.
ಆದರೆ ಔಷಧ ವ್ಯಾಪಾರಿಗಳಾದವರು ಒಂದಾಗುವುದು,ಪರಸ್ಪರ ಚರ್ಚಿಸುವುದು, ಅನ್ಯೊನ್ಯತೆಯಿಂದ ಇರುವುದು ಯಾವಾಗ ? ವ್ಯವಹಾರಿಕ ಜಂಜಾಟಗಳಿಂದ ಒಂದು ದಿನವಾದರೂ ದೂರ ಇರುವುದು ಯಾವಾಗ ?
ಸ್ಟೇಷನರಿ ಅಂಗಡಿಗಳಲ್ಲಿ ,ಕಿರಾಣಿ ಅಂಗಡಿಗಳಲ್ಲಿ ,ನಕಲಿ ವೈಧ್ಯರ ಆಸ್ಪತ್ರೆಗಳಲ್ಲಿ ಮೆಡಿಸಿನ್ ಮಾರುತ್ತಾರೆ ಎಂದು ದೂರು ಹೇಳುವ ಹಲವರು,ತಮ್ಮಲ್ಲಿಗೆ ಅಧಿಕಾರಿಗಳು ಬಂದಾಗ ಈ ಬಗ್ಗೆ ಬಾಯಿ ಬಿಡುವುದಿಲ್ಲ. ಏಕೆಂದರೆ ಇವರು ಬಿಲ್ ಹಾಕಿರುವುದಿಲ್ಲ.ರಿಜಿಸ್ಟರ್ಡ್ ಫ಼ಾರ್ಮಾಸಿಸ್ಟ ಇರುವುದಿಲ್ಲ.ಅರ್ಹ ವೈಧ್ಯರಿರುವುದಿಲ್ಲ. ಇನ್ಯಾರ ಪ್ರಿಸ್ಕ್ರಿಪ್ಷನ್ ಗಳಿಗೆ ಇವರು ಔಷಧ ಮಾರಾಟ ಮಾಡಲು ಸಾಧ್ಯ ?
1)ಖರೀದಿ ಬಿಲ್ ಗಳಿಗೆ ಕ್ರಮ ಸಂಖ್ಯೆ ಕೊಟ್ಟು ತಾರೀಖುವಾರು ಜೋಡಿಸಿಲ್ಲ. 2) ಔಷಧ ಮಾರಾಟದ ಬಿಲ್ ಗಳನ್ನು ಹಾಕಿಲ್ಲ. 3) ಪ್ರಿಸ್ಕ್ರಿಪ್ಷನ್ ಗಳಿಗೆ ಡಿಸ್ಪೆನ್ಸಡ್ ಸ್ಟ್ಯಾಂಪ್ ಹಾಕುತ್ತಿಲ್ಲ. 4) ಅವಧಿ ಮೀರಿದ ಔಷಧಗಳನ್ನು ಪ್ರತ್ಯೇಕವಾಗಿ ಇಟ್ಟಿಲ್ಲ.ಇಟ್ಟಿದ್ದರೂ ಲೇಬಲ್ ಅಂಟಿಸಿಲ್ಲ.ರಿಜಿಸ್ಟರ್ಡ್ ನಲ್ಲಿ ಬರೆದಿಲ್ಲ.
ಹೀಗೆ ಹಲವು ಸಂಗತಿಗಳು ಪರಿವೀಕ್ಷಣಾ ಪುಸ್ತಕದಲ್ಲಿ ಅಧಿಕಾರಿಗಳ ಕೈಯಿಂದ ಮೂಡುತ್ತಲೇ ಹೋಗುತ್ತವೆ.ಸಾವಿರಾರು ಔಷಧ ವ್ಯಾಪಾರಿಗಳು ಔಷಧ ಮಾರಾಟ ಮಾಡುವುದು ನಕಲಿ ಅಥವಾ ಅನಧಿಕೃತ ವೈಧ್ಯರ ಪ್ರಿಸ್ಕ್ರಿಪ್ಷನ್ ಗಳ ಆಧಾರದ ಮೇಲೆ.ಹೀಗಿರುವಾಗ ಪ್ರಿಸ್ಕ್ರಿಪ್ಷನ್ ಗಳ ಮೇಲೆ ‘ಡಿಸ್ಪೆನ್ಸಡ್’ ರಬ್ಬರ್ ಸ್ಟ್ಯಾಂಪ್ ಹಾಕುವುದಾದರೂ ಹೇಗೆ ?
