

ಮನುಷ್ಯ ಬದುಕಿದ್ದಾಗ ಅವನ ಬಾಳ್ವೆ ಚನ್ನಾಗಿರಬೇಕು.ಅದು ಹರಿವ ನೀರಿನಂತೆ ಅಥವಾ ಮೇರು ಪರ್ವತದಂತೆ ಕಾಣುತ್ತಿರಬೇಕು.ಹುಟ್ಟಿದ್ದ್ಯಾಕೆ,ಬದುಕುವುದ್ಯಾಕೆ ಎಂಬ ಜಿಜ್ಞಾಸೆಯಿಂದ ಕೂಡಿರಬಾರದು.ಸಾವನ್ನು ಸುಮ್ಮನೇ ಬರ ಬಾರಬಾರದು,ಅದನ್ನು ಬಯಸಲೂ ಬಾರದು.
ಯುದ್ಧದಲ್ಲಿ ಸಾವನ್ನಪ್ಪಿದರೆ, ವೀರ ಮರಣ.ಅದೇ ಆತ್ಮ ಹತ್ಯೆ ಮಾಡಿಕೊಂಡರೆ,ಹೇಡಿ ಮರಣ.ಅಫ಼ಘಾತದಲ್ಲಿ ಮರಣವಾದರೆ ಅಘಾತ ಮರಣ.ಯಾರೇ ಮರಣ ಹೊಂದಲಿ,ಸಾಧಿಸಿದ ಸಂತೃಪ್ತತೆ ಇರಬೇಕು.ಬದುಕುವ ಅಭಿಲಾಷೆ ಹೊಂದಿಲ್ಲದಿದ್ದರೆ,ಅಂತವರಿಗೆ ಸಾವು ಬೇಗ ಅಪ್ಪಿಕೊಳ್ಳುವುದು ಆಶ್ಚರ್ಯಕರವೇನಲ್ಲ.
ಸತ್ತಾಗ ಅಯ್ಯೊ ಪಾಪ ಎನ್ನದವರು ಇರದಿದ್ದರೆ ಹೇಗೆ ? ಅಥವಾ ಆಯುಷ್ಯ ತುಂಬಿ ಸತ್ತಾಗಲೂ ಮಾತನಾಡುವವರೂ ಇರದಿದ್ದರೆ ಹೇಗೆ ? ಬದುಕಿಗೊಂದು ಅರ್ಥ ಸಿಗದಿದ್ದರೆ ಹೇಗೆ ?
ಬಳಲಿ ಕೊಂಡು,ತೆವಳಿಕೊಂಡು ಜೀವನ ನಡೆಸುವವರೂ ಇರುತ್ತಾರೆ.ಸಾಕಪ್ಪ ಸಾಕು ಈ ಜೀವನ ಎನ್ನುವವರೂ ಇರುತ್ತಾರೆ.ಆದರೆ ಸಾವು ಏಕಾ ಏಕಿ ಯಾರನ್ನು ಅಪ್ಪಿಕೊಳ್ಳುವುದು ಬೇಡ.
ಒಳ್ಳೆಯ ಗಂಡ-ಹೆಂಡತಿ ದೊರೆಯಬೇಕಾದರೆ,ಒಳ್ಳೆಯ
ಮಕ್ಕಳು ಜನಿಸಬೇಕಾದರೆ,ಒಂದಿಷ್ಟು ಪುಣ್ಯ ಮಾಡಿರಬೇಕು.ಇಲ್ಲದಿದ್ದರೆ ತಂದೆ-ತಾಯಿಗಳ ಜೀವನ ಬಿಗಿ ಹಿಡಿದ ಮುಷ್ಟಿಯಾಗಿಬಿಡುತ್ತದೆ.ಹೊತ್ತು ಹೆತ್ತು ಹಡೆದದ್ದು ಅಲ್ಲದೆ,ಅವರ ಜೀವನ ದುಸ್ಥರವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಪಾಲಕರದ್ದಾಗಿ ಬಿಡುತ್ತದೆ.
