

ರಾಜ್ಯದ ಔಷಧ ನಿಯಂತ್ರಣ ಇಲಾಖೆಯಲ್ಲಿ ಕಾನೂನು ಸುವ್ಯವಸ್ಥೆ ಅಸ್ತವ್ಯಸ್ತ ಗೊಂಡಿದೆ.ಇದಕ್ಕೆಲ್ಲಾ ಕಾರಣ ಮೇಲಾಧಿಕಾರಿಗಳ ತಟಸ್ಥ ನಿಲುವು.ರಾಜ್ಯದಲ್ಲಿರುವ ಎಲ್ಲಾ ಸಹಾಯಕ ಔಷಧ ನಿಯಂತ್ರಕರ ಕಚೇರಿಗಳಲ್ಲಿ ಅಂಧಾ ದರ್ಭಾರ ನಡೆಯುತ್ತಿದೆ.ಹೇಳುವವರು-ಕೇಳುವವರು ಯಾರೂ ಇಲ್ಲದಂತಾಗಿದೆ.ಔಷಧ ವ್ಯಾಪಾರಿಗಳು ಅವರು ಕೇಳಿದಷ್ಟು ಹಣ ಕೊಟ್ಟು ಬರಬೇಕಾಗಿದೆ.
ಅಧಿಕಾರಿಗಳಿಗೆ ಹೊಸ ಲೈಸೆನ್ಸ್ ಕೊಡುವುದೆಂದರೆ, ಎಲ್ಲಿಲ್ಲದ ಹುಮ್ಮಸ್ಸು.50 ಸಾವಿರ ಜೇಬಿಗೆ ಬರುತ್ತವೆ ಎಂಬ ಖುಷಿಯಲ್ಲಿಯೇ ಅವರಿರುತ್ತಾರೆ.ಉಪ ಔಷಧ ನಿಯಂತ್ರಕರಿಗೂ ಕಮಿಷನ್ ಸಿಗುತ್ತಿರಬೇಕು ಹೀಗಾಗಿ ಅವರೂ ಕಪ್ ಚುಪ್ ! ಅಷ್ಟಕ್ಕೂ ಎ.ಡಿ.ಸಿ.ಗಳಿಂದ ಮೇಲಾಧಿಕಾರಿಗಳಿಗೂ ಅಲ್ಪ ಸ್ವಲ್ಪ ಮಾಮೂಲು ಸಂದಾಯವಾಗುತ್ತಿರುವುದು ಸಹಜ ಪ್ರಕ್ರೀಯೆ. ಆದಕ್ಕಾಗಿ ಅವರು ತಟಸ್ಥ ನಿಲುವು ತಾಳುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಇಲಾಖೆಯ ಮುಖ್ಯಸ್ಥರಾದ ಔಷಧ ನಿಯಂತ್ರಕರು ಮತ್ತು ಆಧೀನ ಔಷಧ ನಿಯಂತ್ರಕರು ಕೆಳ ಹಂತದ ಅಧಿಕಾರಿಗಳಾದ ಉಪ ಔಷಧ ನಿಯಂತ್ರಕರು, ಸಹಾಯಕ ಔಷಧ ನಿಯಂತ್ರಕರು ಮತ್ತು ಔಷಧ ಪರಿವೀಕ್ಷಕರ ಮೇಲೆ ನಿಗಾ ಇರಿಸುವುದು ಮುಖ್ಯ.
ರಾಜ್ಯದಲ್ಲಿನ ಎಲ್ಲಾ ವಿಭಾಗದ ಮತ್ತು ವೃತ್ತದ ಕಚೇರಿಗಳಿಗೆ ಮೇಲಾಧಿಕಾರಿಗಳು ಕಾಲ ಕಾಲಕ್ಕೆ ಭೇಟಿ ನೀಡಬೇಕು.ಅಲ್ಲಿನ ಔಷಧ ವ್ಯಾಪಾರಿಗಳ ಸಂಘದ ಮುಖ್ಯಸ್ಥರನ್ನು ಭೇಟಿಯಾಗಬೇಕು.ಅಲ್ಲಿ ಇರುವ ಸಮಸ್ಯೆಗಳನ್ನು ಅರಿತು ಕೊಳ್ಳಬೇಕು.ಪರಿಹಾರವನ್ನೂ ಒದಗಿಸಬೇಕು !
ಪರಿವೀಕ್ಷಣೆಗೆ ಬರೀ ಔಷಧ ವ್ಯಾಪಾರಿಗಳನ್ನು ಗುರಿಯಾಗಿಸಿಕೊಳ್ಳದೆ,ಅನಧಿಕೃತ ಔಷಧ ವ್ಯಾಪಾರಿಗಳಾದ ನಕಲಿ ಮತ್ತು ಆಯುಷ್ ವೈಧ್ಯರ ಆಸ್ಪತ್ರೆಗಳ ಮೇಲೆ ದಾಳಿ ಮಾಡಿ,ಅಧಿಕೃತ ಔಷಧ ವ್ಯಾಪಾರಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು.ಸಗಟು ಔಷಧ ವ್ಯಾಪಾರಿಗಳೇ ಗ್ರಾಹಕರಿಗೆ ಮತ್ತು ನಕಲಿ ಹಾಗೂ ಆಯುಷ್ ವೈಧ್ಯರಿಗೆ ನೇರವಾಗಿ ಔಷಧ ಸರಬರಾಜು ಮಾಡುತ್ತಿರುವ ದೂರುಗಳಿದ್ದು,ಅಂತಹ ಸಗಟು ಔಷಧ ವ್ಯಾಪಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು.
