December 22, 2024
WhatsApp Image 2024-04-20 at 12.17.58

ಈ ಬೆಲೆ ಏರಿಕೆ ಎಂಬ ವಿಷಯ ಹಂತದಿಂದ ಹಂತಕ್ಕೆ ಹಾರುತ್ತಲೇ ಇರುತ್ತದೆ.ಅದು ವಸ್ತು ,ವಹಿವಾಟು, ವ್ಯಾಪಾರ, ಶುಲ್ಕ ,ಲಂಚ ಹೀಗೆ ಹಲವು ಕಡೆ ಹರಡಿ ಬಿಡುತ್ತದೆ.

ಈಗ ನೋಡಿ ಔಷಧ ವ್ಯಾಪಾರದ ಲೈಸೆನ್ಸ್ ಪಡೆಯಲು ಬೇಕಾಗುವ ಶುಲ್ಕ ರೂ.3000/- : ರೂ.6000/-: ಇದ್ದರೂ,ಲೈಸೆನ್ಸ್ ಕೊಡಲು ಅಧಿಕಾರಿಗಳು ಪಡೆಯುವ ಲಂಚದ ಮೊತ್ತ ರೂ.52 ಸಾವಿರಕ್ಕೆ ಏರಿದೆ.ರೂ.50 ಸಾವಿರ ಮಾಮೂಲು ಹಾಗೂ ರೂ.2000/- ಟಿ.ಎ.ಮತ್ತು ಡಿ.ಎ.,ಅಂತೆ ಅಷ್ಟೇ.

ರಾಜ್ಯದ ಬಹುತೇಕ ಸಹಾಯಕ ಔಷಧ ನಿಯಂತ್ರಕರ ವೃತ್ತಗಳಲ್ಲಿ ಇದೆ ಸ್ಥಿತಿ ಇದೆಯಂತೆ.ಎಲ್ಲಾ ವಸ್ತು , ವಗೈರೆಗಳ ಬೆಲೆ ಜಾಸ್ತಿಯಾದಂತೆ ಲಂಚದ ಪಾವತಿಯಲ್ಲೂ ಸಹಜವಾಗಿ ಜಾಸ್ತಿಯಾದಂತಿದೆ.ನಮ್ಮ ಔಷಧ ವ್ಯಾಪಾರಕ್ಕೆ ಬರುವಂತಹವರಿಗೂ ಇದು ಒಗ್ಗಿ ಹೋಗಿದೆ.ಅವರೂ ಚೌಕಾಸಿ ಮಾಡುತ್ತಿಲ್ಲ.ಒಂದೇ ಕಂತಿನಲ್ಲಿ ಹಣ ಪಾವತಿ ಮಾಡುತ್ತಿದ್ದಾರೆ.ಅಲ್ಲಿಗೆ ಔಷಧ ವ್ಯಾಪಾರಿ ಮತ್ತು ಅಧಿಕಾರಿ ಇಬ್ಬರೂ ಖುಷ್.

ಲೈಸೆನ್ಸ್ ಪಡೆದಾದ ಮೇಲೆ ಎಲ್ಲಾ ಖರ್ಚು-ವೆಚ್ಚಗಳನ್ನು ತೂಗಿಸಲು ಔಷಧ ವ್ಯಾಪಾರಿಗಳು ಪ್ರಪಗಂಡಾ ಮತ್ತು ಜನರಿಕ್ ಔಷಧಗಳ ಮೇಲೆ ಅವಲಂಭಿತರಾಗಿ ವ್ಯವಹಾರ ನಡೆಸುವ ಅನಿವಾರ್ಯತೆಗೆ ಈಡಾಗಿ ಬಿಡುತ್ತಾರೆ.ಮುಂದಿನ ಅವದಿಯಲ್ಲಿ ಅಲ್ಲಿಗೆ ಬರುವ ಅಧಿಕಾರಿಗಳು ಈ ಔಷಧಗಳನ್ನು ಕಂಡು ತಮ್ಮ ವರ್ಷದ ವಾಡಿಕೆಯ ‘ಮಾಮೂಲು’ ದರವನ್ನು ಹೆಚ್ಚಿಸಿ ಬಿಡುತ್ತಾರೆ.

