December 24, 2024
Screenshot_20240919_202806_WhatsAppBusiness

ಕರ್ನಾಟಕದಲ್ಲಿಯೇ ಗಂಗಾವತಿ ನಗರದ ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಇತರ ಹಲವು ಸಂಘಗಳಿಗೆ ಮಾದರಿ.ದೇಶದಲ್ಲಿಯೇ ‘ಔಷಧೀಯ ಭವನ’ ಮತ್ತು ‘ಔಷಧೀಯ ಸಂಕೀರ್ಣ’ ಗಳನ್ನು ಮೊಟ್ಟ ಮೊದಲು ನಿರ್ಮಿಸಿದ ಕೀರ್ತಿ ಅದಕ್ಕಿದೆ.

ಇಲಾಖೆಗೆ ಪತ್ರ ಬರೆಯುವುದೇ ಕಿರುಕುಳ ಎಂದು ಕೊಂಡ ರಾಜ್ಯದ ಔಷಧ ನಿಯಂತ್ರಣ ಇಲಾಖೆಯ ಪ್ರಭಾರಿ ಔಷಧ ನಿಯಂತ್ರಕನೊಬ್ಬ ಸದ್ರಿ ಸಂಘದ ಅಧ್ಯಕ್ಷನಾದ ನನ್ನ ಮೇಲೆ 2004 ರಲ್ಲಿ ಎರಡು ಕೇಸ್ ದಾಖಲಿಸಿ,ಅಟ್ಟಹಾಸ ತೋರಿಸಿದ್ದ.

2004 ರಲ್ಲಿ ವಿಧಾನ ಸಭಾ ಚುನಾವಣೆಗೆ ಸ್ಪರ್ದಿಸಿ, ಸೋಲು ಕಂಡಿದ್ದ ನನ್ನ ಮೇಲೆ ಔಷಧ ನಿಯಂತ್ರಣ ಇಲಾಖೆಯ ಆ ಕಮಂಗಿ ಅಧಿಕಾರಿ ನನ್ನ ಮೈ ಮೇಲೆ ಬಿದ್ದಿದ್ದೇ ತಡ, ಸ್ಥಳೀಯ ಔಷಧ ವ್ಯಾಪಾರಿಗಳು ಸಹ ಚದುರಿ ಹೋದರು.ಹಾಗೇ ಚದುರಿ ಹೋದದ್ದು ಮಾತ್ರವಲ್ಲ , ‘ಔಷಧೀಯ ಭವನ’ ಕಟ್ಟಿದ ಸಾಲಕ್ಕೆ ನನ್ನನ್ನೇ ಹೊಣೆ ಮಾಡಿದರು.ಚೌರಸ್ಸಿಗೆ (ಸ್ವಕೈರ್ ಫ಼ೀಟ್) ಕೇವಲ ರೂ.70/- ರೂಪಾಯಿಯಂತೆ ಖರೀಧಿಸಿದ ಭೂಮಿಯಲ್ಲಿ ಒಂದು ಸ್ವಕೈರ್ ಫ಼ೀಟ್ ಗೆ ರೂ.250/-ಪಾವತಿಸಿ, ಕಟ್ಟಿಸಿದ ‘ಔಷಧೀಯ ಸಂಕೀರ್ಣ’ ದ ಮಾಲೀಕರು ಶೂಲದಿಂದ ತಿವಿದು ಹೋದರು.ಸಾಲಕ್ಕೂ ಮತ್ತು ಶೂಲಕ್ಕೂ ನಾನೇ ಬಲಿಯಾಗಬೇಕಾಯ್ತು.

