
ಅವರು ಓದಲ್ಲ ! ಇವರು ಕೈಹಿಡಿದು ಓದಿಸಲಾಗಲ್ಲ !

ಔಷಧ ವ್ಯಾಪಾರ ಮತ್ತು ತಯಾರಿಕೆಗೆ ಸಂಭಂದಿಸಿದಂತೆ ಇರುವ ಕಾಯ್ದೆ ,ನಿಯಮ ಮತ್ತು ನಿಭಂದನೆಗಳು ಬಹಳ.ಅವುಗಳನ್ನು ಸಂಪೂರ್ಣವಾಗಿ ಓದದೇ ಇರುವವರೇ ಈ ವಹಿವಾಟಿಗೆ ಬರುವುದು ಹೆಚ್ಚು ಎಂಬ ಅನುಮಾನ ಬರದೇ ಇರದು.
ಮಾಡಿದ ಅಪರಾಧಕ್ಕೆ ದಂಡ ಪಾವತಿಯ ಜೊತೆಗೆ, ಜೈಲು ಶಿಕ್ಷೆಯೂ ಉಂಟು.ಇಂತಹ ಕಠಿಣ ಕಾನೂನುಗಳನ್ನೂ ಉಲ್ಲಂಘಿಸುವವರು ಇರುವುದರಿಂದಲೇ ಔಷಧ ನಿಯಂತ್ರಣ ಇಲಾಖೆಗೆ ಲಾಭ.
ಹೀಗಾಗಿ ಔಷಧ ವ್ಯಾಪಾರಿಗಳು,ತಯಾರಕರು ಕಾನೂನುಗಳನ್ನು ಅರಿಯದಿದ್ದಷ್ಟು ಒಳ್ಳೆಯದು.ಅವರು ತಪ್ಪು ಮಾಡುತ್ತಲೇ ಇರಬೇಕು ! ಅಧಿಕಾರಿಗಳು ಕೈ ಆಡಿಸುತ್ತಲೇ ಇರಬೇಕು ! ಆಗ ಮಾತ್ರ ಭಯ ಹಾಗೇ ಮುಂದುವರೆಯಲು ಸಾಧ್ಯ ! ಅಲ್ಲವೇ ?
ಔಷಧ ವ್ಯಾಪಾರಿಗಳು ಅಷ್ಟೇ, ಓದುವುದೆಂದರೆ ಅವರಿಗೆ ಅಲರ್ಜಿ.ಅವರು ಓದುವುದಿಲ್ಲ ! ಹಾಗಂತ ಅಧಿಕಾರಿಗಳು ಅವರ ಕೈ ಹಿಡಿದು ಓದಿಸಲಾಗುವುದಿಲ್ಲ.
ನಮ್ಮ ಜೇಬು ತುಂಬಿಸುವ,ಹೊಟ್ಟೆ ತುಂಬಿಸುವ,ಜೀವ-ಜೀವನ ಎರಡನ್ನೂ ನೀಡುವ ಔಷಧ ವ್ಯಾಪಾರದ ಕಾನೂನುಗಳನ್ನು ಅರಿಯುವುದು ಔಷಧ ವ್ಯಾಪಾರಿಗಳಿಗೆ ಮತ್ತು ರಿಜಿಸ್ಟರ್ಡ್ ಫ಼ಾರ್ಮಾಸಿಸ್ಟಗಳಿಗೆ ಬೇಕಾಗಿಲ್ಲ.
ಇದಷ್ಟೇ ಅಲ್ಲ ! ಫ಼ಾರ್ಮಸಿ ಕಾಯ್ದೆ ,ನಿಯಮ ಮತ್ತು ನಿಭಂದನೆಗಳ ಅರಿವು ಸ್ವತಃ ಫ಼ಾರ್ಮಾಸಿಸ್ಟಗಳಾದವರಿಗೂ ಬೇಕಾಗಿಲ್ಲ.ಹೀಗಾಗಿ ಫ಼ಾರ್ಮಸಿಸ್ಟ ಮತ್ತು ಔಷಧ ವ್ಯಾಪಾರಿ ವೃತ್ತಿಯಲ್ಲಿ ಅಜಾಗ್ರತೆಯೇ ಹೆಚ್ಚು.ಅಪರಾಧವೂ ಹೆಚ್ಚು. ತಪ್ಪು ಕಾಣಿಕೆ,ಶಿಕ್ಷೆ ಮತ್ತು ದಂಡ ಇವು ಸಹ ಹೆಚ್ಚು-ಹೆಚ್ಚು.
