ಕರ್ನಾಟಕ ರಾಜ್ಯದ ಔಷಧ ನಿಯಂತ್ರಣ ಇಲಾಖೆಯಲ್ಲಿ ಹಲವು ಅದ್ವಾನಗಳು ನಡೆಯುತ್ತಿದ್ದು, ನ್ಯಾಯಾಲದ ಕಟ ಕಟೆ ಏರಬೇಕಾದ ಹಲವು ಕಡತಗಳು ಮುಚ್ಚಿ ಹೋಗುತ್ತಿರುವ ಕಳವಳಕಾರಿ ಸುದ್ದಿಗಳು ಕೇಳಿ ಬಂದಿವೆ.
ತಮ್ಮ ಇಲಾಖೆ ಅಥವಾ ಅಧಿಕಾರಿಗಳ ಮೇಲೆ ದೂರು ಕೊಟ್ಟವರ ಮೇಲೆ ಏಕಾ ಏಕಿ ಏರಿ ಹೋಗುವ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು, ಈಗ ತಾವೇ ಬಾಯಿ ಮುಚ್ಚಿ ಕುಳಿತು ಕೊಂಡ ವರದಿಗಳು ಪತ್ರಿಕೆಗೆ ಲಭ್ಯವಾಗಿವೆ.
ಇಲಾಖೆಯ ಲಂಚ ಬಾಕತನದ ಬಗ್ಗೆ ದೂರು ಕೊಟ್ಟ ಕಾರಣಕ್ಕಾಗಿ ಓರ್ವ ಔಷಧ ವ್ಯಾಪಾರಿಯ ಮೂರು ಅಂಗಡಿಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಅಲ್ಲಿ ಪರೀಕ್ಷಾರ್ಥ ಖರೀದಿ (ಟೆಸ್ಟ್ ಪರ್ಚೇಸ್) ನಡೆಸಿ, ಆ ವ್ಯಕ್ತಿಯ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಹುನ್ನಾರ ಹೂಡಿದ್ದರು.ಆದರೆ ಆ ವ್ಯಾಪಾರಿ ಫ಼ೇಸ್ ಬುಕ್ ಲೈವ್ ಮೂಲಕ ಇವರ ಬಂಡವಾಳ ಬಯಲು ಮಾಡಿದ್ದಕ್ಕೆ ಹೆದರಿದ ಅಧಿಕಾರಿಗಳು ಪರೀಕ್ಷಾರ್ಥ ಖರೀದಿ ನಡೆಸಿಯೂ ತೆಪ್ಪಗೆ ಕೂತಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಅಸಹಾಯಕರ ಮೇಲೆ,ಅಸಮರ್ಥರ ಮೇಲೆ ದಾಳಿ ಮಾಡಿ ತಮ್ಮ ಅಟ್ಟಹಾಸ ತೋರುತ್ತಿದ್ದ ಅಧಿಕಾರಿಗಳು, ತಮ್ಮ ವಿರುದ್ಧ ತೊಡೆ ತಟ್ಟಿ ನಿಂತ ಅಂಗಡಿಯ ಮಾಲೀಕನ ಬಡಕ್ಕೆ ಕೈಹಾಕಲು ಹೋಗಿ, ತಮ್ಮ ಬುಡಕ್ಕೆ ನೀರು ತಂದು ಕೊಂಡ ಹಳೆಯ ಸುದ್ದಿ ಈಗ ಬಯಲಿಗೆ ಬಂದಿದೆ.
ಯಾವುದಾದರೂ ಔಷಧ ವ್ಯಾಪಾರಿಗಳ ಸಂಘ ಗಟ್ಟಿಯಾಗಿದೆ ಎಂದ ಕೂಡಲೇ ಅಧಿಕಾರಿಗಳು ಅದನ್ನು ಕೆಡಿಸಿ,ಹದೆಗೆಡಿಸುತ್ತಾರೆ.ತಮಗೆ ಅನುಕೂಲ ಮಾಡಿಕೊಡುವ ಸಂಘ ಅದಾಗಿದ್ದರೆ ರಮ್,ವಿಸ್ಕಿ, ಬ್ತ್ಯಾಂಡಿ ಎಂದು ಆಯ್ಕೆ ಮಾಡಿಕೊಂಡು,ಔಷಧ ವ್ಯಾಪಾರಿಗಳ ಜೇಬಿನಿಂದ ಖರ್ಚು ಹಾಕಿಸಿ, ತಿಂದುಂಡು ಹಾಯಾಗಿರುತ್ತಾರೆ.ಸಂಘದ ಪದಾಧಿಕಾರಿಗಳ ತಲೆಗಳಲ್ಲಿ ಹುಳ ಬಿಟ್ಟು ,ಇನ್ಸಪೆಕ್ಷನ್ ಮಾಡದೆ,ಅವರ ಮೂಲಕ ಮಾಮೂಲು ಸಂಗ್ರಹಿಸಿ,ಹಾಯಾಗಿ ಕಾಲ ಕಳೆಯುತ್ತಾರೆ.