ಇದ್ಯಾವುದನ್ನು ಮಾಡದ ಔಷಧ ನಿಯಂತ್ರಣ ಇಲಾಖೆಯಲ್ಲಿ ಅಜಾಗರುಕತೆ ಉಂಟಾಗಿದೆ. ಇದರಿಂದ ಇಲಾಖೆಯ ಮುಖ್ಯಸ್ಥರ ಹೆಸರುಗಳು ಕೆಡುತ್ತಿವೆ.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಕಾಸ ಸೌಧ,ಬೆಂಗಳೂರು ಇವರಿಗೆ ಲಿಖಿತ ದೂರು ಕೊಡುವ ಧೈರ್ಯವನ್ನು ರಾಜ್ಯದ ಔಷಧ ವ್ಯಾಪಾರಿಗಳು ಮಾಡಬೇಕಾಗಿದೆ.
ನಿವೃತ್ತಿ ಅಂಚಿನಲ್ಲಿರುವ ರಾಜ್ಯದ ಔಷಧ ನಿಯಂತ್ರಕರಾದ ಬಿ.ಟಿ.ಖಾನಾಪುರೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ತಮ್ಮ ಹೆಸರು ಇಲಾಖೆಯಲ್ಲಿ ಅಜರಾಮರವಾಗುವಂತೆ ನೋಡಿಕೊಳ್ಳಬೇಕಾಗಿದೆ.
ನಕಲಿ ವೈಧ್ಯರ ಮತ್ತು ಆಯುಷ್ ವೈಧ್ಯರ ಅನಧಿಕೃತ ಔಷಧ ಮಾರಾಟದ ವಹಿವಾಟು ಮಿತಿ ಮೀರಿದೆ. ಯಾವುದೇ ಲೈಸೆನ್ಸ್ , ಲಂಚ ಅಥವಾ ಮಾಮೂಲು ಪಾವತಿಸದೇ ಅತೀ ಸಹಜವಾಗಿ ನಡೆವ ವಹಿವಾಟು ಇವರದ್ದಾಗಿದೆ.ಇಂತಹ ವ್ಯಾಪಾರವನ್ನು ತಡೆಯದ ಔಷಧ ನಿಯಂತ್ರಣ ಇಲಾಖೆ ಇದ್ದರೆಷ್ಟು ? ಬಿಟ್ಟರೆಷ್ಟು ?
ಆದರೆ ಔಷಧ ನಿಯಂತ್ರಣ ಇಲಾಖೆಯಿಂದ,ವಾಣಿಜ್ಯ ತೆರಿಗೆ ಇಲಾಖೆಯಿಂದ ಮತ್ತು ಕಾರ್ಮಿಕ ಇಲಾಖೆಯಿಂದ ಪರವಾನಿಗೆ ಪಡೆದು ವಹಿವಾಟು ಮಾಡುವ ಔಷಧ ವ್ಯಾಪಾರಿಗಳು ಮಾತ್ರ ಲಂಚ ಪಾವತಿಸಬೇಕು ! ವಾಣಿಜ್ಯ ತೆರಿಗೆ ಹಾಗೂ ಆದಾಯ ತೆರಿಗೆ ಕಟ್ಟಬೇಕು !
ಆದರೆ ಯಾವುದೇ ಲೈಸೆನ್ಸ್ ಇಲ್ಲದೆ ಔಷಧ ಮಾರಾಟ ಮಾಡುವವರಿಗೆ ಇದ್ಯಾವ ಕಟ್ಟಳೆಗಳು ಅನ್ವಯವಾಗುವುದಿಲ್ಲ.ಅವರು ಬಿಂದಾಸ್ ಆಗಿ ಯಾವ ಮತ್ತು ಯಾರ ಭಯವೂ ಇಲ್ಲದೇ ಔಷಧ ವ್ಯಾಪಾರ ಮಾಡುತ್ತಿದ್ದಾರೆ.
ಔಷಧ ವ್ಯಾಪಾರಿಗಳು ಕಿವಿ ತುಂಬಾ ಚಾಡಿ ಹೇಳುತ್ತಾರೆ, ಬಾಯಿ ತುಂಬಾ ಮಾತನಾಡುತ್ತಾರೆ.ಬಡಾಯಿ ಕೊಚ್ಚಿ ಕೊಳ್ಳುತ್ತಾರೆ ದೂರು ಕೊಡಲು ಮಾತ್ರ ಯಾವಾಗಲೂ ಹಿಂದೇಟು ಹಾಕುತ್ತಾರೆ.ಅದೇ ಔಷಧ ವ್ಯಾಪಾರಿಗಳ ದುರ್ದೈವ !
