December 23, 2024
FB_IMG_1705124197903

ಅಧಿಕಾರಿಗಳ ಉದ್ರಿ ಭಾಷಣ ನಮಗೆ ಬೇಕೆ ?

ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಆಗಾಗ್ಗೆ ತಮ್ಮ ವ್ಯಾಪ್ತಿ ಅಥವಾ ವಿಭಾಗದಲ್ಲಿ ಔಷಧ ವ್ಯಾಪಾರಿಗಳಿಗೆ “ನಿರಂತರ ಕಲಿಕಾ ಕಾರ್ಯಕ್ರಮ” ಎಂಬ ಜೊಳ್ಳು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾರೆ.ಕಾರ್ಯಕ್ರಮದ ಆಯೋಜಕರು ಔಷಧ ವ್ಯಾಪಾರಿ ಸಂಘಗಳೇ ಆಗಿರುತ್ತವೆ. ಅಂದಮೇಲೆ ಖರ್ಚು-ವೆಚ್ಚ ಎಲ್ಲವೂ ಅವರದ್ದೇ ! ಬಿಳಿ ಅನೆಗಳನ್ನು ಸುಮ್ಮನೆ ಕಳುಹಿಸಲು ಆದೀತೆ ? ಹಾರ-ತುರಾಯಿ,ಶಾಲು-ಸನ್ಮಾನ ಇದ್ದೇ ಇರುತ್ತೇ !

ಅಧಿಕಾರಿಗಳು ಬರುತ್ತಾರೆಂದರೆ ಸುಮ್ಮನೆ ಇರಲಾದೀತೆ ? ಎಲ್ಲಾ ಔಷಧ ವ್ಯಾಪಾರಿಗಳೂ ಹಾಜರಿರುತ್ತಾರೆ.ಅನಿವಾರ್ಯವಾಗಿ ಪಂಚೇಂದ್ರಿಯಗಳನ್ನು ಬಿಗಿ ಹಿಡಿದುಕೊಂಡು
ಅಧಿಕಾರಿಗಳ ಉದ್ರಿ ಭಾಷಣವನ್ನು ಕೇಳಲೇಬೇಕಾಗುತ್ತೆ.

“ನಿರಂತರ ಕಲಿಕಾ ಕಾರ್ಯಕ್ರಮ” ಎಂಬುದು ಬ್ರಿಟೀಷರ ಕಾಲದಲ್ಲಿ ರಚನೆಯಾದ ಔಷಧ ಮತ್ತು ಕಾಂತಿವರ್ಧಕ ಕಾಯ್ದೆ ಮತ್ತು ನಿಯಮಗಳನ್ನು ಪಠಿಸುವ ಕಾರ್ಯಕ್ರಮ.ಔಷಧ ವ್ಯಾಪಾರಿಗಳ ತೊಂದರೆ-ತಾಪತ್ರೆಯಗಳನ್ನು ಹೇಳಿಕೊಳ್ಳುವ ಕಾರ್ಯಕ್ರಮವಂತೂ ಅಲ್ಲ.

ಔಷಧ ವ್ಯಾಪಾರಿಗಳನ್ನು ಮತ್ತಷ್ಟು ಅಂಜಿಸಿ, ಅಧಿಕಾರಿಗಳು ತಮ್ಮ ಕಪಿ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳುವ ಒಂದು ಪ್ರೊಗ್ರಾಮ್ ಅಷ್ಟೇ.

ಶೆಡ್ಯೂಲ್ ಎಚ್, ಎಚ್-1 ಮತ್ತು ಎಕ್ಸ್ ಔಷಧಗಳ ನಿರ್ವಹಣೆಯ ಬಗ್ಗೆ ಅಧಿಕಾರಿಗಳು ಹೇಳುತ್ತಾ ಹೋಗುತ್ತಾರೆ.ಇಂತಹ ಔಷಧಗಳನ್ನು ಬರೆಯುವ, ಲೈಸೆನ್ಸ್ ಇಲ್ಲದೆ ಮಾರಾಟ ಮಾಡುವ ನಕಲಿ/ಅನಧಿಕೃತ ವೈದ್ಯರ ಮೇಲೆ ಅವರು ಚಕಾರ ಎತ್ತುವುದಿಲ್ಲ.

