ಒಳ್ಳೆಯವರು ಎಂದು ಹೇಳಿಕೊಳ್ಳುವುದೇ ಒಂದು ಗೀಳು !
ಬಹಳಷ್ಟು ಜನ ತಾವು ಒಳ್ಳೆಯವರು ಎಂದು ತೋರಿಸಿಕೊಳ್ಳಲು ಹಲವಾರು ಪ್ರಯತ್ನ ಮಾಡುತ್ತಲೇ ಇರುತ್ತಾರೆ.ಹಾಗೇ ತಾವು “ಸ್ಟೇಟ್ ಫ಼ಾರ್ವರ್ಡ” ಎಂದು ಹೇಳಿಕೊಳ್ಳುವುದನ್ನು ಅವರು ಎಂದೂ ಮರೆಯುವುದಿಲ್ಲ.
ತಾವು ಸ್ಟೇಟ್ ಫ಼ಾರ್ವರ್ಡ ಎಂದು ಹೇಳಿಕೊಳ್ಳುವವರೇ ನೇರ ನಡೆ-ನುಡಿಯನ್ನು ಅಳವಡಿಸಿಕೊಂಡವರಾಗಿರುವುದಿಲ್ಲ.ಸಮಾಜದ ಜಂಜಾಟ,ಆಗು-ಹೋಗುಗಳ ಬಗ್ಗೆ ಚಕಾರ ಎತ್ತದವರು,ಹರ್ತಾಳ-ಹೋರಾಟ ನಡೆಯುತ್ತಿರುವುದನ್ನು ನೋಡಿಯೂ ತಲೆ ತಗ್ಗಿಸಿಕೊಂಡು ಹೋಗುವವರು,ಯಾವುದಾದರೂ ಕೆಟ್ಟ ಘಟನೆ ನಡೆಯುತ್ತಿದ್ದರೂ ಅತ್ತ ಕಡೆ ತಿರುಗಿಯೂ ನೋಡದವರು ಒಳ್ಳೆಯವರು !
ಅನ್ಯಾಯ-ಆಕ್ರಮಗಳನ್ನು ವಿರೋಧಿಸುವವರನ್ನು , ಹೋರಾಟ-ಹರ್ತಾಳಗಳಲ್ಲಿ ಭಾಗವಹಿಸುವವರನ್ನು ,ನ್ಯಾಯ ಕೇಳುವವರನ್ನು ಮಾತ್ರ ಒಳ್ಳೆಯವರ ಪಟ್ಟಿಗೆ ಯಾರೂ ಸೇರಿಸುವುದಿಲ್ಲ.
ತಾವಾಯ್ತು ,ತಮ್ಮ ಮನೆ- ಮಡದಿ-ಮಕ್ಕಳು ಎಂದು ಇರುವವರು ಮಾತ್ರ ಒಳ್ಳೆಯವರು ! ತಾವು
ಒಳ್ಳೆಯವರು ಎಂದು ಹೇಳಿಕೊಳ್ಳುತ್ತಾ ತಿರುಗಾಡುವ ಇಂತಹವರೇ, ಹೋರಾಟ-ಹಾರಾಟ ಮಾಡುವವರನ್ನು “ವಿಲನ್” ಪಟ್ಟಿಗೆ ಸೇರಿಸಿ ಬಿಡುತ್ತಾರೆ.
ಒಳ್ಳೆಯವರೆಂದು ಕರೆಯಿಸಿಕೊಳ್ಳುವ ಗೀಳು ಹಚ್ಚಿಕೊಂಡವರು ನಿಜವಾಗಿಯೂ ಹೇಡಿಗಳು ! ಸಮಾಜ-ದೇಶ ಎನ್ನದವರು ಇದ್ದರೆಷ್ಟು , ,ಇರದಿದ್ದರೆಷ್ಟು !
ಕೆಲವು ವಿದೇಶಿಗಳು ಭಾರತದ ಜನರನ್ನು ಸೇರುವುದಿಲ್ಲವಂತೆ.ಬ್ರಿಟಿಷ್ ಸೈನ್ಯ ಸೇರಿ ಭಾರತೀಯರನ್ನೇ ಕೊಂದವರು ನೀವು ಎಂದು ಭಾರತೀಯರ ಮೇಲೆ ಅಪಾದನೆ ಮಾಡುತ್ತಾರೆಯಂತೆ. ಅಷ್ಟಕ್ಕೂ ಇದು ಸುಳ್ಳೇನೂ ಅಲ್ಲವಲ್ಲ !
