ಗಂಗಾವತಿ: ಮಾನಸಿಕ ರೋಗಿಗಳ ಔಷಧಗಳನ್ನು ಬೇಕಾ ಬಿಟ್ಟೆಯಾಗಿ ಮಾರಾಟ ಮಾಡಿದರೆ,ಔಷಧ ವ್ಯಾಪಾರಿಗಳ ಸಂಘದಿಂದ ಯಾವುದೇ ಬೆಂಬಲ ಸಿಗುವುದಿಲ್ಲ ಎಂದು ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮತ್ತು ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಕಾನೂನು ಘಟಕದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಔಷಧ ವ್ಯಾಪಾರಿಗಳಿಗೆ ಎಚ್ಚರಿಸಿದ್ದಾರೆ.
ನಗರದ ಔಷಧೀಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ವರ್ಲ್ಡ್ ಫ಼ಾರ್ಮಾಸಿಸ್ಟ ಡೇ’ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಮ್ಮಲ್ಲಿ ನಾರ್ಕೋಟಿಕ್ ಔಷಧಗಳು ಇರುವುದಿಲ್ಲ. ಸೈಕೋಟ್ರೊಪಿಕ್ ಔಷಧಗಳು ಮಾತ್ರ ಇರುತ್ತವೆ. ಮಾನಸಿಕ ಅಸ್ವಸ್ಥತೆ ಇರುವ ರೋಗಿಗಳಿಗೆ ಅವು ತಜ್ಞ ವೈಧ್ಯರ ಸಲಹಾ ಚೀಟಿಯ ಆಧಾರದ ಮೇಲೆ ಮಾತ್ರ ಮಾರಾಟವಾಗ ಬೇಕು ಎಂದು ಅವರು ತಾಕೀತು ಮಾಡಿದರು.
ಮತ್ತು ಬರಿಸುವ ಔಷಧಗಳನ್ನು ಮಾರಾಟ ಮಾಡುತ್ತಿರುವ ಅಪಾದನೆಯ ಮೇಲೆ,ಈಗಾಗಲೇ ಬಳ್ಳಾರಿ ನಗರದಲ್ಲಿನ ಮೆಡಿಕಲ್ ಸ್ಟೊರ್ಸ್ ಒಂದರ ಪರವಾನಿಗೆ ರದ್ದು ಮಾಡಲಾಗಿದೆ.ಇಡೀ ರಾಜ್ಯದಲ್ಲಿ ಅಧಿಕಾರಿಗಳು ತಂಡ ರಚಿಸಿಕೊಂಡು, ಎಲ್ಲಾ ಔಷಧ ಅಂಗಡಿಗಳ ಪರೀವಿಕ್ಷಣೆಗೆ ಬರುತ್ತಾರೆ.ಆದ್ದರಿಂದ ಎಚ್ಚರದಿಂದ ಔಷಧ ವ್ಯಾಪಾರ ಮಾಡುವುದು ಔಷಧ ವ್ಯಾಪಾರಿಗಳಿಗೆ ಅನಿವಾರ್ಯ.ನಿಯಮ ಮೀರಿ ನಿರ್ದಿಷ್ಟ ಔಷಧಗಳನ್ನು ಮಾರಾಟ ಮಾಡಿದರೆ,ಶಿಕ್ಷೆಗೆ ಗುರಿಯಾಗುತ್ತೀರಿ ಎಂದವರು ಹೇಳಿದರು.
ಯಾರೋ ಒಬ್ಬಿಬ್ಬರು ಮಾಡುವ ಅವ್ಯವಹಾರದಿಂದಾಗಿ,
ನಿಯಮನುಸಾರ ಔಷಧ ವ್ಯಾಪಾರ ಮಾಡುವ ಔಷಧ ವ್ಯಾಪಾರಿಗಳ ಹೆಸರು ಕೆಡುತ್ತಿದೆ.ಬೇರೆ ಬೇರೆ ಜಿಲ್ಲೆಗಳಿಂದ ಇಂತಹ ಔಷಧಗಳು ನಮ್ಮ ಜಿಲ್ಲೆಯಲ್ಲಿ ನುಸುಳಿರುವ ಸಾಧ್ಯತೆಗಳೂ ಇವೆ.ಆನ್ ಲೈನ್ ಮೂಲಕ ನಕಲಿ ಪ್ರಿಸ್ಕ್ರಿಪ್ಷನ್ ಆಧಾರದ ಮೇಲೆ ಇಂತಹ ಔಷಧಗಳು ನಮ್ಮಲ್ಲಿ ವ್ಯಸನಿಗಳಿಗೆ ಮತ್ತು ಬರಿಸುವ ಔಷಧಗಳು ತಲುಪುತ್ತಿರುವ ಅವಕಾಶಗಳು ಇವೆ. ಅಂತಹವರ ಬಗ್ಗೆ ಮಾಹಿತಿ ಲಭ್ಯವಾದರೆ,ಸಂಘದ ಮುಖ್ಯಸ್ಥರಿಗೆ ಅಥವಾ ಪೋಲೀಸ್ ಅಧಿಕಾರಿಗಳಿಗೆ ತಿಳಿಸಿ ಎಂದವರು ಸೂಚಿಸಿದರು.
ಇಡೀ ದೇಶದಲ್ಲಿಯೇ ಅತ್ಯುತ್ತಮ ಹೆಸರು ಗಳಿಸಿದ ಔಷಧ ವ್ಯಾಪಾರಿಗಳ ಸಂಘ ನಮ್ಮದು.ಅದಕ್ಕಾಗಿ ಜಾಗ್ರತೆ ವಹಿಸಿ ಎಂದು ತಿಳಿಸಿದರು.
200 ಕ್ಕೂ ಹೆಚ್ಚು ಜನ ಔಷಧ ವ್ಯಾಪಾರಿಗಳು ಭಾಗವಹಿಸಿದ್ದ ಈ ಸಮಾರಭದ ವೇದಿಕೆಯ ಮೇಲೆ ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರಾದ ವೆಂಕಟೇಶ ರಾಠೋಡ,ಫ಼ಾರ್ಮಾಸಿಸ್ಟಗಳಾದ ವೀರಣ್ಣ ಕಾರಂಜಿ ಕಾರಟಗಿ,ಪಾಂಡುರಂಗ ಜನಾದ್ರಿ ಕನಕಗಿರಿ, ಆಭೀದ ಹುಸೇನ್,ಹನುಮ ರೆಡ್ಡಿ, ಸೂಳೆಕಲ್ ಮಂಜುನಾಥ,ಗಣೇಶ ಗಂಗಾವತಿ ಹಾಜರಿದ್ದರು.
ಸೇ೦ಟ್ ಫ಼ಾಲ್ಸ್ ಡಿ ಫ಼ಾರ್ಮಸಿ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಹಿರೇಮಠ ಬೂದಗುಂಪಾ ಕಾರ್ಯವನ್ನು ನಿರೂಪಿಸಿದರು.