ಸಾವು ತಾನಾಗಿಯೇ ಬರಲಿ,ಅಡ್ಡಿಯಿಲ್ಲ.ಆದರೆ ಬಯಸಿ, ಬಯಸಿ ತಂದು ಕೊಳ್ಳುವುದು ಇದೆಯಲ್ಲ ,ಇದು ಹೇಡಿತನದ ಲಕ್ಷಣ.ಮಮ್ಮೊಕ್ಕಳು ಬಂದಿವೆ,ವಯಸ್ಸು ಅರವತ್ತಾಯ್ತಲ್ಲ , ಇನ್ನೇನೂ ಎಂದು ಮಾತನಾಡಿ- ಮಾತನಾಡಿ ಸತ್ತವರಿದ್ದಾರೆ.ಒಳ್ಳೆಯ ನೌಕರಿ, ಕೈತುಂಬ ಸಂಭಳ, ಬಯಸಿದಾಗಲೆಲ್ಲಾ ಕೈತುಂಬಾ ಲಂಚ ಸಿಗುವ ಅಧಿಕಾರ ಹೊಂದಿದ್ದವರೂ ಜಿಗುಪ್ಸೆಯಿಂದ ಸತ್ತಿದ್ದಾರೆ.
ಮಕ್ಕಳು ನೋವು ಕೊಟ್ಟಾಗ,ಮನನೊಂದು ಜೀವ ಬಿಟ್ಟವರಿದ್ದಾರೆ.ಹದಿ ಹರೆಯದಲ್ಲಿ ಚಟಗಳ ಬೆನ್ನು ಹತ್ತಿದವರು ಹರೆಯದಲ್ಲೊ ,ಅಥವಾ ಅರ್ಧ ವಯಸ್ಸಿನಲ್ಲೊ ಜೀವ ಕಳೆದು ಕೊಂಡಿದ್ದಾರೆ.ಇಡೀ ಆಯುಷ್ಯ ಮುಗಿಸಿ ಇಹ ಲೋಕ ತ್ಯಜಿಸಿದವರೂ ಇದ್ದಾರೆ.ಜೀವ ಸಂತೃಪ್ತವಾಗಿರಬೇಕೇ ಹೊರತು, ಅಸಂತೃಪ್ತವಾಗಿರಬಾರದು.ಎಲ್ಲಾ ಇದ್ದು ಸುಖಾ ಸುಮ್ಮನೇ ಕೊರಗಿ ಸಾಯುವುದು ಇದೆಯಲ್ಲ ,ಇದೇ ಬೇಡವಾದದ್ದು.
ಕೆಲವರಿರುತ್ತಾರೆ,ಮಕ್ಕಳಿಂದ ತಾವು ಗಳಿಸಿದ ಆಸ್ತಿ ಎಲ್ಲಾ ಹಾಳಾಗಿದ್ದರೂ ಅದೇ ಜಿಪುಣತನದ ಜೀವನ ನಡೆಸಿ, ಸಂಸಾರವೆಂದರೆ ಇಷ್ಟೇ ಎಂಬ ಜಿಗುಪ್ಸೆಯ ಭಾವನೆಯನ್ನು ಮನೆಯವರೆಲ್ಲರ ತಲೆ ಹಿಡಿಸಿ ಬಿಟ್ಟಿರುತ್ತಾರೆ.ನೆಮ್ಮದಿಯ ಊಟ,ನೆಮ್ಮದಿಯ ನಿದ್ದೆ, ನೆಮ್ಮದಿಯ ಬದುಕು ಯಾವುದೂ ಅವರಿಗೆ ಬೇಕಿರುವುದಿಲ್ಲ.ಬದುಕಬೇಕು,ಬದುಕಿ ತೋರಿಸಬೇಕು ಎಂಬ ಚಲ ಇಲ್ಲದಿದ್ದರೆ, ಅದು ಬದುಕಿಗೆ ಅವಮಾನ.
ಈ ಸಾರಿ ಇಬ್ಬರು ಗೆಳೆಯರು ಸಾವನ್ನಪ್ಪಿದ್ದಾರೆ.ಒಬ್ಬರು ‘ಅಧಿಕಾರಿ’ ಬರೀ ವಯಕ್ತಿಕ ಜೀವನದಲ್ಲಿ ಅಲ್ಲ , ಸಾರ್ವಜನಿಕ ಜೀವನದಲ್ಲಿಯೂ ಜಿಗುಪ್ಸೆ ಹೊಂದಿದವರು.ಯವ್ವನದಲ್ಲಿ ಸಿಗರೇಟ್, ಅಲ್ಕೋಹಾಲ್ ಸೇವನೆಗೆ ಅಂಟಿಕೊಂಡವರು.ಆ ನಂತರ ನಿದ್ದೆ-ಮಂಪರು ಬರುವ ಮಾತ್ರೆಗಳ ದಾಸರಾದವರು.ನೌಕರಿ ಮಾಡುವಾಗಲೂ ಸತ್ತಂತೆಯೇ ಇದ್ದವರು.ಅವರ ಇರುವಿಕೆಗೂ ಸಾವಿಗೂ ಏನೂ ವ್ಯತ್ಯಾಸ ಕಂಡು ಬರಲಿಲ್ಲ.ಹೀಗಾಗಿ ಯಾರೂ ಅವರ ಸಾವನ್ನು ಗಂಭೀರವಾಗಿ ತೆಗೆದು ಕೊಳ್ಳಲಿಲ್ಲ.