ಕೆಲವು ವ್ಯಾಪಾರಿಗಳು “ಅಧಿಕಾರಿಗಳು ನಮ್ಮ ಬಳಿ ಬರುವುದೇ ಇಲ್ಲ , ಏನಿದ್ದರೂ ಪ್ರತಿ ವರ್ಷ ಅವರಿಗೆ ತಲುಪಿಸುವುದನ್ನು ತಲುಪಿಸಿ ಬಿಡುತ್ತೇವೆ” ಎಂದು ದೊಡ್ಡದಾಗಿ ಹೇಳಿಕೊಳ್ಳುತ್ತಾರೆ ಆದರೆ ಅವರು ಮಾಡುತ್ತಿರುವ ಕೆಲಸ “ಹಾದರ” ಆಗಿದ್ದರೂ ತಾವು ಒಳ್ಳೆಯವರು ಎಂದು ಕರೆಯಿಸಿಕೊಳ್ಳುವ ಪ್ರಯತ್ನಮಾಡುತ್ತಲೇ ಇರುತ್ತಾರೆ.
ಗುಂಡು- ತುಂಡು, ಮಂಚದ ಏರ್ಪಾಡು ಮಾಡುವವರು ಅಧಿಕಾರಿಗಳಿಂದ ಒಳ್ಳೆಯವರು ಎನಿಸಿಕೊಳ್ಳುತ್ತಾರೆ.ರಸ್ತೆಗೆ ಅರ್ದಂಭರ್ದ ಟಾರ್ ಹಾಕಿದವನು, ಅಲ್ಲಿಷ್ಟು-ಇಲ್ಲಿಷ್ಟು ಮಣ್ಣು ಹಾಕಿ ರಸ್ತೆ ಮಾಡಿದೆ ಎಂದು ಲಂಚ ಪಾವತಿಸುವವರೂ ಒಳ್ಳೆಯವರು !
ಹಾದರ ಮಾಡದವನು ,ಅಧಿಕಾರಿಗಳ-ಅಧಿಕಾರಸ್ಥರ ಮುಂದೆ ಸೋಗಲಾಡಿತನ ಮಾಡದವನು, ಒಳ್ಳೆಯವನು ಎಂದು ಕರೆಯಿಸಿಕೊಳ್ಳಲಾರ.
ತಾವು ಅವರ ಅಭಿಮಾನಿ,ನಿಷ್ಠೆ ಉಳ್ಳವನು ಎನ್ನುತ್ತಲೇ ಅವರನ್ನು Miss use ಮಾಡಿಕೊಳ್ಳುವನೂ ಸಹ ಒಳ್ಳೆಯವನು ಎಂಬ ಪಟ್ಟಕ್ಕೇರಿ ಬಿಡುತ್ತಾನೆ.
ಒಳ್ಳೆಯದನ್ನು ಹೇಳುವವನು,ಒಳ್ಳೆಯದನ್ನು ಮಾಡುವವನು ಒಳ್ಳೆಯವನಲ್ಲ ! ಒಳ್ಳೆಯದನ್ನು ಮಾಡುವವನಿಗೆ ಪ್ರೋತ್ಸಾಹ ಇಲ್ಲ ! ಪ್ರಶಂಸೆ ಇಲ್ಲ !
ಒಳ್ಳೆಯವನು ಏನಿಸಿಕೊಳ್ಳಲು ಬೇರೆ ಏನೂ ಬೇಕಾಗಿಲ್ಲ , ಎಲ್ಲಾ ಅನ್ಯಾಯವನ್ನು ಮತ್ತು ಆಕ್ರಮವನ್ನು ಸಹಿಸಿ “ಹೇಡಿ” ಯಾಗಿ ಬಿಟ್ಟರೆ ಸಾಕು ಎಲ್ಲರ ಬಾಯಲ್ಲೂ ಅವನು ಒಳ್ಳೆಯವನು !
ಒಳ್ಳೆಯವರು ಏನಿಸಿಕೊಳ್ಳುವ ಗೀಳು ಇರುವವರು, ಮೇಲೆ ಪ್ರಸ್ಥಾಪ ಮಾಡಿದ ಎಲ್ಲಾ ಕೆಲಸಗಳನ್ನು ಮಾಡಬೇಕು.ಇಲ್ಲವೇ ಹೇಡಿ ಜೀವನ ನಡೆಸಬೇಕು ಅಷ್ಟೇ !
-ಅಶೋಕಸ್ವಾಮಿ ಹೇರೂರ