

ಕರ್ನಾಟಕ ರಾಜ್ಯ ಫ಼ಾರ್ಮಸಿ ಕೌನ್ಸಿಲ್ ಎಚ್ಚೆತ್ತು ಕೆಲಸ ಮಾಡುತ್ತಿರುವಾಗ ರಾಜ್ಯದ ಔಷಧ ನಿಯಂತ್ರಣ ಇಲಾಖೆ ಮಖಾಡೆ ಮಲಗಿದೆ !
ಹೌದು ! ರಿಜಿಸ್ಟರ್ಡ್ ಫ಼ಾರ್ಮಾಸಿಸ್ಟಗಳು ತಮ್ಮ ರಿಜಿಷ್ಟ್ರೇನ್ ಸರ್ಟಿಫಿಕೇಟ್ ನ್ನು ಔಷಧ ಅಂಗಡಿಗಳಿಗೆ ಬಾಡಿಗೆಗೆ ಕೊಟ್ಟು,ವಿದೇಶದಲ್ಲೋ,ಹೊರ ರಾಜ್ಯದಲ್ಲೋ ವಾಸವಾಗಿದ್ದಾರೆ.ಸರಕಾರಿ,ಅರೆ ಸರಕಾರಿ ನೌಕರಿ ಮಾಡುತ್ತಾ ಹಾಯಾಗಿದ್ದಾರೆ.ಖಾಸಗಿ ನೌಕರಿ ಸೇರಿಕೊಂಡು ಅಲ್ಲಿ ಕೆಲಸ ಮಾಡುತ್ತಾ ಎರೆಡೆರಡು ಕಡೆ ಸಂಬಳ ಪಡೆದು ಔಷಧ ನಿಯಂತ್ರಣ ಇಲಾಖೆಗೆ ಮೋಸ ಮಾಡುತ್ತಾ ಹಾಯಾಗಿದ್ದಾರೆ.
ಇಂತಹ ಆಯ್ದ ಫ಼ಾರ್ಮಾಸಿಸ್ಟಗಳಿಗೆ ಫ಼ಾರ್ಮಸಿ ಕೌನ್ಸಿಲ್ ನೋಟೀಸ್ ಕೊಟ್ಟು ,ಅದರ ಪ್ರತಿಯನ್ನು
ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಕಾಸ ವಿಕಾಸ ಸೌಧ, ಬೆಂಗಳೂರು
ಮತ್ತು
ಔಷಧ ನಿಯಂತ್ರಕರು, ಅರಮನೆ ರಸ್ತೆ ,ಬೆಂಗಳೂರು.
ಹಾಗೂ
ಆಯಾ ವಿಭಾಗದ ಉಪ ಔಷಧ ನಿಯಂತ್ರಕರು,ಆಯಾ ವೃತ್ತದ ಸಹಾಯಕ ಔಷಧ ನಿಯಂತ್ರಕರು ಇವುರುಗಳಿಗೆ ಕಳುಹಿಸಿದ್ದರೂ ಅಧಿಕಾರಿಗಳು ನೋಟೀಸ್ ಪ್ರತಿಗಳನ್ನು ಯಾವುದೇ ಮೂಲೆಯಲ್ಲಿಟ್ಟು ನಿಷ್ಕಾಳಜಿ ವಹಿಸಿದ್ದು ಸುಳ್ಳೇನಲ್ಲ !
