

ರಾಜ್ಯದ ಔಷಧ ವ್ಯಾಪಾರಿಗಳನ್ನು ಒಂದಾಗಿಸುವುದು ಕಷ್ಟವೇ ಸರಿ.ಒಬ್ಬೊಬ್ಬರದ್ದು ಒಂದೊಂದು ಕಥೆ. ವ್ಯಾಪಾರ ಇದ್ದವರಿಗೆ ಸೂಪಿರಿಯಾರಿಟಿ ಕಾಂಪ್ಲೆಕ್ಸ್. ವ್ಯಾಪಾರ ಇಲ್ಲದವರಿಗೆ ಇನ್ ಫ಼ೆರಿಯಿಟಿ ಕಾಂಪ್ಲೆಕ್ಸ್. ಫ಼ಾರ್ಮಸಿಸ್ಟ ಆಗಿದ್ದವರು,ಫ಼ಾರ್ಮಸಿಸ್ಟ ಅಲ್ಲದವರದ್ದು ಬೇರೆ ಬೇರೆ ಕತೆ.ಯಾವ ಜಿಲ್ಲೆ ,ಯಾವ ತಾಲೂಕುಗಳಲ್ಲಿಯೂ ಸಂಘಟನೆ ಸರಿಯಾಗಿಲ್ಲ.ಇನ್ನು ರಾಜ್ಯ ಮಟ್ಟದಲ್ಲಿ ಸರಿಯಾಗಿರಲು ಹೇಗೆ ಸಾಧ್ಯ ?
ಲೀಡರ್ ಎಂದು ಕರೆಯಿಸಿಕೊಳ್ಳಲು ಬಯಸುವವರು ಕೆಮಿಸ್ಟ ಸಲುವಾಗಿ ಏನಾದರೊಂದು ಕೆಲಸಮಾಡಿ ಗುರುತಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಅಷ್ಟೇ. ಸರಕಾರಕ್ಕೆ ,ಸಂಭಂದಿಸಿದವರಿಗೆ ಪತ್ರ ಬರೆದು ಹೌದೆನಿಸಿಕೊಳ್ಳುವುದೇ ಒಂದು ಸಾಧನೆ ಎನಿಸಿಬಿಟ್ಟಿದೆ. ನಮಗೇ ನಾವೇ ನಾಯಕರು ! ಯಾರೂ ಯಾರನ್ನೂ ಇಲ್ಲಿ ನಾಯಕರನ್ನಾಗಿ ಮಾಡುವುದಿಲ್ಲ.ಅಧಿಕಾರಿಗಳಿಗೆ ಲಂಚ ಸಂಗ್ರಹಿಸಿ,ಕೊಡುವ ಸಂಘಗಳೇ ಹೆಚ್ಚು.ಒಂದು ರೀತಿಯಲ್ಲಿ ನೋಡಿದರೆ,ಅವೇ ಕ್ಷೇಮವಾಗಿವೆ.ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಸಂಘಗಳ ಅಧ್ಯಕ್ಷ, ಕಾರ್ಯದರ್ಶಿಗಳೇ ಇಲ್ಲಿ ಹುಚ್ಚರು.
ಕರ್ನಾಟಕ ವ್ಯಾಪಾರಿಗಳ ಸಂಘವನ್ನು ಜಿಲ್ಲೆ-ತಾಲೂಕಿಗೆ ಪರಿಚಯಿಸಿದವರು ಡಿ.ಎ.ಗುಂಡರಾವ್.ನಂತರ ರಾಜ್ಯ ಔಷಧ ವ್ಯಾಪಾರಿಗಳ ಸಂಘ (ಕೆ.ಸಿ.ಡಿ.ಎ.) ಅಧ್ಯಕ್ಷರಾದ ವಿಜಯಪುರ ಮತ್ತು ದಾವಣಗೆರೆಯ ವ್ಯಕ್ತಿಗಳು ತಮ್ಮ-ತಮ್ಮ ಔಷಧಿ ವಿತರಕ ಸಂಸ್ಥೆಗಳನ್ನು ಉದ್ಧಾರವನ್ನು ಅವರು ಮಾಡುತ್ತಾರೆ. ಮಾಡಿಕೊಂಡರು.ಬೆಂಗಳೂರು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ಹರಿಕೃಷ್ಣನ್ ರಾಜ್ಯ ಸಂಘದ (ಕೆ.ಸಿ.ಡಿ.ಎ.) ವಿರುದ್ಧ ತಿರುಗಿ ಬಿದ್ದಾಗಲೇ ಅದಕ್ಕೆ ಪುಕ್ಕಕಟ್ಟೆ ಪ್ರಚಾರ ಸಿಕ್ಕಿದ್ದು.
