July 12, 2025
Screenshot_20230910_200352_Google

ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಬಂಗಾಳಿ ಮುನ್ನಾ ಬಾಯ್ ಗಳ ದರ್ಬಾರ್ ! ನಿದ್ರೆಗೆ ಜಾರಿದ ತಾಲ್ಲೂಕಿನ ಟಿ.ಎಚ್.ಓ.!


ವೈದ್ಯಕೀಯ ಪದವಿ ವ್ಯಾಸಂಗ ಮಾಡದೆ, ಬೇರೆಯವರ ಹೆಸರಿನಲ್ಲಿ ಕ್ಲಿನಿಕ್ ನಡೆಸುತ್ತಿರುವ, ನೋಂದಣಿ ಮಾಡದೆ ವೈದ್ಯಕೀಯ ಸೇವೆಯಲ್ಲಿ ನಿರತರಾಗಿರುವ ನಕಲಿ ವೈಧ್ಯರ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳಾಗಲಿ ಮತ್ತು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳಾಗಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಹಲವು ಸಂಘಟನೆಗಳ ಮುಖ್ಯಸ್ಥರು ದೂರುತ್ತಿದ್ದಾರೆ.

ವೈದ್ಯಕೀಯ ಚಿಕಿತ್ಸೆಗೆ ಸಂಬಂಧ ಪಟ್ಟಂತೆ ಯಾವುದೇ ತರಹದ ಅಭ್ಯಾಸ ಮಾಡದೇ,ಕೆಲವು ಆಸ್ಪತ್ರೆಗಳಲ್ಲಿ ವೈಧ್ಯರ ಸಹಾಯಕರಾಗಿ ಕೆಲಸ ಮಾಡಿ,ಹೊರ ಬರುವ ವ್ಯಕ್ತಿಗಳು ನೇರವಾಗಿ ವೈದ್ಯಕೀಯ ವೃತ್ತಿಗಿಳಿದು ಜನ ಸಾಮಾನ್ಯರ ಆರೋಗ್ಯದ ಮೇಲೆ ಬರೆ ಎಳೆಯುತ್ತಿದ್ದಾರೆಂದು ಅವರು ಅಪಾದಿಸಿದ್ದಾರೆ.

ಕೆಲವು ವರ್ಷಗಳ ಕಾಲ ನಗರದ ಆಸ್ಪತ್ರೆಗಳಲ್ಲಿ ಕಾಂಪೌಂಡರ್ ಆಗಿ ಕೆಲಸ ಮಾಡಿದ ಆಧಾರದ ಮೇಲೆ ಯಾರ ಅಂಜಿಕೆ-ಅಳುಕು ಇಲ್ಲದೆ, ಯಾರ್ಯಾರೋ ವೈಧ್ಯಕೀಯ ಕ್ಷೇತ್ರಕ್ಕೆ ಇಳಿದು ಬಿಡುತ್ತಾರೆ.ಇದು ಇಡೀ ದೇಶದಲ್ಲಿ ನಡೆದಿರುವ ಒಂದು ಅಘಾತಕಾರಿ ಬೆಳವಣಿಗೆ. ಜನ ಸಾಮಾನ್ಯರ ಆರೋಗ್ಯ ಕಾಪಾಡಲು ಹಣ ಖರ್ಚು ಮಾಡುವ ಕೇಂದ್ರ ಮತ್ತು ರಾಜ್ಯ ಸರಕಾರಗಳು,ಮನುಷ್ಯರ ಆರೋಗ್ಯ ಹಾಳು ಮಾಡುವವರನ್ನು ಮಟ್ಟ ಹಾಕುತ್ತಿಲ್ಲ.

ಅಧಿಕಾರಿಗಳು ಸಹ ಇಂತಹ ನಕಲಿ ವೈಧ್ಯರ ಮೇಲೆ ಕ್ರಮ ಕೈಗೊಳ್ಳದೆ,ಕಂಡು-ಕಾಣದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.ನಕಲಿ ವೈಧ್ಯಕೀಯ ವೃತ್ತಿ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕಾದ ವೈಧ್ಯಾಧಿಕಾರಿಗಳು ಕೇವಲ ಸಭೆ ಸಮಾರಂಭಗಳಿಗೆ ಮೀಸಲಾಗಿದ್ದಾರೆ.ನಕಲಿ ವೈಧ್ಯಕೀಯದ ಜೊತೆಗೆ ಈ ನಕಲಿಗಳು ಅಲೋಪತಿ ಔಷಧಗಳ ಮಾರಾಟದಲ್ಲಿ ನಿರತರಾಗಿದ್ದರೂ ವಿಭಾಗೀಯ ಉಪ ಔಷಧ ನಿಯಂತ್ರಕರು,ಔಷಧ ಪರಿವೀಕ್ಷಕರು ಮತ್ತು ವೃತ್ತದ ಸಹಾಯಕ ಔಷಧ ನಿಯಂತ್ರಕರು,ಔಷಧ ಪರಿವೀಕ್ಷಕರು ಕ್ರಮ ಕೈಗೊಳ್ಳುತ್ತಿಲ್ಲ.

