ರಾಜ್ಯದ ಔಷಧ ನಿಯಂತ್ರಣ ಇಲಾಖೆ ಈಗ ಸಂಪೂರ್ಣ ನಿಷ್ಕ್ರಿಯ !
ಕರ್ನಾಟಕ ರಾಜ್ಯದ ಔಷಧ ನಿಯಂತ್ರಣ ಇಲಾಖೆ ಈಗ ಸಂಪೂರ್ಣ ನಿಷ್ಕ್ರಿಯವಾಗಿದೆ.ಈಗಿನ ಔಷಧ ನಿಯಂತ್ರಕರಾದ ಬಿ.ಟಿ.ಖಾನಾಪುರೆ ಜುಲೈ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿದ್ದಾರೆ.
ಉಪ ಔಷಧ ನಿಯಂತ್ರಕರಾಗಿದ್ದ ನಜೀರ್ ಅಹಮ್ಮದ ಆಧೀನ ಔಷಧ ನಿಯಂತ್ರಕರಾಗಿ ನೇಮಕವಾಗಿದ್ದಾರೆ.
ಈ ನೇಮಕಾತಿ ಈಗ ಕೆ.ಎ.ಟಿ.ಯ ಕಟಕಟೆ ಏರಿದೆ.
ಉಪ ಔಷಧ ನಿಯಂತ್ರಕರಿಗೆ ನಿರ್ದಿಷ್ಟ ಕೆಲಸಗಳಿಲ್ಲ. ಲೈಸೆನ್ಸ್ ಕೊಟ್ಟು ಮನಸ್ಸಿಗೆ ಬಂದಷ್ಟು ಹಣ ಪಡೆಯುವುದು ಸಹಾಯಕ ಔಷಧ ನಿಯಂತ್ರಕರದ್ದು ಮುಖ್ಯ ಕೆಲಸವಾಗಿದೆ.ಪರಿವೀಕ್ಷರು ಅದೆಲ್ಲಿ ಪರಿವೀಕ್ಷಣೆ ಮಾಡುತ್ತಿದ್ದಾರೋ ಮಾಹಿತಿ ಇಲ್ಲ.
ಔಷಧ ಮತ್ತು ಕಾಂತಿವರ್ಧಕ ಕಾಯ್ದೆ ಮತ್ತು ನಿಯಮಗಳನ್ನು ಇಡೀಯಾಗಿ ಚೈನ್ ಸ್ಟೊರ್ಸಗಳು ಉಲ್ಲಂಘನೆ ಮಾಡುತ್ತಿದ್ದರೂ ಅತ್ತ ಕಡೆ ಇಲಾಖೆಯ ಅಧಿಕಾರಿಗಳು ಸುಳಿಯುವುದಿಲ್ಲ.
ಚೈನ್ ಸ್ಟೊರ್ಸ್ ಮತ್ತು ಜನೌಷಧಿ ಮೇಲೆ ಕ್ರಮ ಕೈಗೊಂಡವರಲ್ಲಿ ಬಳ್ಳಾರಿ ವೃತ್ತದ ಸಹಾಯಕ ಔಷಧ ನಿಯಂತ್ರಕರ ಹೆಸರುಗಳಲ್ಲಿ ಸುರೇಶ್ ಅವರ ಹೆಸರು ಕೇಳಿ ಬಂದಿದೆ.ಹಾಗೆಯೇ ತಮ್ಮ ವೃತ್ತದಲ್ಲಿನ ದೂರುಗಳನ್ನು ಅವರು ಕಡೆಗಣಿಸಿದ ಉದಾಹರಣೆಗಳಿಲ್ಲ.
ಆದರೆ ಇವರ ವೃತ್ತದಲ್ಲಿ ಅನಧಿಕೃತವಾಗಿ ಪರಿವೀಕ್ಷಣೆ ನಡೆಸಿ,ಔಷಧ ವ್ಯಾಪಾರಿಗಳಿಂದ ಹಣ ಪಡೆದ ಪ್ರಕರಣಗಳೂ ಬಳ್ಳಾರಿಯ ಇನ್ನೊರ್ವ ಮಹಿಳಾ ಎ.ಡಿ.ಸಿ.ಯಿಂದ ನಡೆದದ್ದು ಅಲ್ಲಿ ಗುಟ್ಟಾಗಿ ಉಳಿದಿಲ್ಲ.
