

ಔಷಧ ಅಂಗಡಿಯ ಹೆಸರನ್ನು ಅನುಕರಣೆ ಮಾಡುವುದು ಕಷ್ಟವನ್ನು ಮೈ ಮೇಲೆ ಎಳೆದುಕೊಂಡಂತೆ.ಒಂದೇ ಊರು,ಒಂದೇ ರಸ್ತೆಯಲ್ಲಿ ಒಂದು ಔಷಧ ಅಂಗಡಿಯ ಹೆಸರನ್ನೇ ಮತ್ತೊಬ್ಬರು ಇಟ್ಟು ಕೊಳ್ಳುವುದು ಸರಿಯಲ್ಲ.ಉದಾಹರಣೆಗೆ ಶ್ರೀ ವೀರಭದ್ರೇಶ್ವರ ಮೆಡಿಕಲ್ ಸ್ಟೊರ್ಸ್ ಎಂಬ ಹೆಸರಿನ ಒಂದು ಅಂಗಡಿ ಕಾರ್ಯನಿರ್ವಹಿಸುತ್ತಿರುವಾಗ ಅದೇ ಹೆಸರನ್ನು ಅದೇ ಊರು,ಅದೇ ರಸ್ತೆಯಲ್ಲಿ ಇಟ್ಟುಕೊಂಡರೆ ಕಾನೂನಾತ್ಮಕ ತೊಂದರೆಗಳು ಬರುತ್ತವೆ.
ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು, ಕಟ್ಟಡ ಬೇರೆ ಇದ್ದರೆ, ಬೇರೆ ಕಡೆ ಅಸ್ತಿತ್ವದಲ್ಲಿರುವ ಅದೇ ಹೆಸರಿನಲ್ಲಿ ಮತ್ತೊಂದು ಲೈಸೆನ್ಸ್ ಕೊಡುತ್ತೇವೆ ಎನ್ನುತ್ತಾರೆ.ಮುಂದಾಗಬಹುದಾದ ಅನಾಹುತಗಳನ್ನು ಅವರು ಅಪ್ಪಿ ತಪ್ಪಿಯೂ ಔಷಧ ವ್ಯಾಪಾರಿಗಳಿಗೆ ಹೇಳಿ ಕೊಡುವುದಿಲ್ಲ.’ಸರ್ ನಮ್ಮದು ಶ್ರೀ ವೀರಭದ್ರೇಶ್ವರ ಮೆಡಿಕಲ್ ಸ್ಟೊರ್ಸ್ ಅದೇ ಹೆಸರಿನಲ್ಲಿ ಮತ್ತೊಂದು ಲೈಸೆನ್ಸ್ ಕೊಟ್ಟಿದ್ದೀರಿಯಲ್ಲ’ ಎಂದು ಕೇಳಿದರೆ, ‘ನೀವೇನೂ ಆ ಹೆಸರನ್ನು ಪೇಟೆಂಟ್ ಮಾಡಿ ಕೊಂಡಿದ್ದೀರಾ’ ಎಂದು ಮರು ಪ್ರಶ್ನೆ ಮಾಡುತ್ತಾರೆ.
ಇದು ತೀರಾ ಬಾಲಿಶ ಪ್ರಶ್ನೆಯಾಗುತ್ತದೆ.ಒಂದೇ ಊರು, ಒಂದೇ ರಸ್ತೆಯಲ್ಲಿ ಒಂದಕ್ಕಿಂತಲೂ ಹೆಚ್ಚು ಔಷಧ ಮಾರಾಟದ ಲೈಸೆನ್ಸ್ ಕೊಡುವಾಗ,ಔಷಧ ಮತ್ತು ಕಾಂತಿವರ್ಧಕ ನಿಯಮ 64(2) ಪ್ರಕಾರ ಕೆಲವು ನಿರ್ಭಂದಗಳಿವೆ.ಆದರೆ ಅಧಿಕಾರಿಗಳನ್ನು ಅದನ್ನು ಪಾಲಿಸುವುದಿಲ್ಲ.ಔಷಧ ಅಂಗಡಿ ಎಂದರೆ ಕಿರಾಣಿ ಅಂಗಡಿಯಲ್ಲ ಎಂಬ ಪರಿಜ್ಞಾನ ಲೈಸೆನ್ಸ್ ಕೊಡುವ ಅಧಿಕಾರಿಗೆ,ಲೈಸೆನ್ಸ್ ಪಡೆಯುವ ವ್ಯಕ್ತಿಗೆ ಇಬ್ಬರಿಗೂ ಇರಬೇಕು.
ಆಯಾ ಊರಿನಲ್ಲಿ ಹೆಸರು ಮಾಡಿರುವ ಒಂದು ಅಂಗಡಿಯ ಹೆಸರನ್ನು ಮತ್ತೊಬ್ಬರು ಅದೇ ಹೆಸರಿನಲ್ಲಿ ಆರಂಭಿಸಿ,ವ್ಯಾಪಾರಕ್ಕೆ ಪೈಪೋಟಿ ಕೊಡುವ ಅಥವಾ ಗ್ರಾಹಕರನ್ನು ಸೆಳೆಯುವ ತಂತ್ರಗಾರಿಕೆ ಇರಬಹುದಾದರೂ,ಇಬ್ಬರಿಗೂ ಅಪಾಯ ತಪ್ಪಿದ್ದಲ್ಲ.