ಕೆ.ಸಿ.ಡಿ.ಎ.ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳಾಗಿದ್ದ
ಡಿ.ಎ.ಗುಂಡೂರಾವ್ ಅವರ ಆರೋಗ್ಯ ಸರಿಯಿಲ್ಲದಿದ್ದಾಗ ಮತ್ತು ಕುಮಟಾದ ವಿಷ್ಣು ಕಾಮತ್ ತೀರಿಕೊಂಡಾಗ ಲಕ್ಷಾಂತರ ರೂಪಾಯಿಗಳ ಸಹಾಯ ಮಾಡಿದ್ದು ವಿ.ಹರಿಕೃಷ್ಣನ್ ಅವರು.ಈಗ ಅವರು ತೀರಿಹೋಗಿದ್ದಾರೆ,ಅವರ ವ್ಯಾಪಾರಕ್ಕೆ ಸಹಾಯ ಮಾಡುವವರು ಯಾರೂ ಇಲ್ಲ.ಅವರ ಕುಟುಂಬದವರು ಸಹಾಯ ಬೇಡಿಲ್ಲ.ಆದರೂ ಸಹಾಯ ಮಾಡಿದರೆ ದಿವಂಗತ ಹರಿಕೃಷ್ಣನ್ ಅವರ ಋಣ ತೀರಿಸಿದ ಪುಣ್ಯವಾದರೂ ಬರುತ್ತದೆ.ಸಹಾಯ ಪಡೆದವರೇ ಸಹಾಯ ಮಾಡಬೇಕೆಂದಿಲ್ಲ.ಆದರೆ ಅವರ ಕೈಲಾದಷ್ಟು ಮಾಡಬೇಕಾದ್ದು ಅವರ ಕರ್ತವ್ಯ.
ಬೆಂಗಳೂರು ಜಿಲ್ಲೆಯ ಜೊತೆಗೆ ರಾಜ್ಯದ ಔಷಧ ವ್ಯಾಪಾರಿಗಳಿಗೆ ವರ್ಷಕೊಮ್ಮೆಯಾದರೂ ಒಂದು ಒಳ್ಳೆಯ ಊಟ ಹಾಕುವುದರ ಜೊತೆಗೆ ಒಂದೊಳ್ಳೆ ಗಿಫ಼್ಟ ಕೊಟ್ಟು ಕಳುಹಿಸಿದವರು.ಆಲ್ ಇಂಡಿಯಾ ಆರ್ಗನೈಸೇಶನ್ ಆಫ಼್ ಕೆಮಿಸ್ಟ & ಡ್ರಗ್ಗಿಸ್ಟ ಸಂಸ್ಥೆಯ (ಎ.ಐ.ಓ.ಸಿ.ಡಿ) ವಾರ್ಷಿಕೋತ್ಸವ ಬೆಂಗಳೂರಿನಲ್ಲಿ ನಡೆದಾಗ ಇಡೀ ದೇಶದ ಯಾವ ರಾಜ್ಯದಲ್ಲಿಯೂ ನಡೆಯದಂತಹ ಕಾರ್ಯಕ್ರಮವನ್ನು ಹರಿಕೃಷ್ಣನ್ ಹಮ್ಮಿಕೊಂಡು ಹೆಸರು ಮಾಡಿದ್ದರು.ಎಲ್ಲರಿಗೂ ಹೋರಲಾರದಷ್ಟು ಗಿಫ಼್ಟಗಳನ್ನು ಕೊಟ್ಟು ಕಳುಹಿಸಿದ್ದರು.