ವಾಸ್ತವವಾಗಿ ಹೀಗೆ ತಮ್ಮ ಫ಼ಾರ್ಮಸಿ ಸರ್ಟಿಫಿಕೇಟ್ ಅನ್ನು ಬಾಡಿಗೆಗೆ ಕೊಟ್ಟು , ಬೇರೆ ವೃತ್ತಿಯಲ್ಲಿ ನಿರತರಾಗಿರುವ ಫ಼ಾರ್ಮಾಸಿಸ್ಟಗಳ ಮೇಲೆ ಐ.ಪಿ.ಸಿ. ಸೆಕ್ಷನ್ 420 ಪ್ರಕಾರ ಪ್ರಕರಣ ದಾಖಲಿಸಬೇಕು.ಇಂತಹ ಫ಼ಾರ್ಮಾಸಿಸ್ಟಗಳ ಬಗ್ಗೆ ಫ಼ಾರ್ಮಸಿ ಕೌನ್ಸಿಲ್ ಗೆ ಮಾಹಿತಿ ನೀಡಿ,ಫ಼ಾರ್ಮಸಿ ಕಾಯ್ದೆ-ನಿಯಮ-ನಿಭಂದನೆಗಳ ಪ್ರಕಾರ ಕ್ರಮಕೈಗೊಳ್ಳಲು ಅವಕಾಶ ಮಾಡಿ ಕೊಡಬೇಕು.ಆದರೆ ಆ ನೋಟೀಸ್ ಗಳ ಬಗ್ಗೆ ಸಹಾಯಕ ಔಷಧ ನಿಯಂತ್ರಕರು ಅಸಡ್ಡೆ ವಹಿಸಿದ್ದೂ ಅಲ್ಲದೆ,ಫ಼ಾರ್ಮಾಸಿಸ್ಟಗಳನ್ನು ಬದಲಿಸಿಕೊಟ್ಟು ಅವರ ತಪ್ಪನ್ನು ಮುಚ್ಚಿ ಹಾಕಿದರು.ಔಷಧ ವ್ಯಾಪಾರಿಗಳಿಗೆ ಸಹಾಯ ಮಾಡಿದ ನೆಪದಲ್ಲಿ ಹಣ ಮಾಡಿದರು.
ರಿಜಿಸ್ಟರ್ಡ್ ಫ಼ಾರ್ಮಾಸಿಸ್ಟ ಔಷಧ ಅಂಗಡಿಯವರಿಗೆ ತನ್ನ ಫ಼ಾರ್ಮಾಸಿಸ್ಟ ಸರ್ಟಿಫಿಕೇಟ್ ಅನ್ನು ಬಾಡಿಗೆಗೆ ಕೊಟ್ಟು ಬೇರೆ-ಬೇರೆ ಕಡೆ ಅಧಿಕೃತವಾಗಿ ಕೆಲಸ ಮಾಡುತ್ತಿದ್ದರೂ,ದಾಖಲೆಗಳ ಮೂಲಕ ಸಂಭಳ ಪಡೆಯುತ್ತಿದ್ದರೂ ಔಷಧ ನಿಯಂತ್ರಣ ಇಲಾಖೆಯ ಯಾವ ಒಬ್ಬ ಅಧಿಕಾರಿಯೂ ಔಷಧ ಮತ್ತು ಕಾಂತಿವರ್ಧಕ ಕಾಯ್ದೆ-1940 ಹಾಗೂ ನಿಯಮ-1945 ಪ್ರಕಾರ ಪ್ರಕರಣ ದಾಖಲಿಸಲಿಲ್ಲ.
ಅಷ್ಟೇ ಅಲ್ಲದೆ ಯಾವ ಒಬ್ಬ ಮೇಲಾಧಿಕಾರಿಯೂ ಈ ಬಗ್ಗೆ ಪ್ರಶ್ನೆ ಮಾಡಲಿಲ್ಲ.ಫ಼ಾರ್ಮಸಿ ಕೌನ್ಸಿಲ್ ನೋಟೀಸ್ ಮೂಲಕ ಮಾಹಿತಿ ನೀಡಿದ್ದರೂ ಕ್ರಮ ಕೈಗೊಳ್ಳದ ಇಲಾಖೆ ಇನ್ನು ಸಾರ್ವಜನಿಕವಾಗಿ ಬರುವ ದೂರುಗಳನ್ನು ಪರಿಶೀಲಿಸುತ್ತಾರೆಂದು ನಿರೀಕ್ಷಿಸುವುದು ಮೂರ್ಖತನವೇ ಸರಿ !