ಇದು ಬರೀ ನಮ್ಮ ರಾಜ್ಯದ ಸಮಸ್ಯೆಯಲ್ಲ.ಇಡೀ ದೇಶದ ಸಮಸ್ಯೆ.ಹಾಗೆ ನೋಡಿದರೆ, ಇಡೀ ದೇಶದಲ್ಲಿಯೇ ನಮ್ಮ ಕರ್ನಾಟಕ ಔಷಧ ನಿಯಂತ್ರಣ ಇಲಾಖೆ ಒಂದಿಷ್ಟು ಗೌರವ ಉಳಿಸಿಕೊಂಡಿದೆ. ಔಷಧ ಮತ್ತು ಕಾಂತಿವರ್ದಕ ನಿಯಮ-1945 ರ 64(2) ನ್ನು ಪಾಲಿಸಿ, ಲೈಸೆನ್ಸ್ ಗ್ರ್ಯಾಂಟ್ ಮಾಡಿದರೆ, ‘ಡಿಸ್ಪೆನ್ಸಡ್’ ರಬ್ಬರ್ ಸ್ಟ್ಯಾಂಪ್ ಬಳಕೆಯಾಗಬಹುದೇನೊ ? ಒಂದು ಅಂಗಡಿ ಇರಬೇಕಾದ ಸ್ಥಳದಲ್ಲಿ ಹತ್ತು ಅಂಗಡಿಗಳಿವೆ. ಕಾನೂನಿನ ಪ್ರಕಾರ ಪೈಪೋಟಿ ಔಷಧ ವ್ಯಾಪಾರ ಮಾಡಬಾರದು ಎಂದು “ಫ಼ಾರ್ಮಸಿ ಪ್ರ್ಯಾಕ್ಟೀಸ್ ರೆಗ್ಯೂಲೇಷನ್” ಹೇಳುತ್ತದೆ.ಹಾಗಿದ್ದರೆ,ನಿಯಮ- ನೀತಿಗಳ ಕೆಲಸವಾದರೂ ಏನು ?
ಇಡೀ ರಾಜ್ಯಾದ್ಯಂತ ಸಾಕಷ್ಟು ಔಷಧ ವ್ಯಾಪಾರಿಗಳು ಇದ್ದರೂ ಒಂದೇ ವೇದಿಕೆಯ ಅಡಿಯಲ್ಲಿ ಅವರು ಬರಲು ಸಾಧ್ಯವಿಲ್ಲ.ಹೀಗಾಗಿ ಗಟ್ಟಿ ನಾಯಕತ್ವ ,ಗಟ್ಟಿ ಸಂಘಗಳು ಬೆಳೆಯಲು ಸಾಧ್ಯವಿಲ್ಲ.ಔಷಧ ವ್ಯಾಪಾರಿಗಳ ನಿರಾಸಕ್ತಿ ,ಔಷಧ ವ್ಯಾಪಾರಿಗಳ ಸಂಘಗಳ ಮಸಲತ್ತು ,ಹಣದ-ಹೆಂಡದ ಅಮಲು ಯಾರನ್ನು ಒಂದಾಗಿರಲು ಬಿಡುವುದಿಲ್ಲ.
ಒಂದು ವ್ಯಾಟ್ಸಾಪ್ ಮೆಸೇಜ್ ಓದಲು ನಮ್ಮ ಔಷಧ ವ್ಯಾಪಾರಿಗಳಿಗೆ ಆಸಕ್ತಿ ಇಲ್ಲ.ನೆಟ್ ಖಾಲಿಯಾದೀತೆಂದು ಮೆಸೇಜ್ ಇರುವ ವೆಬ್‌ಸೈಟ್ ಓಪನ್ ಮಾಡದೆ,ಡಿಲಿಟ್ ಮಾಡುತ್ತಾರೆ. ಇಂತಹವರನ್ನು ಬದಲಾಯಿಸಲಾಗದು.ಪ್ರಭಲ ನಾಯಕತ್ವ ,ಪ್ರಭಲ ಸಂಘವನ್ನು ನಾವು ಕನಸ್ಸಲ್ಲೂ ಕಾಣಲಿಕ್ಕಿಲ್ಲ.ನಿರುತ್ಸಾಹದ ಭಾವನೆ ಹೊಂದಿರುವ ಔಷಧ ವ್ಯಾಪಾರಿಗಳಿಗೆ ನಾವೇನೊ ಮಾಡಿದರೂ,ಬ ದಲಾಗುವ ಲಕ್ಷಣಗಳು ಕಾಣುತ್ತಿಲ್ಲ.
ಈಗೀನ ಚೈನ್ ಸ್ಟೊರ್ಸ್ ಮತ್ತು ಜನೌಷಧಿ ಕೇಂದ್ರಗಳ ಜೊತೆಗೆ, ಇನ್ನು ಮುಂದೆ ನ್ಯಾಷನಲ್,ಮಲ್ಟಿ ನ್ಯಾಷನಲ್ ಕಂಪನಿಗಳು ಉಹಿಸಲೂ ಸಾಧ್ಯವಾಗದ ಸಂಖ್ಯೆಯಲ್ಲಿ ರಿಟೇಲ್ ಮೆಡಿಕಲ್ ಸ್ಟೊರ್ಸ್ ಗಳನ್ನು ಆರಂಭಿಸುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.ಈ ಮುಂದೆ ಸಾಮಾನ್ಯ ಔಷಧ ಮೆಡಿಕಲ್ ಸ್ಟೋರ್ಸ್ ಗಳು ಅಲ್ಲೊಂದು-ಇಲ್ಲೊಂದು ಕಂಡು ಬಂದರೆ ಹೆಚ್ಚು.
ತಾವಾಯ್ತು , ತಮ್ಮ ವ್ಯಾಪಾರವಾಯ್ತು ,ತಮ್ಮ ಸಂಸಾರವಾಯ್ತು ಎಂದು ಕುಳಿತಿರುವ ಎಲ್ಲಾ ಔಷಧ ವ್ಯಾಪಾರಿಗಳಿಗೂ ಶುಭವಾಗಲಿ. -ಅಶೋಕಸ್ವಾಮಿ ಹೇರೂರ.