July 12, 2025
1000781048

ರಾಜ್ಯದ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಕೈ ತುಂಬಾ ಹಣ ಪಡೆದು ಹೊಸ ಲೈಸೆನ್ಸ್ ಕೊಡುವುದು ಮಾತ್ರ ತಮ್ಮ ಕೆಲಸ ಎಂದು ಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ.ಇವರು ಕಾಲ ಕಾಲಕ್ಕೆ ಪರಿವೀಕ್ಷಣೆ ನಡೆಸುವುದು ಕನಸಿನ ಮಾತು. ವರ್ಷಕ್ಕೊಮ್ಮೆ ವರ್ಷದ ಮಾಮೂಲು ಪಡೆಯಲು ಹೋದಾಗ ಪರಿವೀಕ್ಷಣೆ ಮಾಡಬಹುದು.ಮಾಡಿದರೂ ಹಣ ಪಾವತಿಯಾಗುವ ಕಾರಣಕ್ಕಾಗಿ ಇನ್ಸಪೆಕ್ಷನ್ ರಿಪೋರ್ಟನಲ್ಲಿ ಪಾಸ್ ಮಾರ್ಕ್ಸ್ ಹಾಕಿಯೇ ಬರುತ್ತಾರೆ.

ಇಡೀ ರಾಜ್ಯದಲ್ಲಿ ನಕಲಿ ವೈದ್ಯರು ಮತ್ತು ಆಯುಷ್ ವೈದ್ಯರು ಹಾಡು ಹಗಲೇ ರಾಜಾರೋಷವಾಗಿ ಅಲೋಪತಿ ಔಷಧಗಳನ್ನು ಮಾರಾಟ ಮಾಡುತ್ತಿದ್ದಾರೆ. ಲೈಸೆನ್ಸ್ ಇಲ್ಲದೇ ಔಷಧ ಮಾರಾಟದಲ್ಲಿ ನಿರತರಾಗಿರುವ ಇಂತಹ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮೈಗಳ್ಳತನ ಮಾಡುತ್ತಿದ್ದಾರೆ.

ಈ ಬಗ್ಗೆ ಔಷಧ ವ್ಯಾಪಾರಿಗಳು ಅಧಿಕಾರಿಗಳಿಗೆ ದೂರು ಕೊಡಲು ಹೆದರುತ್ತಾರೆ.ಒಂದೊಮ್ಮೆ ಪ್ರಶ್ನಿಸಿದರೂ ನಿಮ್ಮ ಅಂಗಡಿ ಫ಼ಾರ್ಮಾಸಿಸ್ಟ ಎಲ್ಲಿ ? ಔಷಧಗಳ ಮಾರಾಟದ ಬಿಲ್ ಎಲ್ಲಿ ? ಶೆಡ್ಯೂಲ್-ಎಚ್ ರಿಜಿಸ್ಟರ್ಡ್ ಎಲ್ಲಿ ? ಎಕ್ಸಪೈರಿ ಮೆಡಿಸಿನ್ ಎಲ್ಲಿ ಎಂದೆಲ್ಲಾ ಕೇಳಿ ಅಧಿಕಾರಿಗಳು ಔಷಧ ವ್ಯಾಪಾರಿಗಳ ಬಾಯಿ ಮುಚ್ಚಿಸುತ್ತಾರೆ.

ರೂ.50 ಸಾವಿರಕ್ಕೂ ಹೆಚ್ಚು ಲಂಚ ಪಡೆದು ಬರೀ ಲೈಸೆನ್ಸ್ ಕೊಡುವುದನ್ನೇ ತಮ್ಮ ಕಾಯಕ ಮಾಡಿಕೊಂಡಿರುವ ಎ.ಡಿ.ಸಿ.ಗಳು,ಆಗಾಗ್ಗೆ ಮಾಮೂಲು ಸಂಗ್ರಹಿಸಿ ಜೇಬು, ಅಲ್ಲಲ್ಲ ಮನೆ ತುಂಬಿಸಿಕೊಳ್ಳುವುದರಲ್ಲಿ ನಿಸ್ಸೀಮರು ! ಇದನ್ನು ಬಿಟ್ಟು ಬೇರೆ ಯಾವ ಕೆಲಸವನ್ನು ಅವರು ಮಾಡುವುದಿಲ್ಲ.ಮಾಡಲು ಔಷಧ ವ್ಯಾಪಾರಿಗಳ ಸಂಘಗಳು ಸಹ ಅಧಿಕಾರಿಗಳನ್ನು ಒತ್ತಾಯಿಸುವುದಿಲ್ಲ.