ಈ ಬಗ್ಗೆ ಬಗ್ಗೆ ರಾಜ್ಯದ ಹೈಕೋರ್ಟ್ ನ ಬೆಂಗಳೂರು ಬೆಂಚ್ ನಲ್ಲಿ ಕೇಸ್ ನಡೆಯುತ್ತಿದ್ದರೂ ಅಧಿಕಾರಿಗಳಿಗೆ ಅದರ ಪರಿವೆಯೇ ಇಲ್ಲ.ಕೋರ್ಟ-ಸರಕಾರದ ಭಯವೇ ಇಲ್ಲದವರಿಗೆ ನ್ಯಾಯ-ನೀತಿ ಎಂಬ ಪದಗಳು ಒಂದು ಗೊತ್ತೇ ಇಲ್ಲ.
ಹೊಸ ಲೈಸೆನ್ಸ್ ಕೊಡುವುದಿದೆ ಎಂದರೆ,ವರ್ಷದ ಮಾಮೂಲು ಬರುತ್ತದೆ ತಿಳಿದರೆ,ಎಲ್ಲಿಗೆ ಬೇಕಾದರೂ, ಎಷ್ಟು ದೂರ ಬೇಕಾದರೂ, ಹೋಗಿ ಬರುವ ಸಹಾಯಕ ಔಷಧ ನಿಯಂತ್ರಕರು ಮತ್ತು ಔಷಧ ಪರಿವೀಕ್ಷಕರು ದೂರುಗಳೆಂದರೆ ಕೋರ್ಟ-ಕಚೇರಿ ಎಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಾರೆ.
ಲೈಸೆನ್ಸ್ ಇಲ್ಲದೆ ಅಲೋಪತಿ ಔಷಧ ಮಾರಾಟವಾಗುತ್ತಿವೆ ಎಂದು ಬಾಯಿ-ಬಾಯಿ ಬಡಿದುಕೊಂಡರೂ ಅಧಿಕಾರಿಗಳು ಅತ್ತ ಸುಳಿಯುವುದೇ ಇಲ್ಲ.ಈ ಬಗ್ಗೆ ದೂರುಗಳು ಸಲ್ಲಿಕೆಯಾದರೂ ಇದ್ಯಾವುದೂ ತಮಗೆ ಸಂಭಂದವೇ ಇಲ್ಲ ಎಂದು ವರ್ತಿಸುತ್ತಾ ಮೇಲಾಧಿಕಾರಿಗಳು ಕಾಲ ಕಳೆದರು ಹಾಗೂ ಕಳೆಯುತ್ತಿದ್ದಾರೆ.ಉಪ ಔಷಧ ನಿಯಂತ್ರಕರಿಗಂತೂ ಯಾವುದೇ ನಿರ್ದಿಷ್ಟ ಕೆಲಸಗಳೇ ಇಲ್ಲ.ಅವರೇನಿದ್ದರೂ ಟೈಮ್ ಪಾಸ್ ಅಧಿಕಾರಿಗಳು ಬಿಡಿ.
ಇತ್ತೀಚಿಗೆ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ‘ಪರಿವೀಕ್ಷಣೆ’ ಎಂಬ ಕೆಲಸವನ್ನು ಮರೆತೇ ಬಿಟ್ಟಿದ್ದಾರೆ.ಹಿರಿಯ ಅಧಿಕಾರಿಗಳು ಪರಿವೀಕ್ಷಣೆಯ ಡಾಟಾ ಕೇಳಲಿ,ಸತ್ಯ ತಿಳಿಯುತ್ತದೆ.ಆದರೆ ಅವರು ಯಾವ ಕೆಲಸದಲ್ಲಿ ಬ್ಯೂಸಿ ಯಾಗಿದ್ದಾರೋ ? ದೇವರಿಗೂ ಗೊತ್ತಿರಲಿಕ್ಕಿಲ್ಲ.