ಪಾಲಿಸಲು ಅಸಾಧ್ಯವಾದ ಕಾನೂನುಗಳು ಇದ್ದಾಗ್ಯೂ ಹೊಸ ಔಷಧ ಅಂಗಡಿಗಳು ಆರಂಭವಾಗುತ್ತಿವೆ.ಲೈಸೆನ್ಸ್ ಗಳು ಹೆಚ್ಚುತ್ತಿವೆ.ಯಾವುದಕ್ಕೂ ಕಡಿವಾಣ ಇಲ್ಲ. ಕಡಿವಾಣ ಹಾಕುವ ತಾಕತ್ತು ಸಧ್ಯ ಯಾರಿಗೂ ಇಲ್ಲ.

ಔಷಧ ವ್ಯಾಪಾರಿಗಳ ಸಂಘಟನೆಗಳಲ್ಲಿ ಹಿಡಿತವಿಲ್ಲ. ಇದ್ದರೂ ಸಂಘಗಳ ಹಿಡಿತವನ್ನು ತಪ್ಪಿಸಲು ಅಧಿಕಾರಿಗಳು ನಿಪುಣರು.ಔಷಧ ವ್ಯಾಪಾರಿ ಮುಖಂಡರನ್ನು ನೆಚ್ಚದೆ,ಅಧಿಕಾರಿಗಳನ್ನು ಮೆಚ್ಚುವ ಔಷಧ ವ್ಯಾಪಾರಿಗಳು ಹೆಚ್ಚಾಗಿ ಔಷಧ ವ್ಯಾಪಾರಿ ಸಂಘಗಳು ಅಸಂಘಟಿತ ವಲಯಗಳಾಗಿ ಬದಲಾಗುತ್ತಿವೆ.

ಅಧಿಕಾರಿಗಳು ಮತ್ತು ಔಷಧ ವ್ಯಾಪಾರಿ ಸಂಘಗಳು ಉತ್ತರ-ದಕ್ಷಿಣವಾಗುತ್ತಿವೆ.ಸರಕಾರ-ಇಲಾಖೆಯ ನಡುವೆ ವ್ಯತ್ಯಾಸ ! ಮೇಲಾಧಿಕಾರಿಗಳು-ಅಧಿಕಾರಿಗಳ ನಡುವೆ ವ್ಯತ್ಯಾಸ !

ಇಲಾಖೆಯಲ್ಲಿ ಬಿಗಿಯಾದ ಹಿಡಿತ,ಸಡಿಲವಾಗುತ್ತಿದೆ. ಆಡಳಿತಾತ್ಮಕ ಗೊಂದಲಗಳೇ ಹೆಚ್ಚಾಗುತ್ತಿವೆ. ಕಡಿಮೆಯಾಗುತ್ತಿರುವ ಅಧಿಕಾರಿಗಳಲ್ಲಿನ ಬದ್ದತೆ ! ಹೆಚ್ಚುತ್ತಿರುವ ಲೈಸೆನ್ಸ್ ಗಳು ! ಎಲ್ಲಾ ಹಣದ ಕಂತೆಗಳಾಗಿ ಬದಲಾಗುತ್ತಿವೆ.

ಕುರುಡು ಕಾಂಚಣ ಕುಣಿಯಿತಲಿತ್ತೋ,ಕಾಲಿಗೆ ಬಿದ್ದವರ ತುಳಿಯಿತಲಿತ್ತೋ !

-ಅಶೋಕಸ್ವಾಮಿ ಹೇರೂರ.

About The Author

Leave a Reply