ನಕಲಿ ವೈಧ್ಯರು,ನೇರವಾಗಿ ಔಷಧ ವ್ಯಾಪಾರಕ್ಕಿಳಿದಿರುವುದನ್ನು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳ ಕಿವಿಗೆ ಹಾಕಿದರೆ ಸಾಕು,ಔಷಧ ವ್ಯಾಪಾರಿಗಳ ಮೇಲೆಯೇ ಕಿಡಿ ಕಾರಿ,ಅವರ ಬಾಯಿ ಮುಚ್ಚಿಸುತ್ತಾರೆ.ಇಂತಹ ನಕಲಿ ವೈಧ್ಯರ ಔಷಧ ಚೀಟಿಯ ಮೇಲೆಯೇ ಔಷಧ ಮಾರಾಟ ಮಾಡುವ ಔಷಧ ವ್ಯಾಪಾರಿಗಳು, ಅಧಿಕಾರಿಗಳಿಗೆ ಹೆದರಿಕೊಂಡೇ ಇರಬೇಕಾಗುತ್ತದೆ.

ರಾಯಚೂರ ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಇಂತಹ ನಕಲಿ ವೈಧ್ಯರ ಉಪಟಳ ಜಾಸ್ತಿಯಾಗಿದೆ.ಈ ಬಗ್ಗೆ ದಾಖಲೆಗಳ ಸಮೇತ ಮಾಹಿತಿ ನೀಡಿದ್ದರೂ ರಾಯಚೂರು ವೃತ್ತದ ಸಹಾಯಕ ಔಷಧ ನಿಯಂತ್ರಕರು ಮಜಾ ಮಾಡಿಕೊಂಡು ತಿರುಗಾಡುತ್ತಿದ್ದಾರೆ.ಇವರಿಗೆ ಬಳ್ಳಾರಿ ವಿಭಾಗದ ಉಪ ಔಷಧ ನಿಯಂತ್ರಕರು ಸರಿಯಾಗಿ ಪಾಠ ಹೇಳಬೇಕಾಗಿದೆ.

ರಾಯಚೂರು ಜಿಲ್ಲೆಯ ಇಡೀ ಸಿಂಧನೂರು ತಾಲ್ಲೂಕಿನಲ್ಲಿ “ಬಂಗಾಳಿ” ವಲಯದ ನಕಲಿ ಡಾಕ್ಟರ್ ಗಳು ಹಾಗೂ ಕ್ಲಿನಿಕ್ ಗಳು
ನಾಯಿ ಕೊಡೆಯಂತೆ ಹುಟ್ಟಿಕೊಂಡಿವೆ.ಸ್ವತಃ ಅವರು ಮೆಡಿಕಲ್ ಸ್ಟೊರ್ಸಗಳನ್ನು ತೆರೆದಿದ್ದಾರೆ.

ಮೆಡಿಕಲ್ ಸ್ಟೊರ್ಸ ಒಳ ಆವರಣದಲ್ಲಿ ,ಅಕ್ಕ- ಪಕ್ಕದಲ್ಲಿ ,ಹಿಂದೆ-ಮುಂದೆ ಇಂತಹ ನಕಲಿ ವೈಧ್ಯರ ಆಸ್ಪತ್ರೆಗಳೇ ಕಂಡು ಬರುತ್ತಿವೆ. ಅವರ ಚೀಟಿಗಳಿಂದಲೇ ವ್ಯಾಪಾರ ನಡೆಯುತ್ತಿದೆ.ಅವ್ಯವಹಾರ-ಅನೈತಿಕತೆ ತಡೆಯಲು ವಿಭಾಗೀಯ ಉಪ ಔಷಧ ನಿಯಂತ್ರಕರಾದ ಎಚ್.ರೇವಣಸಿದ್ದಪ್ಪ ಫ಼ೀಲ್ಡಿಗೆ ಇಳಿಯ ಬೇಕಾಗಿದೆ.ರಾಜ್ಯ ಔಷಧ ನಿಯಂತ್ರಕರಾದ ಬಿ.ಟಿ.ಖಾನಾಪುರೆ,ಅಧಿಕಾರಿಗಳ ಒಂದು ತಂಡ ರಚಿಸಿ,ದಾಳಿ ಮಾಡಿಸಬೇಕಾಗಿದೆ.ಈ ಭಾಗದ ನರ ನಾಡಿ ಬಲ್ಲ ಅಪರ ಔಷಧ ನಿಯಂತ್ರಕರಾದ ಅಂಬರೀಶ ತುಂಬಗಿಯವರನ್ನಾದರೂ ಕಳುಹಿಸಿ,ಹಗಲು ದರೋಡಿತನಕ್ಕೆ ಅಂತ್ಯ ಹಾಡಬೇಕಾಗಿದೆ.ಇಲ್ಲದಿದ್ದರೆ ಇಲಾಖೆಯ ಮಾನ ಮೂರು ಕಾಸಿಗೆ ಹಾರಾಜಾಗುವುದರಲ್ಲಿ ಎರಡು ಮಾತಿಲ್ಲ.

