ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆಯಲ್ಲಿನ ಬಹುತೇಕ ಅಧಿಕಾರಿಗಳು ನೀತಿ ಗೆಟ್ಟವರಾಗಿದ್ದಾರೆ.ಮತಿ ಇದ್ದವರು ಇದ್ದಾರಾ ? ಎಂದು ಹುಡುಕಿದರೆ,ಸಿಗುವುದು ತುಂಬಾ ವಿರಳ.ಈ ವಿರಳ ಪಟ್ಟಿಯಲ್ಲಿ ಇರುವವರಾದರೂ ಯಾರು ? ಇದ್ದರೂ ನೀತಿಗೆಟ್ಟ-ಮತಿಗೆಟ್ಟ ಅಧಿಕಾರಿಗಳ ಸಂಖ್ಯೆ ತುಂಬಾ ಹೆಚ್ಚಾಗಿರುವುದರಿಂದ ‘ಮತಿ’ ಇದ್ದವರ ಬಗ್ಗೆ ಬರೆದರೆ, ಬಹು ಸಂಖ್ಯಾತ ಮತಿಗೇಡಿಗಳು ಒಂದಾಗಿ ವರ್ತೂಲ ರಚಿಸಿಕೊಂಡು ಬಿಡುತ್ತಾರೆ.ಈ ಅಪಾಯದ ವರ್ತೂಲ, ಮತಿ ಇದ್ದವರನ್ನು ಕೆಡಿಸಿ ಬಿಡುತ್ತದೆ.
ನಿವೃತ್ತರಾದವರಿಗೂ ಇಲಾಖೆಯ ಮೇಲಿನ ವ್ಯಾಮೋಹ ಹೋಗಿಲ್ಲ ಎಂದರೆ ಇಲಾಖೆಯಲ್ಲಿ ಅದೆಷ್ಟು ಲಾಭ ಇರಬಹುದು ? ಇದು ಸಾರ್ವಜನಿಕರಿಗೆ ಚರ್ಚೆಯ ವಿಷಯವೇ ಸರಿ.ಆದರೆ ಔಷಧ ವ್ಯಾಪಾರಿಗಳಿಗೆ ಇದು ಸಾಮಾನ್ಯವಾದ ಸಂಗತಿ.ಅಧಿಕಾರಿಗಳಂತೂ ಸತ್ಯವನ್ನು ಅರಿತವರೇ.ಹೀಗಾಗಿ ಅವರು ಬಾಯಿ ಬಿಡುವುದಿಲ್ಲ.
ಒಂದು ಅಂಗಡಿಯ ಮಾಮೂಲು ವರ್ಷಕ್ಕೆ ಕನಿಷ್ಠ ರೂ.20 ಸಾವಿರ ಎಂದರೂ ರಾಜ್ಯದಲ್ಲಿ ವರ್ಷಕ್ಕೆ ನೂರಾರು ಕೋಟಿಗೂ ಮೀರಿದ ವ್ಯವಹಾರ.ಹೊಸ ಅಂಗಡಿ,ಸ್ಥಳ ಬದಲಾವಣೆ ಹಾಗೂ ಮಾಲೀಕರ ಬದಲಾವಣೆ/ ಪಾಲುದಾರರ ಬದಲಾವಣೆ ಎಂದರೆ ಒಂದು ಅಂಗಡಿಗೆ 30 ರಿಂದ 50 ಸಾವಿರ.ಇದು ಬಹು ಕೋಟಿ ವ್ಯವಹಾರ.ಸಾರ್ವಜನಿಕವಾಗಿ ಗುರುತಿಸಿ ಕೊಳ್ಳದ, ಅತೀ ಸಣ್ಣ ಇಲಾಖೆಯ ಅತಿ ದೊಡ್ಡ ವಹಿವಾಟು ಇದು.
ಇಲ್ಲಿ ಡ್ರಗ್ಸ್ ಇನ್ಸಪೆಕ್ಟರ್ ನಿಂದ ಹಿಡಿದು ಮೇಲಾಧಿಕಾರಿಗಳವರೆಗೂ ಎಲ್ಲರೂ ಕೋಟ್ಯಾಧಿಪತಿಗಳೇ.ಆದರೂ ಅಮಾಯಕರಂತೆ ಇರುತ್ತಾರೆ,ಅಬ್ಬೇಪಾರಿಗಳಂತೆ ಕಾಣಿಸುತ್ತಾರೆ.ಕಾಯ್ದೆ-ಕಾನೂನು ಹೇಳುವ ಈ ನಿಪುಣರು ನಿಯಮಗಳನ್ನು ಪಾಲಿಸುವಂತೆ ಎಂದೂ ಹೇಳುವುದಿಲ್ಲ.ಏಕೆ ಪಾಲಿಸಿಲ್ಲ ಎಂದಷ್ಟೇ ಕೇಳುತ್ತಾರೆ,ನಂತರ ವ್ಯಾಪಾರ ಕುದುರಿಸುತ್ತಾರೆ.
