December 23, 2024
IMG-20221027-WA0002

ಬದಲಾವಣೆಯ ಬದುಕು ಕಟ್ಟಿಕೊಳ್ಳೊಣ !

ಪಕ್ಷಿಗಳ ಬದುಕನ್ನು ನೋಡಿದಾಗ, ಬಹುತೇಕ ಪಕ್ಷಿಗಳು ಸಾಮಾನ್ಯವಾಗಿ ಮರದ ಪೊಟರೆಯಲ್ಲಿ , ಕೊಂಬೆಗಳಲ್ಲಿ ಅಥವಾ ಕಟ್ಟಡದ ಯಾವುದೋ ಮೂಲೆಯಲ್ಲಿ ವಾಸಿಸುತ್ತವೆ.ಆದರೆ ತಮ್ಮ ಸಂತಾನೋತ್ಪತ್ತಿಯ ಸಮಯದಲ್ಲಿ ಮಾತ್ರ ಗೂಡು ಕಟ್ಟುತ್ತವೆ. ಆ ಗೂಡಿನಲ್ಲೇ ಮೊಟ್ಟೆಯನ್ನು ಇಟ್ಟು ಮರಿಮಾಡುತ್ತವೆ. ಅವುಗಳಿಗೆ ಗುಟುಕು ನೀರು,ಆಹಾರ ನೀಡಿ ಬೆಳೆಸುತ್ತವೆ. ಮರಿಗಳು ರೆಕ್ಕೆ ಬಲಿತು ಹಾರಲು ಕಲಿತ ನಂತರ ಅವುಗಳನ್ನು ತಮ್ಮ ಪಾಡಿಗೆ ಬದುಕಲಿ ಎಂದು ಬಿಟ್ಟು ಬಿಡುತ್ತವೆ.

ಪಕ್ಷಿಗೂ ಮಾತೃ ವಾತ್ಸಲ್ಯ , ಜವಾಬ್ದಾರಿ ಇರುವುದರಿಂದ  ತಾವು ಹೇಗಿದ್ದರೂ ಸರಿ ಮರಿಗಳಿಗಾಗಿ ಕಷ್ಟಪಟ್ಟು ಗೂಡನ್ನು ಕಟ್ಟುತ್ತವೆ.ಅವು ಹಾರಲು ಕಲಿತ ನಂತರ ಮರಿಗಳಿಗೆ ಬದುಕುವ ಸ್ವಾತಂತ್ರ್ಯವನ್ನು ನೀಡುತ್ತವೆ. 

ಆದರೆ ಮನುಷ್ಯರಾದ ನಾವು ಮಕ್ಕಳ ವಿಷಯದಲ್ಲಿ ನಡೆದುಕೊಳ್ಳುತ್ತಿರುವುದು…ಹೀಗಿಲ್ಲ.

ನಡೆಯಲು ಕಲಿತಿರುವ ಮಕ್ಕಳನ್ನೂ ಕೈಹಿಡಿದು ಕೊಂಡೆ ಸಾಗುತ್ತಿದ್ದೇವೆ. ಕುಂತಲ್ಲಿ , ನಿಂತಲ್ಲಿ ಮಕ್ಕಳ ಬಗ್ಗೆಯೇ ಚಿಂತಿಸುತ್ತೇವೆ.ನಾವು ಮಾತ್ರವಲ್ಲ , ಜೊತೆಗೆ ಅವರನ್ನೂ ಒತ್ತಡದಲ್ಲಿ ಸಿಕ್ಕಿ ಹಾಕಿಸುತ್ತೇವೆ. ನಾವು ದುಡಿಯುವ ಪ್ರತಿ ಆಸ್ತಿಯ ಮೇಲೇ ಮಕ್ಕಳ ಹೆಸರನ್ನೇ ಕೆತ್ತುತ್ತಿದ್ದೇವೆ. ಅದ್ಯಾವ ಪರಿ ಎಂದರೆ ರುಚಿಸುವುದನ್ನು ತಿನ್ನದೆ,ಉತ್ತಮ ಬಟ್ಟೆ ತೊಡದೆ, ಯಾವ ಸುಖವನ್ನು ಅನುಭವಿಸದೆ, ಸರ್ವವನ್ನು ಮಕ್ಕಳಿಗೆಂದೇ ಮೀಸಲಿಡುತ್ತಿದ್ದೇವೆ. 