ಕೇವಲ 15-20 ದಿನಗಳ ಕಾಲ ಒಂದು ಮೆಡಿಕಲ್ ಶಾಪ್ ನಲ್ಲಿ ರಿಜಿಸ್ಟರ್ಡ ಫ಼ಾರ್ಮಸಿಸ್ಟ ಆಗಿದ್ದ ನನ್ನ ಮೇಲೆ ಒಂದುವರೆ ವರ್ಷದ ನಂತರ ಯಾವ ಟೆಸ್ಟ್ ಪರ್ಚೇಸ್ ಇಲ್ಲದೆ,ಹಳೆಯ ಸೇಲ್ಸ್ ಬಿಲ್ ಸೃಷ್ಟಿಸಿ,ಕೇಸ್ ಹಾಕಿದ ಧುರಾತ್ಮರೂ ಇಲಾಖೆಯಲ್ಲಿದ್ದಾರೆ.
ಈ ಪ್ರಕರಣ ಕುಷ್ಟಗಿ ನ್ಯಾಯಾಲದಲ್ಲಿ ವಜಾ ಆಗಿದ್ದರೂ, ಕೊಪ್ಪಳ ಜಿಲ್ಲಾ ನ್ಯಾಯಾಲಕ್ಕೆ ಅಪೀಲು ಮಾಡಿ,ತಮ್ಮ ದುಷ್ಟ ಕುಕೃತ್ಯವನ್ನು ಬಯಲು ಮಾಡಿಕೊಂಡರು. ಅಲ್ಲಿಯೂ ಪ್ರಕರಣ ವಜಾ ಆಗಿರುವುದರಿಂದ ಈಗ ಹೈಕೋರ್ಟ್ ನಲ್ಲಿ ಅಪೀಲು ಮಾಡುವ ಹುನ್ನಾರ ನಡೆಸಿದ್ದಾರೆ.
ತಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣವನ್ನು ಸಹ ನನ್ನ ಮೇಲೆ ದಾಖಲಿಸಿ,ತಮ್ಮ ಹಲಾಲ ಕೋರತನವನ್ನು ತೋರಿಸಲು ಹೋಗಿ,ಮರ್ಯಾದೆ ಕಳೆದುಕೊಂಡರೂ ಈ ಅಧಿಕಾರಿಗಳ ಅಟ್ಟಹಾಸ ಇನ್ನೂ ಮುಂದುವರೆದಿದೆ.
ಇಂತಹ ಹಲವು ಭ್ರಷ್ಟರ ,ನೀಚಾತಿ ನೀಚರ ತಾಣವಾಗಿರುವ ಔಷಧ ನಿಯಂತ್ರಣ ಇಲಾಖೆ,ಇದೀಗ ಯಾರ ನಿಯಂತ್ರಣದಲ್ಲಿಯೂ ಇಲ್ಲ.
ಸಾರಾ ಸಗಟಾಗಿ ಹಗಲು ದರೋಡೆಯಲ್ಲಿ ನಿರತರಾಗಿರುವ,ಧರ್ಪ,ಸೊಕ್ಕಿನಿಂದ ವರ್ತಿಸುವ ಈ ಅಧಿಕಾರಿ ವರ್ಗ ಲೈಸೆನ್ಸ್ ಇಲ್ಲದೆ,ಔಷಧ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುವುದೇ ಇಲ್ಲ.ಈ ಬಗ್ಗೆ ಮೇಲಾಧಿಕಾರಿಗಳ ಅದೇಶವನ್ನೂ ಅವರು ಪರಿಗಣಿಸಿಲ್ಲ , ಪರಿಗಣಿಸುವುದಿಲ್ಲ.