ನಿವೃತ್ತ ಉಪ ಔಷಧ ನಿಯಂತ್ರಕ ಎಸ್.ವಿ.ಶ್ರೀನಿವಾಸ, ಸಹಾಯಕ ಔಷಧ ನಿಯಂತ್ರಕ ದಿವಂಗತ ಎನ್. ವಡಿವೇಲು ಮತ್ತು ಈಗಿನ ಸಹಾಯಕ ಔಷಧ ನಿಯಂತ್ರಕ ಗಣೇಶ ಬಾಬು ಮೇಲಾಧಿಕಾರಿಗಳ ಒತ್ತಡದಿಂದ ನನ್ನ ಮೇಲೆ ಸರಕಾರಿ ಕಾರ್ಯಕ್ಕೆ ಅಡ್ಡಿ ಪಡಿಸಿದ ಕಾನೂನಿನ ಅಡಿಯಲ್ಲಿ ಗಂಗಾವತಿ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಔಷಧ ಮತ್ತು ಕಾಂತಿವರ್ದಕ ನಿಯಮದಲ್ಲಿಯೇ ಈ ಪ್ರಕರಣ ದಾಖಲಿಸಲು ಅವಕಾಶ ಇದ್ದರೂ ಪೋಲೀಸ್ ಠಾಣೆಗೆ ದೂರು ಕೊಟ್ಟಿದ್ದು ನನಗೆ ಹೆಚ್ಚಿನ ತೊಂದರೆ ಕೊಡುವ ಉದ್ದೇಶದಿಂದಲೇ ಎಂಬುದು ಸುಳ್ಳಲ್ಲ.

ಆಗ್ಗೆ ಕಲಬುರ್ಗಿಯ ಪ್ರಭಾರಿ ಉಪ ಔಷಧ ನಿಯಂತ್ರಕರಾಗಿದ್ದ ದಿವಂಗತ ಗೆಳೆಯ ಹಿರೋಳಿ ರೇವಣಸಿದ್ದಪ್ಪ ಮತ್ತು ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರಾಗಿದ್ದ ರಮಾನಾಥ ಕು೦ಟೆ (ಈಗ ನಿವೃತ್ತ) ಕೇವಲ 29 ದಿನಗಳ ಕಾಲ ನಾನು ರಿಜಿಸ್ಟರ್ಡ್ ಫ಼ಾರ್ಮಾಸಿಸ್ಟ ಆಗಿದ್ದ ಅಂಗಡಿಯನ್ನು ಹುಡುಕಿಕೊಂಡು ಹೋಗಿ,ಅಂಗಡಿಯ ಮಾಲೀಕನ ಹಣದಿಂದಲೇ ಕುಡಿದು-ತಿಂದು ಮಧ್ಯ ರಾತ್ರಿಯಲ್ಲಿ ಆ ಔಷಧ ಅಂಗಡಿಯ ಬಾಗಿಲು ತೆರೆಸಿ,ನಾನು ಕಾರ್ಯನಿರ್ವಿಸಿದ ಅವಧಿಯ ಔಷಧ ಮಾರಾಟದ ಬಿಲ್ ಗಳನ್ನು ಸಂಗ್ರಹಿಸಿ, ನನ್ನ ಮೇಲೆ ಮತ್ತೊಂದು ಪ್ರಕರಣ ದಾಖಲಿಸಿದ್ದರು.(ನಾನು ಕರ್ತವ್ಯದಿಂದ ಬಿಡುಗಡೆಯಾದ ಒಂದು ವರ್ಷದ ಆನಂತರ)

ಹೀಗೆ ಅಧಿಕಾರಿಗಳು ಮಾನಸಿಕವಾಗಿ ನನ್ನನ್ನು ಕುಗ್ಗಿಸಲು ಹೊರಟರೆ,ಆರ್ಥಿಕವಾಗಿ ಕುಗ್ಗಿಸಿದವರು ನಮ್ಮ ಔಷಧ ವ್ಯಾಪಾರಿಗಳು ! ಗಂಗಾವತಿ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಚುನಾವಣೆಯಲ್ಲಿ ಪರಾಭವ ಗೊಂಡ ಮಾನಸಿಕ ಹಿಂಸೆ ಒಂದು ಕಡೆಯಾದರೆ,ಅದರಿಂದಾದ ಆರ್ಥಿಕ ತೊಂದರೆ ಇನ್ನೊಂದು ಕಡೆ.

