December 24, 2024

ಶ್ರೀ ಎಸ್.ಉಮೇಶ್

ಔಷಧ ನಿಯಂತ್ರಕರು(ಪ್ರಭಾರ)

ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆ

ಅರಮನೆ ರಸ್ತೆ ,ಬೆಂಗಳೂರು 

ಇವರಿಗೆ_

ಮಾನ್ಯರೆ,

ರಾಜ್ಯ ಔಷಧ ನಿಯಂತ್ರಣ ಇಲಾಖೆಯ ನೂತನ ಅಪರ ಔಷಧ ನಿಯಂತ್ರಕರಾಗಿ ತಾವು ನೇಮಕವಾದುದ್ದಕ್ಕೆ ಅಭಿನಂದನೆಗಳು.

ಇತ್ತೀಚೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪರವಾನಿಗೆ ಇಲ್ಲದೇ, ಅಲೋಪತಿ ಔಷಧಗಳ ಮಾರಾಟದ ದೂರುಗಳು ಹೆಚ್ಚಾಗಿವೆ.ನಕಲಿ ವೈದ್ಯರು,ಆಯುಷ್ ವೈಧ್ಯರು ಔಷಧ ವಿತರಕರಿಂದಲೇ ನೇರವಾಗಿ ಔಷಧಗಳನ್ನು ಖರೀದಿಸಿ,ಔಷಧ ಮಾರಾಟ ಮಾಡುತ್ತಿದ್ದಾರೆ.ಕಿರಾಣಿ,ಸ್ಟೇಷನರಿ ಅಂಗಡಿಯವರು ಸಹ ಅಲೋಪತಿ ಔಷಧಗಳ ಮಾರಾಟದಲ್ಲಿ ಹಿಂದೆ ಬಿದ್ದಿಲ್ಲ.

ಅನಧಿಕೃತ ವ್ಯಕ್ತಿಗಳಿಗೆ ಔಷಧ ಸರಬರಾಜು ಮಾಡುವ ಔಷಧ ವ್ಯಾಪಾರಿಗಳ ಮೇಲೆಯೂ ಪ್ರಕರಣ ದಾಖಲಿಸಿದಾಗ ಮಾತ್ರ ಪರವಾನಗಿ ರಹಿತ ಔಷಧ ವ್ಯಾಪಾರಿಗಳನ್ನು ಮಟ್ಟ ಹಾಕಬಹುದು.

ಪರವಾನಗಿ ರಹಿತ ಔಷಧ ವ್ಯಾಪಾರಿಗಳ ಬಗ್ಗೆ ಮಾಹಿತಿ ನೀಡಲು ಮುಂದೆ ಬಂದವರಿಗೆ ಲಿಖಿತ ದೂರುಗಳನ್ನು ನೀಡಲು ಇಲಾಖೆಯ ಔಷಧ ಪರಿವೀಕ್ಷಕರು,ಸಹಾಯಕ ಔಷಧ ನಿಯಂತ್ರಕರು ‌ಮತ್ತು ಉಪ ಔಷಧ ನಿಯಂತ್ರಕರು ಸೂಚಿಸುತ್ತಿದ್ದಾರೆ.ಹೀಗಾಗಿ ದೂರು ಕೊಡಲು ಜನ ಹೆದರುತ್ತಿದ್ದಾರೆ.

ಸುದ್ದಿ ತಿಳಿದ ತಕ್ಷಣ ಸ್ವಯಂ ಪ್ರೇರಿತರಾಗಿ ಕ್ರಮ ಕೈಗೊಳ್ಳಬೇಕಾದ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.ಇದರಿಂದ ರಾಜ್ಯದ ಔಷಧ ವ್ಯಾಪಾರಿಗಳು ಭ್ರಮ ನಿರಸನಗೊಂಡಿದ್ದಾರೆ.ಲೈಸೆನ್ಸ್ ಪಡೆದ ಮಾರಾಟಗಾರರಿಗೆ ವಿವಿಧ ಕಟ್ಟಳೆಗಳ ಮೂಲಕ ಹೆದರಿಸುವ ಕೆಲಸವನ್ನು ಅಧಿಕಾರಿಗಳು ಕರಗತ ಮಾಡಿಕೊಂಡಿದ್ದಾರೆ.