ಒಂದು ವೃತ್ತದಲ್ಲಿ ತಿಂಗಳಿಗೆ ಏನಿಲ್ಲವೆಂದರೂ ಹೊಸತಾಗಿ, ಶಿಫ಼್ಟಿಂಗ್ ಅಥವಾ ಪಾಲುದಾರಿಕೆ ಬದಲಾವಣೆ ಎಂಬ ಕಾರಣಕ್ಕಾಗಿ 10 ಹೊಸ ಲೈಸೆನ್ಸ್ ಗ್ರ್ಯಾ೦ಟ್ ಆಗುತ್ತವೆ. ಕಡಿಮೆಯೆಂದರೂ 5 ಲಕ್ಷಕ್ಕೆ ಕೊರತೆ ಇಲ್ಲ.ನಿಜ ಸ್ಥಿತಿ ಹೀಗಿರುವಾಗ ಹಣ ಎಣಿಸುವುದೇ ಅಧಿಕಾರಿಗಳಿಗೆ ಮುಖ್ಯ ಕೆಲಸವಾಗಿ ಬಿಟ್ಟಿದೆ.ಹೀಗಾಗಿ ಅವರಿನ್ಯಾವ ಕೆಲಸ ಮಾಡಿಯಾರು !
ಇಂತಹ ಸಂದಿಗ್ಧ ಸಮಯದಲ್ಲಿ ವಂಚಕ ಫ಼ಾರ್ಮಾಸಿಸ್ಟಗಳನ್ನು ಪತ್ತೆ ಹಚ್ಚಿದ ಫ಼ಾರ್ಮಸಿ ಕೌನ್ಸಿಲ್ ಅವರ ರಿಜಿಷ್ಟ್ರೇನ್ ರದ್ದು ಮಾಡುವ ಕೆಲಸ ಮಾಡುತ್ತಿದೆ. ಈಗ 36 ಜನ ಫ಼ಾರ್ಮಾಸಿಸ್ಟಗಳ ಪಟ್ಟಿ ಬಿಡುಗಡೆ ಮಾಡಿರುವ ಕೌನ್ಸಿಲ್,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿರುವ ಇಂತಹ ಫ಼ಾರ್ಮಾಸಿಸ್ಟಗಳ ಪಟ್ಟಿಯನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ.
ಆದರೆ ರಾಜ್ಯದ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಹಣ ಎಣಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಹೀಗಾಗಿ ಲೈಸೆನ್ಸ್ ಇಲ್ಲದೆ,ಔಷಧ ವ್ಯಾಪಾರ ಮಾಡುವ ನಕಲಿಗಳು ಹಾಯಾಗಿದ್ದಾರೆ. ಬರೆದರೂ ಇಲ್ಲ ,ಬೈದರೂ ಇಲ್ಲ ,ಲೈಸೆನ್ಸ್ ಹೊಂದಿದವರಿಗೆ ರಕ್ಷಣೆಯೇ ಇಲ್ಲದಂತಾಗಿದೆ.
ಔಷಧ ವ್ಯಾಪಾರಕ್ಕಿಳಿಯುವ ಬದಲು,ನಕಲಿ ವೈದ್ಯಕೀಯದಲ್ಲಿ ನಿರತವಾದರೆ,ವೈದ್ಯಕೀಯದ ಜೊತೆಗೆ ಔಷಧ ಮಾರಾಟ ಮಾಡುತ್ತಾ ಹಾಯಾಗಿರಬಹುದು ಎಂದು ಯೋಚಿಸುವುದು ಆಶ್ಚರ್ಯಕರ ವಿಷಯವೇನೂ ಅಲ್ಲ. -ಅಶೋಕಸ್ವಾಮಿ ಹೇರೂರ.