ಲೈಸೆನ್ಸ್ ಇಲ್ಲದೆ ನಕಲಿ ವೈಧ್ಯರು,ಆಯುಷ್ ವೈಧ್ಯರು ಮತ್ತು ಶೆಡ್ಯೂಲ್-ಕೆ ನಿಯಮ ಪಾಲಿಸದೆ,ಅಲೋಪತಿ ವೈಧ್ಯರು ಔಷಧ ಮಾರಾಟ ಮಾಡುತ್ತಿದ್ದರೂ ಈ ಅಧಿಕಾರಿಗಳು ಅತ್ತ ಕಣ್ಣು ಹಾಕುತ್ತಿಲ್ಲ.
ಸಾಮಾನ್ಯ ಔಷಧ ವ್ಯಾಪಾರಿಗಳೇ ಇವರಿಗೆ ಟಾರ್ಗೆಟ್ !
ವರ್ಷದ ಮಾಮೂಲು ಪಡೆದರೂ ಅವರ ಮೇಲೆ ಸವಾರಿ ಮಾಡುವುದನ್ನು ಅಧಿಕಾರಿಗಳು ಬಿಡುವುದಿಲ್ಲ.
ಈ ಹಿಂದೆ ಔಷಧ ನಿಯಂತ್ರಣ ಇಲಾಖೆಯಲ್ಲಿ ಅಸ್ತಿತ್ವದಲ್ಲಿದ್ದ ‘ಇಂಟೆಲ್ ಜೆನ್ಸಿ’ ವಿಭಾಗ ಅಧಿಕಾರಿಗಳ ಮೇಲಿನ ದೂರನ್ನು ಸಹ ವಿಚಾರಣೆ ಮಾಡುತ್ತಿತ್ತು.ಈಗ ಔಷಧ ವ್ಯಾಪಾರಿಗಳ ದೂರುಗಳನ್ನೇ ಈ ‘ಜಾಗೃತ ದಳ’ ಪರಿಶೀಲಿಸುವುದಿಲ್ಲ.ಹೆಸರಿಗೆ ಜಾಗೃತ ದಳ. ಅಜಾಗ್ರತೆಯೇ ಈಗ ಇದರ ಕೆಲಸ.
ರಾಜ್ಯದ ಆಧೀನ ಔಷಧ ನಿಯಂತ್ರಕರೇ ‘ಜಾಗೃತ ದಳದ’ ಮುಖ್ಯಸ್ಥರು.ರಾಜ್ಯದ ಔಷಧ ನಿಯಂತ್ರಕರ ಅಣತಿ ಪಡೆದು ಕಾರ್ಯನಿರ್ವಹಿಸುವ ಅನಿವಾರ್ಯತೆ ಈ ದಳಕ್ಕಿದೆ.
ಅಧಿಕಾರದಲ್ಲಿದ್ದಾಗ ಒಂದು ಕಡ್ಡಿಯನ್ನು ಅಲ್ಲಾಡಿಸದ ಅಧಿಕಾರಿಗಳು,ನಿವೃತ್ತಿಯ ನಂತರ ಬಡಾಯಿ ಕೊಚ್ಚಿ ಕೊಳ್ಳುತ್ತಾರೆ.ನಿವೃತ್ತಿಯಾದ ನಂತರ ಅಧಿಕಾರಿಗಳು ನೈಪತ್ಯಕ್ಕೆ ಸೇರಿ ಬಿಡುತ್ತಾರೆ.ಹೀಗಾಗಿ ನಿವೃತ್ತಿ ನಂತರ ಔಷಧ ವ್ಯಾಪಾರಿಗಳಿಂದ ಒಂದು ‘ಸಲಾಮ್’ ಪಡೆಯಲು ಸಹ ಅಧಿಕಾರಿಗಳಿಗೆ ಆಗುವುದಿಲ್ಲ.