ಬರೀ ಔಷಧ ವ್ಯಾಪಾರಿಗಳೇ ಈ ಅಧಿಕಾರಿಗಳಿಗೆ ಟಾರ್ಗೆಟ್ ! ಔಷಧ ವ್ಯಾಪಾರಿಗಳ ಅಣ್ಣ-ತಮ್ಮಂದಿರು ಪಾಲು ಕೇಳುವಂತೆ ಅಧಿಕಾರಿಗಳು ವ್ಯಾಪಾರಿಗಳಿಂದ ಕೇಳುತ್ತಾರೆ.ಲಂಚ ಪಡೆಯುವ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ಕೊಟ್ಟರೂ ಅವರು ದಾಖಲೆಯನ್ನು ಕೇಳುತ್ತಾರೆ. ಹಾದರಕ್ಕೆ ಸಾಕ್ಷಿಯಾದರೂ ಎಲ್ಲಿಂದ ಸಿಕ್ಕೀತು ?
ಕೊಪ್ಪಳದ ಎ.ಡಿ.ಸಿ.ಯಾಗಿ ಬಂದಿದ್ದ ಸಿ.ಕುಮಾರ್ ನನ್ನು ಹಗಲು-ರಾತ್ರಿ ಎನ್ನದೇ ಕುಡಿಸಿ-ತಿನ್ನಿಸಿ,ಹದಗೆಡಿಸಿದ್ದೂ ಅಲ್ಲದೆ, ನನ್ನ ಬೆಂಬಲಿಗರ ಮೇಲೆ ಛೂ ಬಿಟ್ಟದ್ದೂ ಮಾತ್ರವಲ್ಲದೇ ನನ್ನ ವಿರುದ್ಧ ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ಬಂದ ಕೇರ ಫ಼್ರೀ ಶ್ರೀನಿವಾಸ್,ಮರಿ ವೀರಪ್ಪನ್ ಖ್ಯಾತಿಯ ದಿವಂಗತ ಎನ್.ವಡಿವೇಲು ಇವರಿಗೆ ಆಧರ ಆತಿಥ್ಯ ತೋರಿದ ಔಷಧ ವ್ಯಾಪಾರಿಗಳು ಗಂಗಾವತಿಯಲ್ಲಿದ್ದಾರೆ.ಇನ್ನೂ ಬೇರೆ ಬೇರೆ ಕಡೆ ಇನ್ನು ಹ್ಯಾಗ್ಯಾಗೆ ಇರಬಹುದು.
ಈ ಕಾರಣಕ್ಕಾಗಿಯೇ ಔಷಧ ವ್ಯಾಪಾರಿಗಳ ಸಡಿಲು ಅಧಿಕಾರಿಗಳಿಗೆ ಸಿಕ್ಕಿದೆ.ಭ್ರಷ್ಟ ಅಧಿಕಾರಿಗಳ ಜೊತೆಗೆ ಕೆಟ್ಟ ಔಷಧ ವ್ಯಾಪಾರಿಗಳೂ ಇರುತ್ತಾರೆ.ಅದಕ್ಕಾಗಿಯೇ ಹಾವು ಏಣಿಯಾಟ ಮುಂದುವರೆದಿದೆ, ಮುಂದುವರೆಯುತ್ತದೆ…
ಔಷಧ ವ್ಯಾಪಾರಿಗಳು ಧೈರ್ಯ ತಂದು ಕೊಳ್ಳದ ಹೊರತು,ಈ ವ್ಯವಸ್ಥೆ ಬದಲಾಗುವುದಿಲ್ಲ.ವ್ಯಾಪಾರಿಗಳ ಹೇಡಿತನವೇ ಅಧಿಕಾರಿಗಳಿಗೆ ಭಂಡವಾಳ.ಅವರಿವರ ಧೈರ್ಯದ ಮೇಲೆ ಅದೆಷ್ಟು ದಿನ ಈ ಔಷಧ ವ್ಯಾಪಾರಿಗಳು ಬದುಕೀಯಾರು ?
“ಧೈರ್ಯ” ಎಂಬುದು ಕೈಗಡ ಕೊಡುವಂತಹದಲ್ಲ.ಅದು ತಾನು ತಾನಾಗಿಯೇ ಪ್ರತಿಯೊಬ್ಬರಲ್ಲೂ ಹುಟ್ಟಿಕೊಳ್ಳಬೇಕು.ಹೇಡಿತನವನ್ನು ಹೊರ ಹಾಕಿದ ನಂತರವೇ ಧೈರ್ಯ ಮನೆ ಮಾಡಲು ಸಾಧ್ಯ ! ಅಲ್ಲಿಯವರೆಗೂ ಡೊಗ್ಗು ಸಲಾಮು ಹೊಡೆಯುವುದು ತಪ್ಪುವುದಿಲ್ಲ.
-ಅಶೋಕಸ್ವಾಮಿ ಹೇರೂರ.