ಪತ್ರಿಕಾ ವರದಿಗಳ ಮೂಲಕ ಸಮಾಜದಲ್ಲಿ ಹೆಸರು ಕೆಡಿಸುವ ಆಟ ಬೇರೆ, ನಮ್ಮ ಸದಸ್ಯರಿಂದಲೇ ಮುಂದುವರೆದಿತ್ತು.ನಾನೂ ಸುಮ್ಮನೇ ಇರಲಿಲ್ಲ,ಆಗ ಗಂಗಾವತಿಯಿಂದ ಪ್ರಕಟವಾಗುತ್ತಿದ್ದ ‘ಭೀಷ್ಮ’ ಪಾಕ್ಷಿಕ ಪತ್ರಿಕೆಯಲ್ಲಿ ನನ್ನನ್ನು ಸಮರ್ಥಿಸುವ ವರದಿಗಳನ್ನು ಪ್ರಕಟಿಸಿ, ಇಡೀ ರಾಜ್ಯದ ಔಷಧ ವ್ಯಾಪಾರಿಗಳಿಗೆ ಅಂಚೆಯ ಮೂಲಕ ಕಳುಹಿಸಿದ್ದೂ ಇದೆ.ಹಣದ ಕೊರತೆ, ಬೆಂಬಲಿಗರ ಕೊರತೆಯ ನಡುವೆ,ನಾನು ಜಿದ್ಧು ಸಾಧಿಸಿದ್ದೆ.

ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿದ್ದ ವಿಜಯಪುರ ಮೂಲದ ದಿವಂಗತ ಡಿ.ಎಸ್.ಗುಡ್ಡೊಡಗಿ,ಕೊಪ್ಪಳದ ಔಷಧ ವ್ಯಾಪಾರಿ ಕೊಟ್ರಪ್ಪ ಕೊರ್ಲಳ್ಳಿ ಗಂಗಾವತಿಯ ಔಷಧ ವ್ಯಾಪಾರಿಗಳನ್ನು ಎತ್ತಿ ಕಟ್ಟಿ ,ಸಭೆ-ಸಮಾರಂಭ ನಡೆಸಿದರು.

ಗಂಗಾವತಿ ನಗರದಲ್ಲಿ ನನ್ನ ಮಾಲೀಕತ್ವದ ಔಷಧ ವಿತರಣಾ ಸಂಸ್ಥೆಯಲ್ಲಿ ವ್ಯವಹರಿಸದೆ,ಸಂಪೂರ್ಣವಾಗಿ ಬಾಯ್ ಕಾಟ್ ಮಾಡಿದ್ದರು.2004 ರಿಂದ 2008 ರವರೆಗೂ ಈ ಭೇಗುದಿ ಮುಂದುವರದೇ ಇತ್ತು.

ಗಂಗಾವತಿ ತಾಲೂಕಿನ ಔಷಧ ವ್ಯಾಪಾರಿಗಳು ಬೈಕಾಟ್ ಅಸ್ತ್ರ ಪ್ರಯೋಗಿಸಿದರೆ, ಕನಕಗಿರಿ ಪಟ್ಟಣದವರು ತಾವು ನ್ಯೂಟ್ರಲ್ ಎಂದು ಘೋಷಿಸಿದರು.ಕಾರಟಗಿ ಪಟ್ಟಣದವರು ಮಾತ್ರ ನನ್ನ ಬೆನ್ನ ಹಿಂದೆ ನಿಂತವರು.

ರಾಜ್ಯದ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಯಾರೂ ನನ್ನನ್ನು ಮಾತನಾಡಿಸುತ್ತಿರಲಿಲ್ಲ.ಮಾತನಾಡಿಸುವುದು ಬೇಡ ಎಂದು ಕೆಲವರು ಹೇಳಿದ್ದರು ಕೂಡ.ಆಗ್ಗೆ ನನ್ನೊಡನೆ ಮಾತನಾಡುತ್ತಿದ್ದವರು,ಸಹಾಯಕ ಔಷಧ ನಿಯಂತ್ರಕರಾಗಿದ್ದ ಕೃಷ್ಣಾ ರೆಡ್ಡಿ ಮಾತ್ರ.