ರಾಜಕೀಯದ ಬಗ್ಗೆ,ಸಾಮಾಜಿಕ ವಿಷಯಗಳ ಬಗ್ಗೆ, ತಮ್ಮ ತಾಕತ್ತಿನ ಬಗ್ಗೆ ಜಂಬದಿಂದ ಮಾತನಾಡುವ ಔಷಧ ವ್ಯಾಪಾರಿಗಳು ಲಂಚ ಕೊಡುವಲ್ಲಿ ಮತ್ತು ಇತರ ಔಷಧ ವ್ಯಾಪಾರಿಗಳಿಂದ ಲಂಚ ಸಂಗ್ರಹಿಸಿ ಕೊಡುವಲ್ಲಿ  ಎತ್ತಿದ ಕೈ !

ಅಧಿಕಾರಿಗಳು ಇನ್ನೇನು ವರ್ಗವಾಗಿ ಹೋಗುತ್ತಾರೆ ಎನ್ನುವ ಹೊತ್ತಿಗೆ ಮುಂಗಡವಾಗಿಯೇ ಮಾಮೂಲಿಯನ್ನು ವಸೂಲಿ ಮಾಡಿಕೊಂಡೇ ಹೋಗಿ ಬಿಡುತ್ತಾರೆ.ಇಂತಹ ಅಧಿಕಾರಿಗಳ ಸಂಖ್ಯೆಯೇ ಬಹಳ.

ಮುಂದೆ ಬರುವ ಅಧಿಕಾರಿಯದ್ದೂ ಇದೇ ಕಾಯಕ, ಮೊದಲು ಇದ್ದ ಅಧಿಕಾರಿಗಳು ಪಡೆದು ಕೊಂಡು ಹೋದದ್ದು ತಮಗೆ ಸಂಭಂದವಿಲ್ಲ ತನಗೆ ಬರಬೇಕಾದ್ದು, ಬರಬೇಕು ಎಂದು ಹೇಳಿ ವಸೂಲಿಗೆ ಕೈ ಹಚ್ಚುತ್ತಾರೆ.ಬ್ರೋಕರ್ ಕೆಲಸ ಮಾಡುವ ಒಬ್ಬಿಬ್ಬ ಔಷಧ ವ್ಯಾಪಾರಿಗಳು ಸಹ ಈ ಅಧಿಕಾರಿಗಳ ಕೈಗೆ ಕೈ ಜೊಡಿಸಿ,ಮಾಮೂಲನ್ನು ವಸೂಲಿ ಮಾಡಿ ಕೊಡುತ್ತಾರೆ .

ಲಂಚ ಕೊಟ್ಟು ಕೈ ತೊಳೆದು ಕೊಂಡ ಖುಷಿ ಔಷಧ ವ್ಯಾಪಾರಿಗಳಿಗೆ,ಲಂಚ ಕೊಡಿಸಿ ಕೃತಾರ್ಥರಾದ ಸಂತೋಷ ಬ್ರೋಕರ್ ಔಷಧ ವ್ಯಾಪಾರಿಗಳಿಗೆ.ಅಲ್ಲಿಗೆ ಅಧಿಕಾರಿಯ ದಿಲ್ ಖುಷ್ ! 

ಆದರೆ ಅದೇನೋ ಗೊತ್ತಿಲ್ಲ ,ಇಂತಹ ಕೈ ಚಳಕ ಮಾಡಿ ಕೊಪ್ಪಳದಿಂದ ವರ್ಗವಾದ ಹಲವು ಅಧಿಕಾರಿಗಳು,ಬೇರೆ ಕಡೆ ವರ್ಗವಾಗಿ ಹೋದ ಮೇಲೆ ಇಲ್ಲಿ ತಿಂದದ್ದನ್ನು ಅಲ್ಲಿ ಕಕ್ಕಿದ್ದಾರೆ.ಹೀಗಾಗಿ ಕೊಪ್ಪಳ ವೃತ್ತ ಸುರಕ್ಷಿತವಲ್ಲ ಎಂಬುದು ಇಲಾಖೆಯ ಎಲ್ಲರಿಗೂ ಗೊತ್ತು ! ಆದರೂ ಕೆಲವರು ತಮ್ಮ ಗಾಂಚಾಳಿಯನ್ನು ಬಿಡುವುದಿಲ್ಲ.

