December 24, 2024
IMG-20231201-WA0148

ಗಂಗಾವತಿ ನಗರದ ಲಿಟಲ್ ಹಾರ್ಟ್ಸ್ ಶಾಲೆಯಿಂದ ಹಮ್ಮಿಕೊಳ್ಳಲಾದ ೨ ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳು.

ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ನಮ್ಮ ಹಳೇ ವಿಧ್ಯಾರ್ಥಿಯಾದ ಡಾ.ಅಭಿಷೇಕ ಸ್ವಾಮಿ ಎಮ್.ಬಿ.ಬಿ.ಎಸ್., ಎಮ್.ಡಿ (ಜನರಲ್ ಮೆಡಿಸಿನ್) ಇವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೨ ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ದಿನಾಂಕ ೩೦-೧೧-೨೦೨೩ ರಂದು ಅತ್ಯಂತ ಯಶಸ್ವಿಯಾಗಿ ಜರುಗಿತು.

ಈ ಸಂದರ್ಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರ ನೇತ್ರತ್ವದಲ್ಲಿ ಈ ಕೆಳಗಿನ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಇದಕ್ಕೆ ಐದು ಸಾವಿರ ಸಂಖ್ಯೆಯಲ್ಲಿ ಮಕ್ಕಳು, ಪಾಲಕರು, ಸಾರ್ವಜನಿಕರು,ಗಣ್ಯ ಸಾಹಿತಿಗಳು,ಅಧಿಕಾರಿಗಳು ಮತ್ತು ಪತ್ರಕರ್ತರು ಸಾಕ್ಷಿಯಾದರು.

ನಿರ್ಣಯಗಳು ಈ ಕೆಳಗಿನಂತಿವೆ:

೧)ಗಂಗಾವತಿ, ಕನಕಗಿರಿ, ಕಾರಟಗಿ,ಕಂಪ್ಲಿ ತಾಲೂಕುಗಳನ್ನು ಮತ್ತು ತಾವರಗೇರಾ ಹಾಗೂ ಹುಲಿಗಿ ಹೋಬಳಿಗಳನ್ನು ಸೇರಿಸಿ ನೂತನವಾಗಿ ‘ಕಿಷ್ಕಿಂದಾ’ ಜಿಲ್ಲಾ ರಚನೆ ಮಾಡಬೇಕು.

೨) ಗಂಗಾವತಿ ನಗರ ರೇಲ್ವೆ ನಿಲ್ದಾಣಕ್ಕೆ ಕಿಷ್ಕಿಂದಾ ರೇಲ್ವೆ ನಿಲ್ದಾಣ ಎಂದು ಹೆಸರಿಡಬೇಕು.

೩) ರಾಮ ಜನ್ಮ ಭೂಮಿ ಅಯೋಧ್ಯಾ ನಗರದಿಂದ ರಾಮ ಭಕ್ತ ಹನುಮ ಜನ್ಮ ಭೂಮಿ ಕಿಷ್ಕಿಂದಾ ನಾಡು ಗಂಗಾವತಿ ನಗರದವರೆಗೂ ‘ರಾಮಾಂಜನೇಯ ಎಕ್ಸ್‌ಪ್ರೆಸ್‌’ ಹೆಸರಿನಲ್ಲಿ ನೂತನ ರೇಲ್ವೆ ಆರಂಭಿಸಬೇಕು.

೪) ಈಗಾಗಲೇ ಸಮೀಕ್ಷೆ ನಡೆಸಿರುವಂತೆ ಗಂಗಾವತಿ-ದರೋಜಿ ರೇಲ್ವೆ ಮಾರ್ಗದ ನಿರ್ಮಾಣವನ್ನು ತೀವ್ರಗತಿಯಲ್ಲಿ ಆರಂಭಿಸಬೇಕು.

೫) ಗಂಗಾವತಿ ತಾಲೂಕಿನ ಐತಿಹಾಸಿಕ ಸ್ಥಳಗಳಾದ ಆನೆಗುಂದಿ, ಬೆಣಕಲ್, ಕನಕಗಿರಿ ಗ್ರಾಮಗಳಲ್ಲಿನ ಸ್ಮಾರಕಗಳ ರಕ್ಷಣೆಗೆ ಸರಕಾರ ಕ್ರಮ ಕೈಗೊಳ್ಳಬೇಕು.