ಔಷಧ ವ್ಯಾಪಾರಿಗಳ ಸಮಸ್ಯೆಗಳ ಪರಿಹಾರಕ್ಕೆ ಯಾವ ವೇದಿಯೂ ಸಿದ್ಧವಾಗುವುದಿಲ್ಲ. ಹಾಗೇನಾದರೂ ಸಿದ್ಧವಾದರೂ ಅದು ಕೈ “ಬಿಸಿ” ಮಾಡುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ.

ಈ ಕಲಿಕಾ ಕಾರ್ಯಕ್ರಮ,ಅಧಿಕಾರಿಗಳ ವೆಲ್ ಕಮ್, ಸೆಂಡ್ ಆಫ಼್ ಕಾರ್ಯಕ್ರಮದಲ್ಲಿ ಯಾರಾದರೂ ಒಬ್ಬರು ಈ ವಿಷಯ ಪ್ರಸ್ಥಾಪಿಸಿದರೆ ಸಾಕು,ಆ ವ್ಯಕ್ತಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಂತೆ ಅಥವಾ ವೇದಿಕೆಗೆ ಕರೆಯದಂತೆ ಇಲ್ಲವೇ ಮೈಕ್ ನೀಡದಂತೆ ಅಧಿಕಾರಿಗಳು ಆಯೋಜಕರಿಗೆ
ತಾಕೀತು ಮಾಡುತ್ತಾರೆ.ಔಷಧ ವ್ಯಾಪಾರಿ ಸಂಘದ ಲೀಡರ್ ಗಳು ಸಹ ಅಧಿಕಾರಿಗಳನ್ನು ಪ್ರಶ್ನೆ ಮಾಡುವವರನ್ನು ಕೈ ಬಿಟ್ಟು ಬಿಡುತ್ತಾರೆ.

ನನಗೂ ಇದರ ಕಹಿ ಅನುಭವವಾಗಿದೆ.20-25 ವರ್ಷಗಳ ಹಿಂದೆ ಅಧಿಕಾರಿಗಳೇ ನನ್ನನ್ನು ಕಾಲೇಜೊಂದರಲ್ಲಿ ಹಮ್ಮಿಕೊಳ್ಳಲಾಗಿದ್ದ “Pharmacist’s Averseness Program” ಗೆ ಆಹ್ವಾನಿಸಿದ್ದರು.”ಫ಼ಾರ್ಮಸಿಸ್ಟ ಅವೇರನೆಸ್ ಕಾರ್ಯಕ್ರಮ ಬೇಕಿಲ್ಲ.ಅಧಿಕಾರಿಗಳು ಫ಼ೀಲ್ಡಗೆ ಇಳಿದರೆ ಸಾಕು, ಅವೇರನೆಸ್ ಬಂದು ಬಿಡುತ್ತದೆ” ಎಂದಿದ್ದೆ.ನನ್ನ ಮಾತು ಬದಲಾದ ಕೂಡಲೇ ನನ್ನನ್ನು ಆಹ್ವಾನಿಸಿದ್ದ ಅಧಿಕಾರಿಯೊಬ್ಬರು ತಮ್ಮ ಕೈಯಲ್ಲಿ ವಾಚು ತೋರಿಸುತ್ತಾ , ಸಮಯ ಇಲ್ಲ ಎನ್ನುವಂತೆ, ಮಾತು ಮುಗಿಸಲು ಸೊನ್ನೆ ಮಾಡುತ್ತಿದ್ದರು.

ಆ ನಂತರ ಕಾಲೇಜ್ ಟೀಚಿಂಗ್ ಸ್ಟಾಫ಼್ ಮಾತನಾಡುತ್ತಾ “Ashokswamy Heroor spoke practical matters, he is a practical man” ಎಂದು ಹೊಗಳ ತೊಡಗಿದರು.ಆಗ ಅಧಿಕಾರಿಗಳು ಪೇಚಿಗೆ ಸಿಲುಕಿಸಿದ್ದು ಸುಳ್ಳಲ್ಲ. “ಹೇರೂರ ಸ್ವಾಮಿಯನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಬಾರದೆಂದು” ಅಂದೇ ಎಲ್ಲ ಅಧಿಕಾರಿಗಳಿಗೂ ಮೇಸೇಜ್ ಹೋಗಿರಲು ಸಾದ್ಯ.