ಔಷಧ ಮತ್ತು ಕಾಂತಿವರ್ಧಕ ನಿಯಮಗಳ ಉಲ್ಲಂಘನೆ ಕಣ್ಣ ಮುಂದೆಯೇ ನಡೆಯುತ್ತಿದ್ದರೂ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು,ಕಣ್ಣು-ಕಿವಿ-ಬಾಯಿ ಮುಚ್ಚಿಕೊಂಡು ಅಧಿಕಾರ ನಡೆಸುತ್ತಿದ್ದಾರೆ.
ಈ ಅಧಿಕಾರಿಗಳು ಅನಧಿಕೃತವಾಗಿ ಔಷಧ ಮಾರಾಟ ಮಾಡುವ ಆಸ್ಪತ್ರೆ, ಕಿರಾಣಿ ಮತ್ತು ಸ್ಟೇಷನರಿ ಅಂಗಡಿಗಳ ಮೇಲೆ ಕ್ರಮ ಜರುಗಿಸದಿದ್ದಲ್ಲಿ ಅವರು ಔಷಧ ನಿಯಂತ್ರಣ ಇಲಾಖೆಯಲ್ಲಿ ಕೆಲಸಮಾಡುವುದೇ ವೇಸ್ಟ !
ಇಂತಹ ಅಧಿಕಾರಿಗಳ ಮೇಲೆ ಯಾವ ಭಯವೂ ಇಲ್ಲದೆ,ಔಷಧ ವ್ಯಾಪಾರಿ ಸಂಘಗಳು ಲೋಕಾಯುಕ್ತಕ್ಕೆ ದೂರು ನೀಡಲಿ ! ಅವರವರ ಕರ್ತವ್ಯ ಅವರು ನಿರ್ವಹಿಸದವರ ಮೇಲೆ ದೂರು ಕೊಡಲು ಯಾರೂ ಹಿಂಜರಿಯುವುದು ಬೇಕಾಗಿಲ್ಲ.
ಒಬ್ಬರು ಅಥವಾ ಇಬ್ಬರೂ ನೀಡುವ ದೂರಿನಿಂದ ಪ್ರಯೋಜನವಿಲ್ಲ.ಪತ್ರಿಕಾ ವರದಿಗಳಿಗೆ ಅಧಿಕಾರಿಗಳು ಸ್ಪಂದಿಸುವ ಕಾಲ ಎಂದೋ ಕಾಣೆಯಾಗಿದೆ.ಹೀಗಾಗಿ ಇಂತಹ ವರದಿಗಳು,ಔಷಧ ವ್ಯಾಪಾರಿಗಳಲ್ಲಿ ಜಾಗ್ರತೆ ಹುಟ್ಟಿಸಲಿ ಎಂಬ ನಿರೀಕ್ಷೆ ಮಾತ್ರ ಇಟ್ಟು ಕೊಳ್ಳಲು ಸಾಧ್ಯ.
ಅಜಾಗ್ರತೆ-ಅಸಾಯಕತೆ,ಭಯ-ಆತಂಕ ಔಷಧ ವ್ಯಾಪಾರಿಗಳನ್ನು ಹೇಡಿಯಾಗಿಸುತ್ತವೆ.ಅವರು ತಾವು ಈ ದೇಶದಲ್ಲಿ ಪ್ರಜ್ಞೆ ಇರುವ ಪ್ರಜೆ ಎಂಬುದನ್ನು ಮಾತ್ರವಲ್ಲ ,ತಮ್ಮ ಕರ್ತವ್ಯವನ್ನೂ ಮರೆಯುತ್ತಾರೆ.ಜನ ಸಾಮಾನ್ಯರು ತಮ್ಮ ಹಕ್ಕು-ಕರ್ತವ್ಯಗಳನ್ನು ಅರಿಯದೇ ಹೋದರೆ ಅಂತಹ ಪ್ರಜೆಗಳು ಬದುಕೀಯೂ ಸತ್ತಂತೆ.
ಅನ್ಯಾಯವನ್ನು ವಿರೋಧಿಸದಿದ್ದರೆ,ತಪ್ಪನ್ನು ಸರಿ ಪಡಿಸದಿದ್ದರೆ,ತಮ್ಮ ಹಕ್ಕನ್ನು ತಾವು ಪಡೆಯದಿದ್ದರೆ ಅದೆಂತಹ ನಾಗರಿಕತೆ ?
ಬ್ರಿಟಿಷ್ ಆಳ್ವಿಕೆಯನ್ನೇ ಮುಂದುವರಿಸಿರುವ ಅಧಿಕಾರಿಗಳನ್ನು ಸಹಿಸಿಕೊಂಡೇ ಇದ್ದರೆ ಅದೆಂತಹ ಸ್ವಾತಂತ್ರ್ಯ ?
-ಅಶೋಕಸ್ವಾಮಿ ಹೇರೂರ.