ಔಷಧ ವ್ಯಾಪಾರಿ ಸಂಘಟನೆಗಳ ಬಹುತೇಕ ಪ್ರಮುಖರು, ವ್ಯವಹಾರ ಕುದುರಿಸುವ ಏಜೆಂಟರು. ವ್ಯವಹಾರ ಕುದುರಿತೋ ಎಲ್ಲರ ದಿಲ್ ಖುಷ್.
ಔಷಧ ಪರಿವೀಕ್ಷಕರಿಂದ-ಸಹಾಯಕ ಔಷಧ ನಿಯಂತ್ರಕರವರೆಗೆ ಒಂದು ರೀತಿಯಾದರೆ,ಹಾಲು ಕಾಯ್ದ ನಂತರ ಕೆನೆ ತಿನ್ನಲು ಉಪ ಔಷಧ ನಿಯಂತ್ರಕರು ಪ್ರವೇಶ ಮಾಡುತ್ತಾರೆ.ಮೇಲಿನವರಿಗೆ ಬೆಣ್ಣೆ-ತುಪ್ಪ ಹೀಗೆ ಅವರವರ ಪಾಲು ಅವರಿಗೆ.
ಬಹಳಷ್ಟು ಔಷಧ ವ್ಯಾಪಾರಿಗಳು ಬಹಳ ಮಾತನಾಡುತ್ತಾರೆ ಆದರೆ ಧೈರ್ಯ ತುಂಬಾ ಕಡಿಮೆ. ಏನಾದರೂ ಮಾಡಿ ವ್ಯವಹಾರ ಕುದುರಿಸಿಕೊಂಡರೆ ಸಾಕು ಎನ್ನುವ ಮನೋಭಾವದವರು.ಹೀಗಿರುವಾಗ ಸಂಘ-ಸಂಸ್ಥೆಗಳ ಕೆಲಸ ಬಹಳ ವಿರಳವಾಗುತ್ತಿವೆ.
ಕೊಪ್ಪಳ-ರಾಯಚೂರು ಜಿಲ್ಲೆಗಳಲ್ಲಿ ಕೆಲಸಮಾಡಲು ಯಾವ ಅಧಿಕಾರಿಯೂ ತಯಾರಿಲ್ಲ.ಇಲ್ಲಿ ಆದಾಯ ಇಲ್ಲವೆಂದಲ್ಲ ,ರಿಸ್ಕ ಜಾಸ್ತಿ ಎಂದು.ಕೊಪ್ಪಳದಲ್ಲಿ ಇನ್ನೂ ಯಾವ ಅಧಿಕಾರಿಯ ಕೈಗಳು ಕೆಂಪಾಗಿಲ್ಲ.ಆದರೆ ಇಲ್ಲಿಂದ ವರ್ಗವಾದ ನಂತರ ಖಂಡಿತ ಅಧಿಕಾರಿಗಳ ಕೈ ಕೆಂಪಾಗಿವೆ.
ರಾಯಚೂರ ವೃತ್ತದಲ್ಲಿ ಕೆಲವು ಅಧಿಕಾರಿಗಳ ಕೈ ಕೆಂಪಾಗಿವೆ.ಆದರೂ ಇತ್ತೀಚಿಗೆ ಬಂದ ರಾಯಚೂರು ವೃತ್ತದ ಅಧಿಕಾರಿಗಳು ಜಬರ್ದಸ್ಥಾಗಿ ಬ್ಯಾಗ್ ತುಂಬಿಕೊಂಡು ಹೋಗಿದ್ದಾರೆ.
ಎಲ್ಲಾ ಅಧಿಕಾರಿಗಳು ನೌಕರಿ ಮಾಡಲು ಬೆಂಗಳೂರು ಬೇಕು ಎನ್ನುವವರೇ ಹೆಚ್ಚು ! ಇನ್ನೂ ಕೆಲವರು ಹುಬ್ಬಳ್ಳಿ, ಬೆಳಗಾವಿ ಬೇಕೆನ್ನುತ್ತಾರೆ.ಮೈಸೂರು ಕಡೆ ಯಾರಿಗೂ ಅಷ್ಟು ಒಲವು ಇದ್ದಂತಿಲ್ಲ.
ಎಲ್ಲಿಯಾದರೂ ಸೈ ಕೆಲಸ ಮಾಡುತ್ತೇವೆ ಎನ್ನುವ ಅಧಿಕಾರಿಗಳು ತುಂಬಾ ಕಡಿಮೆ.ಎಲ್ಲರೂ ಆಯಕಟ್ಟಿನ ಜಾಗ ಹುಡುಕುವವರೇ !
ಅಧಿಕಾರಿಗಳು ಬದಲಾಗಬೇಕು ! ಅದರಂತೆ ಔಷಧ ವ್ಯಾಪಾರಿಗಳು ಬದಲಾಗಬೇಕು ! ಇದಕ್ಕೆ ಜಾಗ್ರತೆ ಬೇಕು ! ಆದರೆ ಅದೇ ಆಗುತ್ತಿಲ್ಲ.ಇದೇ ಈಗಿನ ವಿಪರ್ಯಾಸ.
-ಅಶೋಕಸ್ವಾಮಿ ಹೇರೂರ.