ಅಧಿಕಾರದಲ್ಲಿದ್ದಾಗ ಅಧಿಕಾರಿಗಳು ಸತ್ತಂತೆ ಇರಬಾರದು.ಹೀಗಿದ್ದರೆ,ನಿವೃತ್ತಿಯಾದ ನಂತರ ಬದುಕಿದ್ದರೂ ಸತ್ತಂತೆ ಸಾಯುವವರೆಗೂ ಅವರು ಕಾಲ ಕಳೆಯ ಬೇಕಾಗುತ್ತದೆ.
ಔಷಧ ವ್ಯಾಪಾರಿಗಳಷ್ಟು ಅನ್ಯಾಯವನ್ನು ಸಹಿಸಿಕೊಳ್ಳುವವರು ಬೇರೆ ಯಾರೂ ಇರಲಾರರು !
ಅನ್ಯಾಯದ ವಿರುದ್ಧ ಪ್ರತಿಭಟಿಸಬೇಕಾದವರೇ ಅಸಾಯಕರಾದರೇ,ನ್ಯಾಯ-ನೀತಿಗೆ ಬೆಲೆ ಎಲ್ಲಿದೆ ?
ರಾಜ್ಯ ಮತ್ತು ಜಿಲ್ಲೆಗಳಲ್ಲಿ ಎರಡು-ಮೂರು ಔಷಧ ವ್ಯಾಪಾರಿಗಳ ಸಂಘಗಳು.ಅವೆಲ್ಲವೂ ಔಷಧ ವ್ಯಾಪಾರಿಗಳ ಕ್ಷೇಮಾಭಿವೃದ್ಧಿಗಾಗಿ ಹುಟ್ಟಿ ಕೊಂಡಂತವು.ಅವುಗಳಿಂದ ಅದ್ಯಾವ ಕ್ಷೇಮಾಭಿವೃದ್ಧಿಯಾಗಿದೆಯೋ ಔಷಧ ವ್ಯಾಪಾರಿಗಳೇ ಹೇಳಬೇಕು !
ರೋಟರಿ, ಲಾಯಿನ್ಸ್ ಕ್ಲಬ್ ಗಳಲ್ಲಿ ಕಾಲ ಕಳೆಯುವ ಔಷಧ ವ್ಯಾಪಾರಿಗಳು, ಔಷಧ ವ್ಯಾಪಾರಿಗಳ ಸಭೆ ಎಂದರೆ,ತಪ್ಪಿಸಿ ಕೊಳ್ಳಲು ನೂರೊಂದು ನೆಪ ಹೇಳುತ್ತಾರೆ.ಹೀಗಾದಾಗ ಸಂಘಟನೆ ಅದು ಹೇಗೆ ಸಾಧ್ಯ ?
ಅಸಂಘಟಿತರಿಗಾಗಿಯೇ ಔಷಧೀಯ ವಾರ್ತೆ ಪತ್ರಿಕೆ ‘ವೇದಿಕೆ’ ನಿರ್ಮಿಸಿದೆ.ಶುಲ್ಕ ಇಲ್ಲ,ಸಹಾಯ ಕೇಳುವುದಿಲ್ಲ.ಪತ್ರಿಕೆ ಸದಸ್ಯರಾಗುವ ಮೂಲಕ ಔಷಧ ವ್ಯಾಪಾರಿಗಳು ‘ವೇದಿಕೆ’ ಸೇರಿಕೊಳ್ಳುವ ಮನಸ್ಸು ಮಾಡಿ.
“ಪತ್ರಿಕಾ ವೇದಿಕೆ” ಸೇರಿ ಕೊಳ್ಳಲು ಆ ಸಂಘ,ಈ ಸಂಘ ಎಂಬ ಬೇದ-ಬಾವ ಇಲ್ಲ.ವೇದಿಕೆಯಲ್ಲಿ ಎಲ್ಲರೂ ಸಮಾನರು-ಸಮಾನ ಮನಸ್ಕರು.
-ಅಶೋಕಸ್ವಾಮಿ ಹೇರೂರ.