ಕಾರ್ಯಕ್ರಮದಲ್ಲಿ ಈಗಿನ ಬಳ್ಳಾರಿ ವಿಭಾಗದ ಉಪ ಔಷಧ ನಿಯಂತ್ರಕ ಎಚ್.ರೇವಣಸಿದ್ದಪ್ಪ , ಬೆಂಗಳೂರು ಕೇಂದ್ರ ಕಚೇರಿಯ ಸಹಾಯಕ ಔಷಧ ನಿಯಂತ್ರಕ ಗೋಣಿ ಫ಼ಕೀರಪ್ಪ , ಬೆಳಗಾವಿಯ ಎನ್.ವಿ.ರಘುರಾಮ್ , ಉಡುಪಿಯ ಕೆ.ವಿ.ನಾಗರಾಜ್ ಮತ್ತು ಉಪ ಔಷಧ ನಿಯಂತ್ರಕರಾಗಿ ಕಾರ್ಯನಿರ್ವಹಿಸಿ, ನಿವೃತ್ತರಾಗಿರುವ ಎಮ್.ಎಸ್.ಕುಷ್ಟಗಿ, ಎಚ್.ಎಸ್.ಆನೆಗುಂದಿ,ಶಾಂತಾರಾಮ್ ಶೆಟ್ಟಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮತ್ತೊಮ್ಮೆ ಕುಲಕರ್ಣಿ & ಕುಲಕರ್ಣಿ ಬೆಳಗಾವಿ ಕಾರ್ಯಕ್ರಮವೊಂದಕ್ಕೆ ಕರೆಯಿಸಿದ್ದರು.ವೇದಿಕೆಯ ಮೇಲೆ ನನ್ನನ್ನು ಕರೆಯಲೇ ಇಲ್ಲ.ಆಗ್ಗೆ ಹೊಸದಾಗಿ ಆರಂಭವಾಗಿದ್ದ ಕರ್ನಾಟಕ ಕೆಮಿಸ್ಟ & ಡಿಸ್ಟ್ರಿಬ್ಯೂಟರ್ಸ ಅಸೋಸಿಯೇಷನ್ ಅದ್ಯಕ್ಷ ಬಿ.ಲೋಕೇಶ್, ಆಗ ರಾಜ್ಯ ಔಷಧ ನಿಯಂತ್ರಕರಾಗಿದ್ದ ರಘುರಾಮ್ ಭಂಡಾರಿ ಮತ್ತಿತರರು ವೇದಿಕೆಯ ಮೇಲಿದ್ದರು.

ವೇದಿಕೆಯ ಮೇಲಿದ್ದ So-called leader ಗಳು, ಅಧಿಕಾರಿಗಳು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಹುತೇಕ ಔಷಧ ವ್ಯಾಪಾರಿಗಳು ಹೊರಟು ಹೋದ ಮೇಲೆ ನನಗೆ ಒಂದೈದು ನಿಮಿಷ ಮಾತನಾಡಲು ಮೈಕ್ ಕೊಟ್ಟರು.ನನ್ನ ಮಾತು ಆರಂಭವಾಗಿದ್ದೇ ತಡ, ಹೊರಗಿದ್ದ ಕೆಲವರು ಒಳಗಡೆ ಬಂದರು ! ಅಲ್ಲಿಯವರೆಗೂ ಪರಸ್ಪರ ಹೊಗಳಿಕೆಗೆ ಮೀಸಲಾಗಿದ್ದ ಭಾಷಣಗಳನ್ನು ಕೇಳಿ ಆಕಳಿಸುತ್ತಿದ್ದವರು,ನಿದ್ದೆಯ ಮಂಪರಿನಿಂದ ಎದ್ದರು.ನನ್ನ ಮಾತು ಮುಗಿದ ನಂತರ ನನ್ನ ಕೈ ಕುಲುಕಲು ಹಲವರು ಮುಂದಾದರು.ಮುಂದಿನ ದಿನಗಳಲ್ಲಿ ಅಲ್ಲಿಯ ಲೀಡರ್ ಗಳು ನನ್ನನ್ನು ಆಹ್ವಾನಿಸುವ ಗೋಜಿಗೆ ಹೋಗಿಲ್ಲ.