ಬರೀ ಔಷಧ ವ್ಯಾಪಾರಿಗಳಿಂದ ಕಿತ್ತು ತಿನ್ನುವ ಈ ಅಧಿಕಾರಿಗಳು,ನಕಲಿ ವೈದ್ಯರ ಔಷಧ ಮಾರಾಟದ ಬಗ್ಗೆ ದೂರು ಕೊಟ್ಟರೆ,ಅತ್ತ ತಿರುಗಿಯೂ ನೋಡುವುದಿಲ್ಲ. ರಾಜ್ಯದ ಔಷಧ ನಿಯಂತ್ರಕರು ಆದೇಶಿಸಿದರೂ ಕರಾರುವಕ್ಕಾಗಿ ಕೆಲಸ ಮಾಡುವುದಿಲ್ಲ.

ಅಧಿಕೃತವಾಗಿ ಔಷಧ ಮಾರಾಟವಾದ ‘ಬಿಲ್’ ಕೊಟ್ಟರೆ,ಇನ್ವಾಯಿಸ್ ಮೂರು ವರ್ಷದ ಹಳೆಯದ್ದು ಎಂದು ಅಧಿಕಾರಿಗಳು ಔಷಧ ನಿಯಂತ್ರಕರಿಗೆ ಸಬೂಬು ಹೇಳಿದ್ದು ಮಂಡ್ಯ ವೃತ್ತದಲ್ಲಿ ನಡೆದಿತ್ತು.’ಮೂರು’ ವರ್ಷದ ಸಬೂಬು ಹೇಳಲು ಇವರೇನು ಜಿ.ಎಸ್.ಟಿ. ಅಧಿಕಾರಿಗಳಾ ? ಇಂತಹ ಅಧಿಕಾರಿಗಳು ಹೊಟ್ಟೆಗೆ ಸೆಗೆಣಿಗಿಂತ ಮಿಗಿಲಾದದ್ದನ್ನು ತಿಂದವರು ಎಂದು ಕರೆಯುವುದು ನಮಗೆ ಅನಿವಾರ್ಯ.

ಕೊಪ್ಪಳ ವೃತ್ತದ ಪ್ರಭಾರಿ ಎ.ಡಿ.ಸಿ.ಯಾಗಿದ್ದ ಗದಗ ಎ.ಡಿ.ಸಿ.ಯಾಗಿದ್ದ ಸಂಗಣ್ಣ ಶೀಳಿ,ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಹೋಲ್ ಸೇಲ್ ಔಷಧ ವ್ಯಾಪಾರಿಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ನಕಲಿ ವೈದ್ಯರಿಗೆ ಸರಬರಾಜು ಆಗುತ್ತಿದ್ದ ಔಷಧ ವ್ಯಾಪಾರವನ್ನು ತಡೆಯಲಿಲ್ಲ.ಈ ಅಧಿಕಾರಿಯ ಮಾತು ಖಡಕ. ಫ಼ಾರ್ಮಾಸಿಸ್ಟಗಳನ್ನು ಬೆಂಬಲಿಸುವಲ್ಲಿಯೂ ಅವರು ಖಡಕ.ಆದರೂ ಯಾಕೋ ತಪ್ಪಿಸ್ಥರ ಮೇಲೆ ಅವರು ಕ್ರಮ ಕೈಗೊಳ್ಳಲಿಲ್ಲ.

ಅದು ಹೇಗೋ ಬೆಳಗಾವಿ ವೃತ್ತದಲ್ಲಿ ಈ ಹಿಂದೆ ಇದ್ದ ಅಧಿಕಾರಿಗಳು ಗಜೇಂದ್ರಗಡ ಮೂಲದ ಒಬ್ಬ ವ್ಯಾಪಾರಿಯ ಮೇಲೆ ಕೇಸ್ ಹಾಕಿದರು.ಇದಕ್ಕಾಗಿ ಅವರನ್ನು ಅಭಿನಂದಿಸಲೇ ಬೇಕು.

ಔಷಧ ವ್ಯಾಪಾರಿಗಳಿಂದ ಹಣ ತಿಂದ ಮೇಲೆ ಅದರ ಋಣಕ್ಕಾದರೂ ವೈದ್ಯರಿಗೆ ನೇರವಾಗಿ ಔಷಧ ಸರಬರಾಜು ಮಾಡುವ ಹೋಲ್ ಸೇಲ್ ಔಷಧ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಲ್ಲ ! ಅದೂ ಇಲ್ಲ ! ಇಂತಹ ಋಣಪಾತಕರ ಬಗ್ಗೆ ಬರೆಯುವುದಾದರೂ ಏನು ?