ಕರ್ನಾಟಕ ಆಯುರ್ವೇದ, ನ್ಯಾಚುರೋಪಥಿ, ಸಿದ್ಧ, ಯುನಾನಿ ಹಾಗೂ ಯೋಗ ಪ್ರ್ಯಾಕ್ಟೀಷನರ್ಸ್‌ ರಿಜಿಸ್ಟ್ರೇಷನ್ ಕಾಯಿದೆ 1962ರ ನಿಯಮ 9 ಹಾಗೂ ಮೆಡಿಕಲ್ ಪ್ರ್ಯಾಕ್ಟೀಷನರ್ಸ್‌ ಮಿಸೆಲೇನಿಯಸ್ ಕಾಯಿದೆ 1961ರ ಸೆಕ್ಷನ್ 34ರಂತೆ ಅಧಿಕೃತ ನೋಂದಣಿ ಹೊಂದಿರದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬಹುದು. ಇದೇ ಕಾಯಿದೆಯ ಸೆಕ್ಷನ್ 38ರ ಪ್ರಕಾರ ವೈದ್ಯರಲ್ಲದವರು ‘ಡಾಕ್ಟರ್’ ಎಂದು ಹೆಸರಿನ ಮುಂದೆ ನಮೂದಿಸಿಕೊಳ್ಳುವಂತಿಲ್ಲ. ಈ ಎರಡೂ ಅಂಶಗಳನ್ನು ಪರಿಗಣಿಸಿ ತಪ್ಪು ಮಾಡಿರುವ ನಕಲಿ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳ ಬೇಕಾದ ಜಿಲ್ಲಾ ಆಯುಷ್ ಅಧಿಕಾರಿ ಅದೆಲ್ಲಿ ದನ ಮೇಯಿಸುತ್ತಿದ್ದಾರೋ ಗೊತ್ತಿಲ್ಲ.

ಕೆ.ಪಿ.ಎಮ್.ಎ. ಎಂಬ ಕಾಗದದ ಹುಲಿ: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿಸದೆ,ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಬಾರದೆಂದು ಕೆ.ಪಿ.ಎಮ್.ಎ.ಕಾಯ್ದೆ ಜಾರಿಗೆ ತರಲಾಗಿದ್ದರೂ,ಇದು ಅಧಿಕೃತವಾಗಿ ಪದವಿ ಪಡೆದ ಅಸಲಿ ವೈಧ್ಯರನ್ನು ಕಾಡುವ ಅಸ್ತ್ರವಾಗಿ ಬಿಟ್ಟಿದೆ. ಆಯುಷ್ ವೈಧ್ಯರು ಮತ್ತು ಅಲೋಪತಿ ವೈಧ್ಯರು ತಮ್ಮ ಹೆಸರನ್ನು ನೊಂದಾಯಿಸಲು ಲಕ್ಷ-ಲಕ್ಷ ಹಣ ಖರ್ಚು ಮಾಡಬೇಕಾಗಿದೆ.ಜಿಲ್ಲಾ ವೈಧ್ಯಾಧಿಕಾರಿಗಳಿಗೆ ಗೊಡ್ಡು ಸಲಾಮು ಹೊಡೆಯುವುದು ಮಾತ್ರವಲ್ಲ ,ಅಗ್ನಿ ಶಾಮಕ ಅಧಿಕಾರಿಗಳಿಗೆ ಹಣ ಪಾವತಿಸಿ,”ನೋ ಅಬ್ಜಕ್ಷನ್” ದಾಖಲೆ ಪಡೆಯಬೇಕಾಗಿದೆ.