ಕೊಪ್ಪಳ ವೃತ್ತದ ಪ್ರಭಾರಿ ಸಹಾಯಕ ಔಷಧ ನಿಯಂತ್ರಕರಾಗಿ ಅಧಿಕಾರ ಸ್ವೀಕರಿಸಿದ ರವಿ ಪ್ರಸಾದ (ಈಗಿನ ದಾವಣಗೆರೆ ಉಪ ಔಷಧ ನಿಯಂತ್ರರು) ನಮ್ಮ ಸಂಘದಲ್ಲಿ ನಡೆದ ಶೀತಲ ಯುದ್ಧಕ್ಕೆ ಕೊನೆ ಹಾಡಿ, ಸದಸ್ಯರೆಲ್ಲರನ್ನು ಒಂದಾಗಿಸಿದವರು,ಇಂತಹ ದೊಡ್ಡ ಮನಸ್ಸು ಯಾರಿಗೂ ಬರಲಿಕ್ಕಿಲ್ಲ.

ಈ ಬಗ್ಗೆ ಉಪ ಔಷಧ ನಿಯಂತ್ರಕರಾಗಿದ್ದ ದಿವಂಗತ ಹಿರೋಳಿ ರೇವಣ ಸಿದ್ದಪ್ಪ ಕೂಡ ಔಷಧ ವ್ಯಾಪಾರಿಗಳನ್ನು ಒಂದಾಗಿಸಲು ಪ್ರಯತ್ನಿಸಿದ್ದರಾದರೂ, ಔಷಧ ವ್ಯಾಪಾರಿಗಳ ಸಂಘವನ್ನು ವಿಸರ್ಜಿಸಲು ಅವರು ಸೂಚಿಸಿದ್ದರಿಂದ ನಾನು ಒಪ್ಪಿರಲಿಲ್ಲ.

ಫ಼ಾರ್ಮಸಿ ಮಾಡಿ,ಔಷಧ ವ್ಯಾಪಾರಿಯಾಗಿದ್ದ ನಾನು ಎಮ್.ಎ.,ಪದವಿ ಅಭ್ಯಾಸ ಮಾಡಿ,ಎ.ಎಲ್.ಬಿ. ಪದವಿ ಪಡೆಯಬೇಕಾಯ್ತು.ಅಷ್ಟೇ ಅಲ್ಲದೇ ನನ್ನ ಪತ್ನಿ ಸಂಧ್ಯಾ ಪಾರ್ವತಿಯನ್ನು ಎಲ್.ಎಲ್.ಬಿ. ಮಾಡಿಸಬೇಕಾಯ್ತು. ನನ್ನ ಸಾರ್ವಜನಿಕ ಹೋರಾಟಕ್ಕೆ ನನ್ನ ಶ್ರೀಮತಿಯ ಬೆಂಬಲವೇ ನನಗೆ ಶಕ್ತಿ.ಆಕೆ ಸ್ಪರ್ದಾತ್ಮಕ ಪರೀಕ್ಷೆ ಬರೆದಿದ್ದರೆ, ನ್ಯಾಯದೀಶಳಾಗುತ್ತಿದ್ದಳು ಅಥವಾ ಸರಕಾರಿ ವಕೀಲಳಾಗಿರುತ್ತಿದ್ದಳು.ಆದರೆ ನಾವು ಪರಸ್ಪರ ಬಿಟ್ಟು ಇರುವುದಿಲ್ಲ.ವರ್ಷಕ್ಕೆ ಒಂದೋ ಎರಡೋ ದಿನ ಬೇರೆ ಬೇರೆ ಕಡೆ ಇದ್ದರೆ ಹೆಚ್ಚಾಯ್ತು. ಹೀಗಾಗಿ ನೌಕರಿ ಮಾಡಲು ಆಕೆ ಒಪ್ಪಲಿಲ್ಲ.

ನನ್ನ ಹೆಸರನ್ನು ಬೆಳೆಸಿದವರು,ಕೆಡಿಸಿದವರು ನಮ್ಮವರೇ!

ಅವರು ಅಧಿಕಾರಿಗಳಾದೀತು,ಔಷಧ ವ್ಯಾಪಾರಿಗಳಾದೀತು ! ಇವರಿಂದ ನನ್ನ ಹೆಸರು ಹೆಚ್ಚು ಪ್ರಚಲಿತವಾಯಿತು.