ಫ಼ೆಡರೇಷನ್ ಆಫ಼್ ಕೆಮಿಸ್ಟ & ಡ್ರಗ್ಗಿಸ್ಟ ಆಫ಼್ ಕರ್ನಾಟಕ ಮತ್ತು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘಗಳನ್ನು ಹುಟ್ಟು ಹಾಕಿದಾಗಲೂ ತುಂಬಾ ದುಡ್ಡು ಖರ್ಚು ಮಾಡಿದ್ದರು.ನೂರಾರು ಜನರನ್ನು ಆಗ್ರಾದಲ್ಲಿ ನಡೆದ ಎ.ಐ.ಓ.ಸಿ.ಡಿ ಚುನಾವಣೆಯ ಸಂಧರ್ಭದಲ್ಲಿ ವಿಮಾನದ ಮೂಲಕ ಕರೆದುಕೊಂಡು ಹೋಗಿ,ಆಗ್ರಾದಲ್ಲಿ 5 ಸ್ಟಾರ್ ಹೋಟಲ್ ನಲ್ಲಿ ಇರಿಸಿ,ಕರೆತಂದಿದ್ದರು.ಆಗ ಪುಕ್ಕಟೆ ವಿಮಾನ ಪ್ರಯಾಣ,ವಾಸ್ತವ್ಯ,ಊಟ,ಪಾನೀಯ ಎಲ್ಲಾ ಸುಖವನ್ನು ಅನುಭವಿಸಿದವರು ಈಗ ಬೇರೆ ಸಂಘದ ಹೆಸರು ಹೇಳುತ್ತಿದ್ದಾರೆ.ಇಂತಹ ಕೃತಘ್ನರ ಬಗ್ಗೆ ಏನು ಬರೆಯುವುದು ?
ನಮ್ಮ ಜಿಲ್ಲೆಯಲ್ಲಿ ನಮ್ಮ ಸಂಘ ಹಾಗಿದೆ-ಹೀಗಿದೆ ಎಂದು ಜಂಬ ಕೊಚ್ಚಿಕೊಳ್ಳುವವರೇ ಬಹಳ.ಬರೀ ಭಿನ್ನಾಭಿಪ್ರಾಯಗಳದ್ದೇ ಎಲ್ಲಲ್ಲಿಯೂ ಹಾವಳಿ.ಎಲ್ಲಾ ಜಿಲ್ಲೆ , ತಾಲೂಕುಗಳಲ್ಲಿ ಎರೆಡೆರಡು ಸಂಘಗಳು ಇವೆ. ಹೀಗಾಗಿ ಔಷಧ ವ್ಯಾಪಾರಿಗಳಲ್ಲಿ ಒಗ್ಗಟ್ಟಿಲ್ಲ ! ಒಗ್ಗಟ್ಟಿದೆ ಎನ್ನುವುದು ಬರೀ ಮಾತಿಗಷ್ಟೇ.
ಹರಿಕೃಷ್ಣನ್ ಆರಂಭಿಸಿದ ಕಾಶೀ ಏಜೆನ್ಸಿಸ್ ನಲ್ಲಿ ರಿಟೇಲರ್ ಗಳು ಔಷಧಗಳನ್ನು ಖರೀಧಿಸಿದರೆ ಸಾಕು, ಅವರ ಕುಟುಂಬಕ್ಕೆ ಸಹಾಯವಾಗುತ್ತದೆ.ಆದರೆ ಅಂತಹ ಹೃದಯವಂತರ ಸಂಖ್ಯೆ ಕಡಿಮೆಯಾಗಿದೆ. ಅವರ ಸಾವನ್ನು ಆನಂಧಿಸಿದವರೂ ಇದ್ದಾರೆ. ಇಂತಹವರು ತಮಗೂ ಸಾವಿದೆ ಎಂಬುದನ್ನು ಮರೆತಂತಿದೆ.
1998 ರಲ್ಲಿ ಆರಂಭವಾದ ನನ್ನ ಅವರ ಸ್ನೇಹಕ್ಕೆ ಎಂದು ಕುಂದು ಬಂದಿರಲಿಲ್ಲ.ಅವರ ವಿಶಾಲವಾದ ಹೃದಯ, ಸಹಾಯ ಮಾಡುವ ಗುಣ ಮೆಚ್ಚತಕ್ಕದ್ದು. ಭೇಟಿಯಾಗಲು ಬಂದವರಿಗೆ ಊಟ ಮಾಡದೇ ಕಳುಹಿಸಿದ ಉದಾಹರಣೆಗಳಿಲ್ಲ.ಅವರ ಆತ್ಮೀಯರಲ್ಲಿ ನಾನೂ ಒಬ್ಬ.