ಓರ್ವ ಹೋಲ್ ಸೇಲ್ ಔಷಧ ವ್ಯಾಪಾರಿ,ರಿಟೇಲ್ ಲೈಸೆನ್ಸ್ ಇಲ್ಲದೆ ಗ್ರಾಹಕರಿಗೆ ಔಷಧ ಮಾರಾಟ ಮಾಡುತ್ತಿರುವ ಬಗ್ಗೆ ಮೌಖಿಕವಾಗಿ ದೂರು ಹೇಳಿದ್ದನ್ನು ಸ್ವ-ಜಾತಿಯವ ಎಂಬ ಕಾರಣಕ್ಕಾಗಿ ನಮ್ಮ ದೂರಿನ ಬಗ್ಗೆ ಎ.ಡಿ.ಸಿ.ಯೊಬ್ಬ ಆ ಔಷಧ ವಿತರಕನಿಗೆ ಚಾಡಿ ಹೇಳಿ, ನಮ್ಮನ್ನು ನಿಷ್ಟೂರ ಮಾಡಿ ವರ್ಗವಾಗಿದ್ದ. ನಿಷ್ಟೂರವನ್ನೇ  ಲೇಖನಿ ಮಾಡಿಕೊಂಡಿರುವ ನಮ್ಮ ಹತ್ತಿರ ಈ ‘ನಿಷ್ಟೂರ’ ಎಂಬ ಶಬ್ದಕ್ಕೆ ಅರ್ಥವೇ ಇಲ್ಲ !

ಅಧಿಕಾರಿಗಳಿಗೂ ಸ್ವ ಜಾತಿಯ ಅಭಿಮಾನ ಇತ್ತೀಚಿಗೆ ಜಾಸ್ತಿಯಾಗಿದೆ. ಅಧಿಕಾರಿಗಳು,ಅಧಿಕಾರಿಗಳಾಗಿಯೇ ಕೆಲಸ ಮಾಡಬೇಕೇ ಹೊರತು,ಪಕ್ಷಪಾತ,ಸ್ವಜಾತಿ ಎಂಬ ಕಾರಣಕ್ಕಾಗಿ ಕೆಲಸ ಮಾಡಬಾರದು.

ಅಧಿಕಾರಿಗಳು ಯಾವುದೇ ವೃತ್ತದಲ್ಲಿರಲಿ,ಬರೀ ಎರಡು ಅಥವಾ ಮೂರು ವರ್ಷ ಕೆಲಸ ಮಾಡುವವರು.ಅವರ ಮರ್ಜಿ ನಮಗೆ ಬೇಕಿಲ್ಲ.ಔಷಧ ವ್ಯಾಪಾರಿಗಳು ಈ ಸತ್ಯವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು !

ಔಷಧ ವ್ಯಾಪಾರಿಗಳಿಗಾಗಿಯೇ ನಮ್ಮ ಸಮಯ ಮೀಸಲು. ಅದಕ್ಕಾಗಿ ನಮ್ಮ ಪತ್ರಿಕೆ ‘ವೇದಿಕೆ’ ನಿರ್ಮಿಸಿದೆ.ಬಳಸಿಕೊಳ್ಳುವುದು ಬಿಡುವುದು,ನಿಮಗೆ ಬಿಟ್ಟದ್ದು. ನಿಮ್ಮೂರಿನ ಔಷಧ ವ್ಯಾಪಾರಿಗಳ ಸಂಘಕ್ಕೆ ನಿಯತ್ತಾಗಿರಿ.ಸಂಘದಿಂದ ಒಂದಿಲ್ಲ ಒಂದು ದಿನ ಒಳ್ಳೆಯದಾಗುತ್ತದೆ.ಅಧಿಕಾರಿಗಳಿಗೆ ನಿಯತ್ತಾಗಿರಲು ಹೋಗಿ, ಸಂಘದ ಸಹಾಯವನ್ನು ಕಳೆದು ಕೊಳ್ಳಬೇಡಿ. ವ್ಯಕ್ತಿಗೆ ಸಾವಿದೆ,ಸಂಘಕ್ಕಲ್ಲ.

ಔಷಧೀಯ ವಾರ್ತೆ ಪತ್ರಿಕೆಯ “ಪತ್ರಿಕಾ ವೇದಿಕೆ” ಗೆ ಸೇರಿಕೊಳ್ಳಿ.ನಿಮ್ಮ ಜೊತೆ ನಾವಿದ್ದೇವೆ. 

-ಅಶೋಕಸ್ವಾಮಿ ಹೇರೂರ.

About The Author

Leave a Reply