೬) ಗಂಗಾವತಿ ತಾಲೂಕಿನಲ್ಲಿ ಕರಡಿ ಧಾಮ, ಚಿರತೆ ರಕ್ಷಣಾ ಸಮಿತಿ ರಚನೆ ಮಾಡಬೇಕು.

೭)ಪ್ರವಾಸೋದ್ಯಮದ ಅಭಿವೃದ್ದಿಗಾಗಿ ಹಂಪಿ-ಆನೆಗುಂದಿ ನಡುವೆ ಇರುವ ತುಂಗಭದ್ರಾ ನದಿಗೆ ಉಕ್ಕಿನ ಸೇತುವೆ ನಿರ್ಮಿಸಬೇಕು.

೮) ಗಂಗಾವತಿ ತಾಲೂಕಿನಲ್ಲಿ ಯಾವುದೇ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿಲ್ಲ.ಅದಕ್ಕಾಗಿ ಕೊಪ್ಪಳ ತಾಲ್ಲೂಕಿನ ಬೂದಗುಂಪಾ ಕ್ರಾಸ್ ನಿಂದ ಬಳ್ಳಾರಿ ನಗರದವರೆಗೆ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಬೇಕು.ಈ ಮೂಲಕ ಎರಡು ರಾಷ್ಟ್ರೀಯ ಸಂಖ್ಯೆ ೬೭ ಮತ್ತು ೫೦ ಅಥವಾ ೫೦/ಎ ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಏರ್ಪಡುತ್ತದೆ.

೯) ಕೊಪ್ಪಳ ತಾಲೂಕಿನ ಬೂದಗುಂಪಾ ಹತ್ತಿರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕು ಇದರಿಂದ ಹೊಸಪೇಟೆ, ಕೊಪ್ಪಳ, ಕುಷ್ಟಗಿ,ಇಲಕಲ್ಲ , ಗಂಗಾವತಿ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.

೧೦) ಹಿರಿಯ ನಾಗರಿಕರು ಸರಳವಾಗಿ ಗಂಗಾವತಿ ತಾಲೂಕಿನ ಆಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯನ ದರ್ಶನ ಪಡೆಯಲು ಹಗ್ಗ ಮಾರ್ಗ (ರೋಪವೇ) ನಿರ್ಮಿಸಬೇಕು.

೧೧) ಗಂಗಾವತಿ ನಗರದಲ್ಲಿ ಸುಸಜ್ಜಿತವಾದ ರಂಗ ಮಂದಿರ ನಿರ್ಮಿಸಬೇಕು.

ಮಕ್ಕಳ ಸಾಹಿತ್ಯ ಸಮ್ಮೇಳನದ ಈ ೧೧ ನಿರ್ಣಯಗಳು ಸಾರ್ವಜನಿಕರಿಗೆ ಸಾಕಷ್ಟು ಅನುಕೂಲ ಕಲ್ಪಿಸಲಿದ್ದು , ಕಾರ್ಯರೂಪಕ್ಕೆ ತರಬೇಕೆಂದು ಮುಖ್ಯ ಮಂತ್ರಿಗಳು, ಮುಖ್ಯ ಕಾರ್ಯದರ್ಶಿಗಳು ಕರ್ನಾಟಕ ಸರಕಾರ,ಕನ್ನಡ ಮತ್ತು ಸಂಸ್ಕೃತಿಕ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ,ಕೊಪ್ಪಳದ ಸಂಸದರಾದ ಕರಡಿ ಸಂಗಣ್ಣ ,ಗಂಗಾವತಿ ಶಾಸಕರಾದ ಜನಾರ್ಧನ ರೆಡ್ಡಿ ಮತ್ತು ಜಿಲ್ಲಾಧಿಕಾರಿಗಳು ಕೊಪ್ಪಳ ಇವುರುಗಳನ್ನು ೨ ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಸಮಿತಿ ಕೋರಿದೆ.

About The Author

Leave a Reply