ಸಮಾಜದಲ್ಲಿ ಕೆಟ್ಟ ಹೆಸರು ಸಂಪಾದಿಸಿಯೋ ಅಥವಾ  ಪರಿಶ್ರಮದ ಮೂಲಕವೋ ಹೇಗೋ ದುಡ್ಡು ಮಾಡಿ, ಹಣ, ಆಸ್ತಿ, ಅಂತಸ್ತುಗಳನ್ನು ಅವರಿಗೆಂದೇ ಮೀಸಲಿರುಸುತ್ತೇವೆ.ಆದರೆ ಪ್ರಾಣಿ-ಪಕ್ಷಿಗಳು ಹಾಗಲ್ಲ. ಯಾವ ಹುಲಿ,ಸಿ೦ಹ,ಚಿರತೆಗಳು ತಮ್ಮ ಮರಿಗಳಿಗಳಿಗಾಗಿ ದೊಡ್ಡ ಗುಹೆ ಮಾಡಿಟ್ಟು ಹೋಗುವುದಿಲ್ಲ , ಕೇವಲ ಬೇಟೆಯಾಡಿ ಬದುಕುವುದ್ದನ್ನಷ್ಟೇ ಕಲಿಸುತ್ತವೆ.ಯಾವ ಪಕ್ಷಿಯೂ ತನ್ನ ಮರಿಗಳಿಗೆ ಕಾಳುಗಳ ರಾಶಿಯನ್ನು ಬಿಟ್ಟು ಹೋಗುವುದಿಲ್ಲ, ಹುಡುಕಿ ಹೆಕ್ಕಿ ತಿನ್ನುವುದನ್ನು ಮಾತ್ರ ಕಲಿಸುತ್ತವೆ.

ಮಕ್ಕಳನ್ನು ಓದಿಸುವ ಕಾರಣ ಹೇಳಿ, ಹಳ್ಳಿಯನ್ನು, ಹುಟ್ಟಿ ಬೆಳೆದಮನೆಯನ್ನು,ಸಂಬಂಧಿಕರನ್ನು, ನಮಗಾಗಿ ಜೀವ ತೆಯ್ದ ಹೆತ್ತವರನ್ನು ಬಿಟ್ಟು ಬಂದು, ಮಕ್ಕಳ ಮದುವೆಯಾದರೂ ಅತ್ತ ತಿರುಗಿ ನೋಡುವುದಿಲ್ಲ…

ಮಕ್ಕಳು ಕೇಳಿದ್ದನೆಲ್ಲಾ ಕೊಡಿಸುತ್ತೇವೆ.ಒಡಹುಟಿದವರ ಕಷ್ಟ-ಕಾರ್ಪಣ್ಯಗಳನ್ನು ಕೇಳದೆ, ಮೌನವಾಗಿರುತ್ತೇವೆ. ಅದರ ಬದಲು,ಎಲ್ಲರ ಜೊತೆ ವಿಶಾಲ ಮನೋಭಾವದಿಂದ ಬದುಕಿದರೇ ಸಂಬಂಧಗಳು ಇನ್ನೂ ಗಟ್ಟಿಯಾಗುತ್ತವೆ.ಹೀಗೆ ಬದುಕದಿದ್ದರೆ, ಇದಕ್ಕೆ ಮುಂದೊಂದು ದಿನ ಪಶ್ಚಾತಾಪ ಪಡಬೇಕಾಗುತ್ತದೆ.

ಮಕ್ಕಳು ದಾರಿ ತಪ್ಪಿದಾಗ ತಿದ್ದಬೇಕಾದ್ದು ಪೋಷಕರ ಕೆಲಸ.ಆದರೆ ಅವರಿಗಾಗಿಯೇ ನಾವು ದಾರಿಯನ್ನೇ ನಿರ್ಮಿಸಲು ಹೊರಡುವುದು ಮೂರ್ಖತನ. ಅವರ ಭವಿಷ್ಯಕ್ಕಾಗಿ, ಸುಖಕ್ಕಾಗಿ ಒಂದಷ್ಟು ಗಳಿಸುವುದನ್ನು, ಉಳಿಸುವುದನ್ನು ಯಾರೂ ಬೇಡವೆನ್ನುವುದಿಲ್ಲ. ಆದರೆ ಇಡೀ ಬದುಕನ್ನೇ ಮಕ್ಕಳಿಗಾಗಿ ಮೀಸಲಿಡುವುದು ಎಷ್ಟು ಸರಿ ? 