ಔಷಧ ವ್ಯಾಪಾರಿಗಳಿಗೆ ಕಂಠಕವಾಗುವ ಅನಧಿಕೃತ ಔಷಧ ವ್ಯಾಪಾರಿಗಳನ್ನು ನಿಯಂತ್ರಿಸಬೇಕಾದ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು,ಲೈಸೆನ್ಸ್ ಕೊಡುವುದನ್ನೇ ತಮ್ಮ ಮುಖ್ಯ ಕೆಲಸ 

ಎಂದು ಕೊಂಡಿದ್ದಾರೆ.ಕಾಲ ಕಾಲಕ್ಕೆ ಪರಿವೀಕ್ಷಣೆ ನಡೆಸದೆ, ಕಚೇರಿಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ.

ಆಯುಷ್ ವೈದ್ಯರ ಆಸ್ಪತ್ರೆಯ ಒಳಗೆ,ನಕಲಿ ವೈದ್ಯರ ಆಸ್ಪತ್ರೆಯ ಪಕ್ಕದಲ್ಲಿ ಲೈಸೆನ್ಸ್ ಕೊಡುತ್ತಿದ್ದಾರೆ.ಆನಂತರ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ಔಷಧ ಮಾರಾಟ ಮಾಡ ಬಾರದೆಂದು ತಾಕೀತು ಮಾಡಿ,ತಾವು ಅಧಿಕಾರಿಗಳು ಎಂಬುದನ್ನು ನೆನಪು ಮಾಡಿ ಹೋಗುತ್ತಾರೆ.

ಪರವಾನಗಿ ಕೊಡುವಾಗ ಔಷಧ ಮತ್ತು ಕಾಂತಿವರ್ಧಕ ನಿಯಮ 64(2) ನ್ನು ಪಾಲಿಸುವ ಆಲೋಚನೆ ಯಾವ ಅಧಿಕಾರಿಗಳಿಗೂ ಇಲ್ಲ.ಎಲ್ಲೆಂದರಲ್ಲಿ ಹೇಗೆಂದರೆ ಹಾಗೆ ಲೈಸೆನ್ಸ್ ಕೊಡಲಾಗುತ್ತಿದೆ.ಯಾವ ಕಟ್ಟು ಪಾಡುಗಳು ಇಲ್ಲದಂತಾಗಿದೆ.

ತಮ್ಮ ಅಧಿಕಾರದ ಅವಧಿಯಲ್ಲಿ , ಔಷಧ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುವ ಅನಧಿಕೃತ ಔಷಧ ವ್ಯಾಪಾರಿಗಳ ಮಟ್ಟ ಹಾಕಲು ಕ್ರಮ ಜರುಗಿಸಲು ಮುಂದಾಗುತ್ತೀರಿ ಎಂದು ಎಲ್ಲಾ ಔಷಧ ವ್ಯಾಪಾರಿಗಳು  ಭರವಸೆಯನ್ನು ಇಟ್ಟು ಕೊಂಡಿದ್ದಾರೆ.ದಯವಿಟ್ಟು ಅವರ ನಿರೀಕ್ಷೆಯನ್ನು ಹುಸಿ ಮಾಡಲಾರಿರಿ ಎಂದು ಭಾವಿಸುತ್ತೇವೆ.

-ಅಶೋಕಸ್ವಾಮಿ ಹೇರೂರ. ಸಂಪಾದಕರು ಹೊಸ ಔಷಧೀಯ ವಾರ್ತೆ,ಮಾಸ ಪತ್ರಿಕೆ

About The Author

Leave a Reply