ಫ಼ಾರ್ಮಾಸಿಸ್ಟ ಮತ್ತು ಕೆಮಿಸ್ಟಗಳಿಗೆ ಈ ಕಾನೂನಿನ ಅರಿವು ಕನಿಷ್ಠ ಮಟ್ಟಿಗಾದರೂ ಇರಬೇಕು !
ಇಲ್ಲದೇ ಹೋದರೆ ತಪ್ಪುಗಳ ಮೇಲೆ ತಪ್ಪುಗಳು ನಡೆಯುತ್ತಲೇ ಇರುತ್ತವೆ.ತಪ್ಪುಗಳಿಗೆ ಕಪ್ಪ ಕಾಣಿಕೆ ಸಲ್ಲಿಸುವುದು ಹೆಚ್ಚುತ್ತಲೇ ಹೋಗುತ್ತದೆ.
ಔಷಧ ವ್ಯಾಪಾರಿಗಳು ಮತ್ತು ರಿಜಿಸ್ಟರ್ಡ್ ಫ಼ಾರ್ಮಾಸಿಸ್ಟಗಳು ಜಾಣರಾಗುವುದನ್ನು ಅಧಿಕಾರಿಗಳು ತಡೆಯಲಾರರು.ಆದರೆ ಜಾಣತನವನ್ನು ವ್ಯಾಪಾರಿಗಳು/ಫ಼ಾರ್ಮಾಸಿಸ್ಟಗಳು ಮೈಗೂಡಿಸಿಕೊಳ್ಳಬೇಕು ! ಇವರೇ ಸ್ವತಃ ಜಾಣರಾದರೆ,ಅಧಿಕಾರಿಗಳ ಕೆಲಸದ ಒತ್ತಡವೂ ಕಡಿಮೆಯಾಗುತ್ತದೆ.
ಸ್ವಯಂ ಪ್ರೇರಿತರಾಗಿ ಕಲಿಯದೇ ಹೋದರೆ, ಅಧಿಕಾರಿಗಳು ಒತ್ತಾಯ ಪೂರ್ವಕವಾಗಿ ಎಷ್ಟು ಅಂತಹ ಕಲಿಸಲು ಸಾಧ್ಯ.ಆಸಕ್ತಿ ಹಾಗೂ ಒತ್ತಾಯ ಎರಡೂ ಸಮಾನಾಂತರದಲ್ಲಿದ್ದರೆ,ಬದಲಾವಣೆಗಳನ್ನು ನಿರೀಕ್ಷಿಸಬಹುದು.ಆದರೆ ಅದೇ ಆಗುತ್ತಿಲ್ಲ.
ಕೆಲವು ಅಧಿಕಾರಿಗಳು ನಮ್ಮ ಹಲವು ಪ್ರಕಟಣೆಗಳನ್ನು ಖರೀದಿಸಿ,ಔಷಧ ವಲಯದ ಜನರಿಗೆ ಹಂಚಿಕೆ ಮಾಡಿದ್ದಾರೆ.ಅಧಿಕಾರಿಗಳು ಕೊಟ್ಟರೆಂದು ಕಬೋರ್ಡನಲ್ಲಿ ಆ ಪುಸ್ತಕ ಇರಿಸಿದರೆ,ಪುಸ್ತಕದಲ್ಲಿ ಇರುವುದೆಲ್ಲಾ ತಲೆಗೆ ತಾನಾಗಿಯೇ ಇಳಿದು ಬಿಡುವುದಿಲ್ಲ.ಅದಕ್ಕಾಗಿ ಅವರು ಓದಬೇಕು ! ಓದಿ ಅರಿತುಕೊಳ್ಳಬೇಕು !
ಜಾಗ್ರತೆಯಿಂದ ಅಜಾಗ್ರತೆ ದೂರವಾಗುತ್ತದೆ.ಅದಕ್ಕಾಗಿ ಅಧ್ಯಯನ ನಿರಂತರವಾಗಿರಬೇಕು.ಅದನ್ನು ಕೆಲವರಾದರೂ ಮಾಡಿದರೆ,ಹಲವರಿಗೆ ಮಾರ್ಗದರ್ಶಿಕರಾಗ ಬಹುದು !
-ಅಶೋಕಸ್ವಾಮಿ ಹೇರೂರ.