ಎರಡು-ಮೂರು ವರ್ಷಗಳ ಹಿಂದೆ ಬೆಂಗಳೂರಿನ ಆನೆಕಲ್ ನಲ್ಲಿ ಔಷಧ ವ್ಯಾಪಾರಕ್ಕೆ ಸಂಬಂಧಿಸಿದ ಸಾಫ಼್ಟವೇರ್ ಕಂಪನಿಯವರು ಆಯೋಜಿಸಿದ್ದ ಕಾರ್ಯಕ್ರಮ ಇತ್ತು.ಹಿರಿಯ ಔಷಧ ವ್ಯಾಪಾರಿ ಸಿ.ಕೆ.ಸತ್ಯನಾಥ ಅವರ ಆಹ್ವಾನದಂತೆ ಅತಿಥಿಯಾಗಿ ಭಾಗವಹಿಸಿದ್ದೆ , ಅಲ್ಲಿನ ಎ.ಡಿ.ಸಿ.ಗಣೇಶ್ ಬಾಬು, ನಿವೃತ್ತ ಡಿ.ಡಿ.ಸಿ., ಅಂಬರ್ ಮತ್ತು ರೆಡ್ಡಿ ವೇದಿಕೆಯಲ್ಲಿದ್ದರು.ಅಧಿಕಾರಿಗಳ ಭಾಷಣ ಮುಗಿದ ನಂತರ ಔಷಧ ವ್ಯಾಪಾರಿಗಳು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮಾತನಾಡಿದೆ.ಹಲವರು ಮಾತು ಮೆಚ್ಚುಗೆ ವ್ಯಕ್ತಪಡಿಸಿದರು.

ಯಾರೇ ಇರಲಿ ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ಅವಕಾಶ ಇರಬೇಕು ! ಇಲ್ಲದಿದ್ದರೆ ಕಾರ್ಯಕ್ರಮಗಳ ಉದ್ದೇಶ ಇಡೇರುವುದಿಲ್ಲ.ಔಷಧ ವ್ಯಾಪಾರಿಗಳ ಒಳ ಬೇಗುಧಿಗೆ ಔಷಧ ಸಿಗುವುದಿಲ್ಲ.ಅವರ ಒಡಲಾಳ, ಮನದಾಳದ ಅಳಲು ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲ.ಅವರಿಗೆ ಅರ್ಥೈಸಲು ಆಗುವುದಿಲ್ಲ.

ಔಷಧ ವ್ಯಾಪಾರಿಗಳ ಕ್ಷೇಮಕ್ಕೆ ಆಗದ ಸಂಘಗಳ,
ಸಂಘಟನೆ-ಸ್ವಾತಂತ್ರ್ಯ ಎಲ್ಲಾ ಬರೀ ಓಳು ! ಅಧಿಕಾರಿಗಳನ್ನು ವಿಜ್ರಂಭಿಸುವ,ಮೆರೆಸುವ, ಸಂಘದ ಪದಾಧಿಕಾರಿಗಳು ಕೃತಾರ್ಥರಾಗುವ, ಔಷಧ ವ್ಯಾಪಾರಿಗಳನ್ನು ದುಗುಡಕ್ಕೆ ದೂಡುವ
“ನಿರಂತರ ಕಲಿಕಾ ಕಾರ್ಯಕ್ರಮ” ಅರ್ಥ ಕಳೆದುಕೊಂಡು ಕಾರ್ಯ-ಕ್ರಮವಾಗುತ್ತೆ ಅಷ್ಟೇ !

-ಅಶೋಕಸ್ವಾಮಿ ಹೇರೂರ

About The Author

Leave a Reply