ಗಂಗಾವತಿ:ಗಂಗಾವತಿಯಿಂದ ಕಮಲಾಪೂರ ಗ್ರಾಮದವರೆಗೂ ಪಾರಂಪರಿಕ ಕಲ್ಪನೆಯೊಂದಿಗೆ ರಸ್ತೆಯನ್ನು ನಿರ್ಮಿಸಬೇಕು ಮತ್ತು ಆನೆಗುಂದಿ-ತಳವಾರಗಟ್ಟ ಬಳಿ ತುಂಗಭದ್ರಾ ನದಿಗೆ ಉಕ್ಕಿನ ಸೇತುವೆ ನಿರ್ಮಿಸಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಹಾಗೂ ನ್ಯಾಯವಾದಿ ಅಶೋಕಸ್ವಾಮಿ ಹೇರೂರ ಸರಕಾರಕ್ಕೆ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ, ಪರಿಸರ ಮತ್ತು ಜೀವ ಶಾಸ್ತ್ರ ಸಚಿವರಾದ ಆನಂದ ಸಿಂಗ್ ಅವರ ಆಪ್ತ ಕಾರ್ಯದರ್ಶಿ ರಮೇಶ್ ಬಾಬು ಎನ್., ಲೋಕೋಪಯೋಗಿ ಇಲಾಖೆಯ ಸಚಿವರ ಆಪ್ತ ಕಾರ್ಯದರ್ಶಿಯವರಿಗೆ ಪತ್ರ ಬರೆದು ಈ ಬಗ್ಗೆ ಕ್ರಮ ಕೈಗೊಳ್ಳಲು ಪ್ರವಾಸೋದ್ಯಮ ಸಚಿವರು ಸೂಚನೆ ನೀಡಿರುವ ಬಗ್ಗೆ ಪ್ರಸ್ಥಾಪಿಸಿದ್ದಾರೆ.
ಗಂಗಾವತಿ-ಕಮಲಾಪೂರ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಮತ್ತು ಆನೆಗುಂದಿ ಹತ್ತಿರ ಉಕ್ಕಿನ ಸೇತುವೆ ನಿರ್ಮಿಸಿ, ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ವಿಷಯಗಳು ಈ ಪ್ರಸ್ಥಾವನೆಯಲ್ಲಿ ಸೇರಿವೆ.
ಇದರಿಂದ ಪ್ರವಾಸೋದ್ಯಮ ಬೆಳೆಯಲು ಕಾರಣವಾಗಲಿದ್ದು ,ಗಂಗಾವತಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂದು ಅಶೋಕಸ್ವಾಮಿ ಹೇರೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.