ನನ್ನ ಮೇಲೆ ಔಷಧ ನಿಯಂತ್ರಣ ಇಲಾಖೆ ‘ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕಾನೂನು’ ಅಡಿಯಲ್ಲಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಗ. ಅದನ್ನು ‘ಕೆ.ಸಿ.ಡಿ.ಎ.ಇನ್ಫೋಮೇಲ್’ ಮ್ಯಾಗಜಿನ್ ನಲ್ಲಿ ಪ್ರಕಟಿಸಿದ ಅಪಕೀರ್ತಿ ಕೆ.ಸಿ.ಡಿ.ಎ.ಯದ್ದು.ನಂತರ ನಾನು ಗಂಗಾವತಿಯಿಂದ ಪ್ರಕಟವಾಗುತ್ತಿದ್ದ ಭೀಷ್ಮ ಪಾಕ್ಷಿಕ ಪತ್ರಿಕೆಯಲ್ಲಿ ಹಾಗೂ ಔಷಧೀಯ ವಾರ್ತೆಯಲ್ಲಿ ನಿರಂತರವಾಗಿ ವರದಿಗಳನ್ನು ಪ್ರಕಟಿಸಿದ್ದೆ.ಆಗಲೇ ಕೆ.ಸಿ.ಡಿ.ಎ.ಕುಖ್ಯಾತಿಗೆ ಬಂದದ್ದು.ಈ ಸಂಘದ ಮತ್ತು ಇಲಾಖೆಯ ಹಾದರವನ್ನು ಬಯಲು ಮಾಡಿದ್ದು.
ಔಷಧ ವ್ಯಾಪಾರಿಗಳ ಕ್ಷೇಮಕ್ಕೆ ಇರಬೇಕಾದ ಕೆ.ಸಿ.ಡಿ.ಎ.,ಆಗ ಕೆಡಿಸುವ ಕೆಲಸ ಮಾಡಿತು.ನಮ್ಮಿಂದ ಲಂಚ ತಿಂದು ಬದುಕುವ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ‘ಲಂಚ’ ವಿರೋಧಿಯಾದ ನನ್ನ ಮೇಲೆ ಕೇಸ್ ಹಾಕಿಸಿ ಹಗೆ ಸಾಧಿಸಿದರು.ಆಗ ಮಾತ್ರವಲ್ಲ,ಈಗಲೂ ಔಷಧ ವ್ಯಾಪಾರಿಗಳು ನನ್ನ ಸಹಾಯಕ್ಕೆ ಬರುತ್ತಾರೆಂದು,ಕಾಯುತ್ತಿಲ್ಲ ಹಾಗೂ ಕಾಯುವುದೂ ಇಲ್ಲ.ಈಗ ಇಡೀ ರಾಜ್ಯದಲ್ಲಿ ಬಹುತೇಕ ಅಧಿಕಾರಿಗಳು ಹೊಸ ಲೈಸೆನ್ಸ್ ಕೊಡಲು ರೂ.50 ಸಾವಿರ,ವರ್ಷದ ಮಾಮೂಲು ಎಂದು ರೂ.20 ಸಾವಿರ ಪಡೆಯುತ್ತಾರೆ.ಕೇಳುವವರು ಯಾರು ? ಎಲ್ಲಾ ಕೊಟ್ಟು ಬರುವವರೆ ! ದೂರು ಕೊಡುವವರಿಲ್ಲ,ಕೇಳುವರೂ ಇಲ್ಲ ! ಲಂಚದ ಹಾವಳಿ ನಿರ್ನಾಮವಾಗಬೇಕಾದರೆ,ಕಟಿ ಬದ್ಧರಾಗಿ ನಿಲ್ಲಬೇಕು.ಕೈಕಟ್ಟಿ ಅಲ್ಲ !
-ಅಶೋಕಸ್ವಾಮಿ ಹೇರೂರ