ಔಷಧೀಯ ವಾರ್ತೆ ಮಾಸ ಪತ್ರಿಕೆ 2001 ರಲ್ಲೇ ಆರಂಭವಾದದ್ದು.ಅಂದಿನಿಂದ ಇಂದಿನವರೆಗೂ ತಪ್ಪದೇ ಮುದ್ರಣವಾಗುತ್ತಿದೆ.ಓದುವ ಹವ್ಯಾಸವನ್ನು ಔಷಧ ವ್ಯಾಪಾರಿಗಳು ಬೆಳೆಸಿಕೊಂಡರೆ,ಪತ್ರಿಕೆಯ ಪ್ರಸಾರ ಇನ್ನಷ್ಟೂ ಹೆಚ್ಚೀತು ! ಇದು ಔಷಧ ವ್ಯಾಪಾರಿಗಳನ್ನು ಜಾಗ್ರತೆಗೊಳಿಸಿದರೆ,ಅಧಿಕಾರಿಗಳನ್ನು ಎಚ್ಚರಿಸುತ್ತದೆ.

2012 ರಲ್ಲಿ ಕಲಬುರ್ಗಿ ವಿಧಾನ ಪರಿಷತ್ ಪದವೀಧರ ಕ್ಷೇತ್ರದಿಂದ ಸ್ಪರ್ದಿಸಿ,ಬೀದರ್, ಕಲಬುರ್ಗಿ, ಯಾದಗಿರಿ, ಕೊಪ್ಪಳ,ರಾಯಚೂರು, ಬಳ್ಳಾರಿ ಜಿಲ್ಲೆಗಳ ತುಂಬಾ ಸಂಚರಿಸಿದ್ದೇನೆ.

1998 ರಲ್ಲಿ ಗಂಗಾವತಿ ನಗರದ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷನಾಗಿ ಆಯ್ಕೆಯಾದ ನಾನು ಗಂಗಾವತಿ ತಾಲೂಕಿನ ವ್ಯಾಪ್ತಿಗೆ ಅದನ್ನು ವಿಸ್ತರಿಸಿದೆ.(ಈಗಿನ ಗಂಗಾವತಿ-ಕನಕಗಿರಿ,ಕಾರಟಗಿ ಸೇರಿದಂತೆ) 2001 ರಲ್ಲಿ ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘವನ್ನು ನನ್ನ ನೇತೃತ್ವದಲ್ಲಿ ನೋಂದಾಯಿಸಿ,ಅಸ್ತಿತ್ವಕ್ಕೆ ತರಲಾಯಿತು.

1998 ರಿಂದ 2004 ಎಪ್ರೀಲ್- ಮೇ ವರೆಗೆ ಸಂಘದಲ್ಲಿ ಒಗ್ಗಟ್ಟಾಗಿದ್ದ ಔಷಧ ವ್ಯಾಪಾರಿಗಳು 2004 ಜೂನ್-ಜೂಲೈ ನಿಂದ 2008 ರವರೆಗೂ ಚದಿರಿ ಹೋದದ್ದರಿಂದ ಸಂಘದ ಒಗ್ಗಟ್ಟು ಸಡಿಲಗೊಂಡಿತ್ತು.ಮತ್ತೇ 2008 ರಿಂದ ಸಂಘದಲ್ಲಿ ಒಗ್ಗಟ್ಟು ಬಂದಿದ್ದರೂ ಕೆಲವು ಅಧಿಕಾರಿಗಳ ಕೈ ಚಳಕದಿಂದ ಸಭೆ-ಸಮಾರಂಭದಲ್ಲಿ ಹಾಜರಾತಿ ಹೆಚ್ಚು-ಕಡಿಮೆಯಾಗುತ್ತಿದೆ.ಔಷಧ ವ್ಯಾಪಾರಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವುದು ಸಹ ಇದಕ್ಕೆ ಕಾರಣವಾಗಿರಬಹುದು.

ರಾಜ್ಯ ನಿವೃತ್ತ ಔಷಧ ನಿಯಂತ್ರಕರಾದ ಬಿ.ಟಿ.ಖಾನಾಪುರೆ (ಬಳ್ಳಾರಿ ಉಪ ಔಷಧ ನಿಯಂತ್ರಕರಾಗಿದ್ದಾಗ) ಪರಿವೀಕ್ಷಣೆ ನಡೆಸಿದ್ದನ್ನು ಬಿಟ್ಟರೆ,ಆ ನಂತರ ಡಿ.ಡಿ.ಸಿ.ಯವರಿಂದ ಪರಿವೀಕ್ಷಣೆ ನಡೆದಿಲ್ಲ.