ಯಾರ ಸಾವನ್ನು ಬಯಸಬಾರದು,ನಿಜ.ಆದರೆ ಅವರ ಸಾವಿನ ನಂತರ ಸಾವಿರಾರು ಅಲ್ಲದಿದ್ದರೂ ನೂರಾರು ಜನರ ನಾಲಿಗೆಯ ಮೇಲೆ ಸತ್ತವರ ಹೆಸರು ಹರಿದಾಡದಿದ್ದರೆ ಹೇಗೆ ? ತೀರಾ ಅಪ್ರೋಜಕ ಎನಿಸಿಕೊಂಡು ಸಾಯಬಾರದು,ಅಲ್ಲವೆ ?
ಸಾರ್ವಜನಿಕ ಸೇವೆಯೂ ಇಲ್ಲ.ಸರಕಾರದ ಸೇವೆಯೂ ಇಲ್ಲ.ಸಂಭಳ,ಲಂಚ ಮಾತ್ರ ಬೇಕು ಎಂದರೆ ಹೇಗೆ ? ಆದರೂ ನಮ್ಮ ಔಷಧ ವ್ಯಾಪಾರಿಗಳು ಹೆಂಗರಳು ಉಳ್ಳವರು ಕಣ್ರಿ.ಮೆಸೇಜ್ ಗಳ ಮೂಲಕ ಸಂತಾಪ ಸೂಚಿಸಿದ್ದೇ ಸೂಚಿಸಿದ್ದು.
ಮತ್ತೊಬ್ಬರು ಮೆಡಿಕಲ್ ರಿಪ್ರೇಜ೦ಟೇಟಿವ್ ಅಗಿದ್ದವರು.ವಯಸ್ಸಿನಲ್ಲಿ ಹೊಗೆ,ಎಣ್ಣೆಯ ಸಹವಾಸ ಮಾಡಿದವರೇ.ಆದರೆ ಜೀವನದಲ್ಲಿ ನೊಂದಿದ್ದರು. ಹುಟ್ಟಿದ ಊರು ಬಿಟ್ಟು ,ಬದುಕು ಕಟ್ಟಿಕೊಳ್ಳಲು ಪರ ಊರ ವಾಸ ಮಾಡಿದ್ದರು.ಸಾಯುವ ವಯಸ್ಸು ಅಲ್ಲದಿದ್ದರೂ,ಕ್ಯಾನ್ಸರ್ ನಿಂದ ತೀರಿ ಹೋದರು.
ಸಾಯುವ ಎರಡು-ಮೂರು ದಿನಗಳ ಮುನ್ನ ಅವರ ವ್ಯಾಟ್ಸಾಪ್ ನಿಂದ ನನಗೆ ಮಿಸ್ಡ್ ಕಾಲ್ ಬಂದಿತ್ತು.ಸುಮ್ಮನೇ ವ್ಯಾಟ್ಸಾಪ್ ನೋಡುವಾಗ ಕಾಲ್ ಆಗಿರಬಹುದು ಎಂದುಕೊಂಡು ಸುಮ್ಮನಾಗಿದ್ದೆ. ಒಳ್ಳೆಯ ಮನುಷ್ಯ ಇಷ್ಟು ಬೇಗ ನಮ್ಮನ್ನು ಅಗಲಬಾರದಿತ್ತು.ಹಲವರು ಮನದಲ್ಲಿಯೇ ಸಂತಾಪ ಹೇಳಿರಲು ಸಾಕು.ಯಾರಿಗೂ ಅಕಾಲಿಕ ಮರಣ ಬೇಡ.
ಶರಣರ ಬದುಕನ್ನು ಮರಣದಲ್ಲಿ ನೋಡು/ ಶರಣರ ಗುಣವನ್ನು ಮರಣದಲ್ಲಿ ಕಾಣು ಎನ್ನುವಂತೆ ಬದುಕಬೇಕೇ ಹೊರತು.ಭೂಮಿಗೆ ಭಾರ ಎಂದೆನಿಸಿಕೊಂಡು ಸಾವನ್ನಪ್ಪ ಬಾರದು.ಸಾವಲ್ಲಿಯೂ ಸಾಧಿಸಿದ ಸಾರ್ಥಕತೆ ಇರಬೇಕು.
-ಅಶೋಕಸ್ವಾಮಿ ಹೇರೂರ.