ಮೈಗೊಡವಿ ನಿಲ್ಲ ಬೇಕಾಗಿದೆ ಐ.ಎಮ್.ಎ.: ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳು,ಜನರ ಆರೋಗ್ಯ ಹದಗೆಡಿಸುವ ನಕಲಿ ವೈಧ್ಯರನ್ನು ಪ್ರೊತ್ಸಾಹಿಸುವುದನ್ನು ನಿಲ್ಲಿಸಬೇಕು.ಗಂಡು ಅಥವಾ ಹೆಣ್ಣು ಆಳುಗಳನ್ನು ನೇಮಿಸಿಕೊಂಡು ನಕಲಿ ವೈಧ್ಯರನ್ನು ಸೃಷ್ಟಿಸದೆ, ಅಧಿಕೃತವಾಗಿ ನರ್ಸ,ಲ್ಯಾಬ್ ಟೆಕ್ನಿಷಿಯನ್, ಫ಼ಾರ್ಮಾಸಿಸ್ಟಗಳನ್ನು ನೇಮಕ ಮಾಡಿ ಕೊಳ್ಳಬೇಕು.ಅವರು ತಮ್ಮ ಸೇವಾ ಆಳುಗಳಂತೆ ನೋಡಿಕೊಳ್ಳುವ ಬದಲು,ಅವರಿಗೂ ಜವಾಬ್ದಾರಿ ಇದೆ,ಅವರಿಗೆ ಕನಿಷ್ಠ ಗೌರವ ನೀಡಿ,ಮನ್ನಣೆ ನೀಡಬೇಕಾಗಿದೆ.ಇದರಿಂದ ನಕಲಿ ವೈದ್ಯಕೀಯವನ್ನು ಹಂತ ಹಂತವಾಗಿ ಕೊನೆಗಾಣಿಸಬೇಕು.

ಇಂತಹ ನಕಲಿ ವೈಧ್ಯರ ಮೇಲೆ ತಾಲೂಕಿನ ವೈಧ್ಯಾಧಿಕಾರಿಗೆ, ಸ್ಥಳೀಯ ಪತ್ರಿಕೆಯೊಂದು ದೂರು ನೀಡಿದ್ದರೂ ಯಾವುದೇ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳದೇ,ಪತ್ರಿಕೆಯ ವರದಿಗಾರರ
ದೂರಿಗೆ ಹಿಂಬರಹ ನೀಡಿ,ಸಂಬಂಧ ಪಟ್ಟ ಗ್ರಾಮಗಳಲ್ಲಿ ಯಾವುದೇ ರೀತಿಯ ನಕಲಿ ಕ್ಲಿನಿಕ್ ಆಗಲೀ,ನಕಲಿ ವೈದ್ಯರಾಗಲಿ ಇಲ್ಲ ಎಂದು ಹಿಂಬರಹ ನೀಡಿ,ತಮ್ಮ ಭ್ರಷ್ಟತೆಯನ್ನು ತೋರಿಸಿದ್ದಾರೆ.

ಸಿಂಧನೂರು ತಾಲ್ಲೂಕಿನ ವಿರುಪಾಪುರದ ವಿಪುಲ ಕುಮಾರ, ಅರಳಹಳ್ಳಿಯ ಸಂದೀಪ್, ಸಿಂಗಾಪುರ ಮತ್ತು ನಂದಿಹಳ್ಳಿಯ ಸತೀಶ್, ಸಾಗರ್ ಕ್ಯಾಂಪಿನ ಬಿಷ್ಟೂಣು,ಮುಕ್ಕುಂದದಲ್ಲಿ ಶ್ಯಾಮ್, ಹುಡಾ ಗ್ರಾಮದ ಪ್ರಶಾಂತ್ ಹೀಗೆ ಇವರ ಪಟ್ಟಿ ಬಾಲದಂತೆ ಬೆಳೆಯುತ್ತದೆ.

ಕೊನೆಯ ಪಕ್ಷ ಜಿಲ್ಲಾ ಆರೋಗ್ಯ ಅಧಿಕಾರಿ,ಸಿಂಧನೂರು ತಾಲ್ಲೂಕಿನ ನಕಲಿ ಬಂಗಾಳಿ ಮುನ್ನಾ ಭಾಯಿ ಕ್ಲಿನಿಕ್ ಗಳ ಮೇಲೆ ದಾಳಿ ಮಾಡಿ,ಜನರ ಪ್ರಾಣ ಹಾನಿಯನ್ನು ತಪ್ಪಿಸಬೇಕಾಗಿದೆ. -ವರದಿಗಾರ ಸಿಂಧನೂರು.

About The Author

Leave a Reply