ಕೊಪ್ಪಳ ವೃತ್ತದ ಸಹಾಯಕ ಔಷಧ ನಿಯಂತ್ರಕರಾಗಿ  ಬಂದು ಹೋದವರಲ್ಲಿ 34 ಕ್ಕೂ ಹೆಚ್ಚು ಅಧಿಕಾರಿಗಳ ಹೆಸರುಗಳಿವೆ. ಯಾರೂ ಇನ್ಸಪೆಕ್ಷನ್ ಮಾಡಿದರು ? ಯಾರು ಮಾಡದೇ ಹೋದರು ? ಯಾರು ಹಣ ಪಡೆದರು ! ಯಾರು ಪಡೆಯಲಿಲ್ಲ ! ಎಲ್ಲಾ ಗುಪ್ತವಾಗಿದೆ.

ಆದರೆ ಯಾವ ಅಧಿಕಾರಿಗಳು ಸಂಘದ ಒಗ್ಗಟ್ಟಿಗೆ ಮರ್ಯಾದೆ ನೀಡಿದರು ! ಯಾರು ಒಡೆದು ಆಳಿದರು ! ಎಂದು ಖಂಡಿತವಾಗಿ ಹೇಳ ಬಲ್ಲೆ ! ಕೇವಲ ತಮ್ಮ ಮಾಮೂಲು ಸಂಗ್ರಹಿಸಲು,ಸಂಘದ ಒಗ್ಗಟ್ಟನ್ನು ಒಡೆಯ ಬಾರದು. ಆದರೆ ಹೀಗೆ ಒಡೆದ ಅಧಿಕಾರಿಗಳು ತಮ್ಮ ವೃತ್ತಿ ಜೀವನದಲ್ಲಿ ಎಂದೂ ಮುಂದೆ ಬರಲಾರರು.ಏಕೆಂದರೆ ಆನೆಗಳಿಗೆ ಸಂಘಗಳು ಅಂಕುಶವಾಗಬಲ್ಲವು !

ಸದಸ್ಯರಲ್ಲಿ ಪರಸ್ಪರ ಸಂಬಂಧ,ಸಲಹೆಗಳು ದೂರವಾಗುತ್ತಾ ಹೋದರೆ,ಅದರ ಲಾಭವನ್ನು ಬೇರೆಯವರು ಪಡೆಯುತ್ತಾರೆ. ಇದನ್ನು ಔಷಧ ವ್ಯಾಪಾರಿಗಳು ಮೊದಲು ಅರ್ಥ ಮಾಡಿಕೊಳ್ಳಬೇಕು.

ಅಧಿಕಾರಿಗಳು ಸಹ ಔಷಧ ವ್ಯಾಪಾರಿಗಳ ಕಾನೂನು ಪಾಲನೆಯ ಕೆಲಸವನ್ನು  ಸಂಘಗಳ ಮೂಲಕ ಸಾಧಿಸಬೇಕು.ಆಗ ಮಾತ್ರ ಔಷಧ ವಹಿವಾಟು ಆರೋಗ್ಯವಾಗಿರಬಲ್ಲದು.ಇಲ್ಲದೇ ಹೋದರೆ ಔಷಧ ನಿಯಂತ್ರಣ ಇಲಾಖೆಯನ್ನು ಹೊರತಾಗಿಯೂ ಬೇರೆ ಬೇರೆ ಇಲಾಖೆಗಳು ಔಷಧ ವಹಿವಾಟಿನಲ್ಲಿ ಕೈ ಹಾಕಿ, ಔಷಧ ವ್ಯಾಪಾರಿಗಳಿಗೆ ಈಗ ಇರುವ ಮಡಿವಂತಿಕೆಗೆ ಭಂಗ ಬರಬಹುದು ! ಅದಕ್ಕಾಗಿ ಎಚ್ಚರದಿಂದ ಇರುವುದು ಮುಖ್ಯ .

-ಅಶೋಕಸ್ವಾಮಿ ಹೇರೂರ.

About The Author

Leave a Reply