ಕೊಪ್ಪಳ ಜಿಲ್ಲೆಯ ಕುಷ್ಟಗಿಯ ಪಟ್ಟಣದ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿ ಇರುವ ಶ್ರೀ ಮಂಜುನಾಥ ಮೆಡಿಕಲ್ ಸ್ಟೊರ್ಸ್ ಎಂಬ ಹೆಸರಿನ ಒಂದು ಹಳೆಯ ಅಂಗಡಿ ಇದೆ.ಈಗ ಅದೇ ಹೆಸರಿನಲ್ಲಿ ಹೊಸದಾಗಿ ಮತ್ತೊಂದು ಮೆಡಿಕಲ್ ಸ್ಟೋರ್ಸ್ ಆರಂಭವಾಗಿದೆ.ಹೀಗಾಗಿ ಅಲ್ಲಿ ಹೊಸ ಸಮಸ್ಯೆಗಳು ಉದ್ಭವವಾಗಿವೆ.ಒಂದು ಅಂಗಡಿಯವರ ಔಷಧ ಖರೀದಿ ಬಿಲ್ ಅಥವಾ ಮೆಡಿಸಿನ್ ಗಳು ಮತ್ತೊಂದು ಅಂಗಡಿಗೆ ಹೋಗುತ್ತಿವೆ. ಇನ್ನೊಂದು ಅಂಗಡಿಯ ಔಷಧಗಳ ವಹಿವಾಟಿನ ವಿವರಗಳು ಮತ್ತೊಂದು ಅಂಗಡಿಯ ಜಿ.ಎಸ್.ಟಿ.,ನಂಬರ್ ನಲ್ಲಿ ಎಂಟ್ರಿ ಆಗುತ್ತಿವೆ.ಇದು ಕಾನೂನಾತ್ಮಕ ತೊಡಕಿಗೆ ಕಾರಣವಾಗಿದೆ.
ದೂರು ಬಂದರಂತೂ ಅದರ ಹಿಂಸೆ ಹೇಳತೀರದು. ಉದಾಹರಣೆಗೆ ಹೇಳುವುದಾದರೆ,ಒಂದು ದಶಕದ ಹಿಂದೆ ಗಂಗಾವತಿ ನಗರದಲ್ಲಿ ಶ್ರೀ ಮಂಜುನಾಥ ಮೆಡಿಕಲ್ ಸ್ಟೊರ್ಸ್ ಒಂದರ ಮೇಲೆ ದೂರು ಇತ್ತು. ಆದರೆ ವಿಜಿಲೆನ್ಸ್ ಅಧಿಕಾರಿಗಳು ಶ್ರೀ ಮಂಜುನಾಥ ಹೆಸರಿನ ಎಲ್ಲಾ ಅಂಗಡಿಗಳ ಮೇಲೆ ದಾಳಿ ನಡೆಸಿದರು,ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಿದರು.ಹತ್ತಾರು ವರ್ಷ ಅವುಗಳ ಮಾಲೀಕರು, ಪಾಲುದಾರರು ನ್ಯಾಯಾಲಯಕ್ಕೆ ಅಲೆದಾಡಿದರು.
ಪೇಟೆಂಟ್ ಬಗ್ಗೆ ಕೇಳುವ ಈ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು,ತಮ್ಮ ಎಲ್ಲಾ ಮಕ್ಕಳಿಗೂ ಒಂದೇ ಹೆಸರು ಇಡುತ್ತಾರೆಯೇ ? ಇದು ಸಾಮಾನ್ಯ ಜ್ಞಾನ ಅಷ್ಟೇ.ಇದು ವಾದ ಮಾಡುವ ವಿಷಯವಲ್ಲ, ವಿವಾದಕ್ಕೆ ಕಾರಣವಾಗುವ ವಿಷಯ.
ಇನ್ನು ಮುಂದೆಯಾದರೂ ಹೊಸ ಪರವಾನಿಗೆ ಕೊಡುವಾಗ ಅಧಿಕಾರಿಗಳು ಈ ಆಗು ಹೋಗುಗಳ ಬಗ್ಗೆ ತಿಳಿಯಬೇಕು.ಒಂದೇ ಹೆಸರಿನಲ್ಲಿ ಒಂದಕ್ಕೂ ಹೆಚ್ಚು ಅಂಗಡಿಗಳು ಒಂದೇ ಭಾಗದಲ್ಲಿ ಇದ್ದಲ್ಲಿ , ಅವುಗಳ ಹೆಸರುಗಳನ್ನು ಬದಲಿಸಿ ಕೊಡಲು ಕಾನೂನಿನಲ್ಲಿ ಅವಕಾಶವಿದೆ.ಅದನ್ನು ಕೂಡಲೇ ಮಾಡಲಿ.ಅದು ವಾಣಿಜ್ಯ ಇಲಾಖೆಯಾಗಲಿ ಇಲ್ಲವೆ ಔಷಧ ನಿಯಂತ್ರಣ ಇಲಾಖೆಯೇ ಆಗಲಿ.
-ಅಶೋಕಸ್ವಾಮಿ ಹೇರೂರ.