ಹೆಂಡತಿ,ಮಕ್ಕಳಿಗಾಗಿ, ಹೆತ್ತವರನ್ನು , ಒಡಹುಟ್ಟಿದವರನ್ನು ದೂರ ಮಾಡಿ, ಅವರನ್ನು ನೋಯಿಸುತ್ತಿರುವ ಎಷ್ಟೋ ಜನ ಕಣ್ಮುಂದಿದ್ದಾರೆ.ಇನ್ನು ನಮಗೂ ಮಕ್ಕಳಿಗೂ ಇರುವ ಸಂಬಂಧವೂ ಅಷ್ಟೇ. ಎಲ್ಲರನ್ನೂ ನೋಯಿಸಿ, ನಾವೂ ನೊಂದು, ಸಾಕಿದ ಮಕ್ಕಳಿಂದ ಸುಖ ಸಿಗುತ್ತದೆ ಎಂದು ಭಾವಿಸುವುದು ಸುಳ್ಳಾಗಬಹುದು.ಆಗ ಪರಿತಪಿಸುವುದರಿಂದ ಪ್ರಯೋಜನವಿಲ್ಲ.

ನಂತರ ಹಾದಿ-ಬೀದಿಯಲ್ಲಿ ನಾವು ಅವರಿಗಾಗಿ ಮಾಡಿದ ತ್ಯಾಗ,ಕಷ್ಟ-ನಷ್ಟ ಹೇಳಿಕೊಂಡರೆ ಪ್ರಯೋಜನ ಇಲ್ಲ.  ಮಕ್ಕಳಿಗಾಗಿ ಆಸ್ತಿ ಮಾಡದೆ, ಸುಸಂಸ್ಕೃತರನ್ನಾಗಿಸೋಣ.ದುಡಿದು ತಿನ್ನುವ, ಸ್ವತಂತ್ರವಾಗಿ ಬದುಕುವ ಶಕ್ತಿಯನ್ನು ತುಂಬಿಸೋಣ.

ಸಾಧ್ಯವಾದಷ್ಟು ನಮ್ಮ ದುಡಿಮೆಗೆ ಅನುಸಾರವಾಗಿ, ಸುಖ ಪಡಬೇಕು.ಮಕ್ಕಳಿಗಾಗಿ ಆಸ್ತಿ-ಹಣ ಮಾಡಿಟ್ಟು ಸತ್ತರೆ ಅವರ ಸುಖ ನೋಡಲು, ನಾವಿರುವುದಿಲ್ಲ. ಬೇಂದ್ರೆಯವರು ಹೇಳುವಂತೆ 

“ನಾನಂತೂ ಸಾವಿಗೆ ಹೆದರೊಲ್ಲ. ನಾನಿದ್ದಾಗ ಅದು ಬರೊಲ್ಲ. ಅದು ಬಂದಾಗ ನಾನಿರೊಲ್ಲ.” ಎಂಬುದು ವಾತ್ಸವ ಅಲ್ಲವೆ ?

ಮಕ್ಕಳೇ ಸರ್ವಸ್ವವಲ್ಲ ,ನಮ್ಮ ಜೀವನವೂ ಮುಖ್ಯ.ನಾವೂ ಖುಷಿಯಿಂದ ಬದುಕೋಣ,ಇತರರನ್ನು

ಪ್ರೀತಿಯಿಂದ ಕಾಣೋಣ ,ಪಾಲಕರನ್ನು ಗೌರವಿಸೋಣ. ಬದಲಾವಣೆಯ ಮೂಲಕ ಬದುಕು ಕಟ್ಟಿಕೊಳ್ಳೊಣ.

-ಸಂದ್ಯಾ ಪಾರ್ವತಿ ಅಶೋಕಸ್ವಾಮಿ ಹೇರೂರ.

About The Author

Leave a Reply