July 12, 2025
Screenshot_20230907_213842_Google

ಪರವಾನಗಿ ಇಲ್ಲದೇ ಔಷಧ ಮಾರಾಟ: ಕ್ರಮಕ್ಕೆ ಸೂಚನೆ

ನವದೆಹಲಿ(ಪಿಟಿಐ): ಪರವಾನಗಿ ಇಲ್ಲದೆಯೇ ಆನ್ಲೈನ್‌ ಮೂಲಕ ಔಷಧಗಳನ್ನು ಮಾರಾಟ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ದೆಹಲಿ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಈ ವಿಚಾರವಾಗಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ನರೂಲಾ ಅವರಿದ್ದ ನ್ಯಾಯಪೀಠ, ಆಗಸ್ಟ್‌ 28ರಂದು ಈ ಆದೇಶ ಹೊರಡಿಸಿದೆ.

ಈ ಸಂಬಂಧ ಕ್ರಮ ಕೈಗೊಳ್ಳಲು ಹಾಗೂ ಕಾನೂನುಬಾಹಿರವಾಗಿ ಆನ್‌ಲೈನ್‌ ಮೂಲಕ ಔಷಧಗಳ ಮಾರಾಟ ಕುರಿತು ತನ್ನ ಅಂತಿಮ ನಿಲುವು ತಿಳಿಸಲು ಕೇಂದ್ರಕ್ಕೆ ಆರು ವಾರಗಳ ಅವಕಾಶ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ನವೆಂಬರ್ 16ಕ್ಕೆ ಮುಂದೂಡಿದೆ.

ಆನ್‌ಲೈನ್‌ ಮೂಲಕ ಕಾನೂನು ಬಾಹಿರವಾಗಿ ಔಷಧಗಳ ಮಾರಾಟವನ್ನು ನಿಷೇಧಿಸಲು ಕೋರಿ, ಡ್ರಗ್ಸ್ ಅಂಡ್‌ ಕಾಸ್ಮೆಟಿಕ್ಸ್‌ ನಿಯಮಗಳಿಗೆ ಉದ್ದೇಶಿತ ತಿದ್ದುಪಡಿಗಾಗಿ ಪ್ರಕಟಿಸಿದ್ದ ಕರಡು ನಿಯಮಗಳನ್ನು ಪ್ರಶ್ನಿಸಿ ಸೌತ್‌ ಕೆಮಿಸ್ಟ್ಸ್ ಅಂಡ್‌ ಡಿಸ್ಟ್ರಿಬ್ಯೂಟರ್ಸ್ ಅಸೋಸಿಯೇಷನ್‌ ಅರ್ಜಿ ಸಲ್ಲಿಸಿದೆ.

ಆನ್‌ಲೈನ್‌ ಮೂಲಕ ಔಷಧಗಳ ಮಾರಾಟಕ್ಕೆ ದೆಹಲಿ ಹೈಕೋರ್ಟ್‌ ತಡೆ ನೀಡಿದ್ದರೂ, ಮಾರಾಟ ಮುಂದು ವರಿಸಿರುವ ಇ–ಫಾರ್ಮಸಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಕೋರಿ ಜಹೀರ್ ಅಹ್ಮದ್‌ ಎಂಬುವವರು ಕೂಡ ಅರ್ಜಿ ಸಲ್ಲಿಸಿದ್ದಾರೆ.

ಇ–ಫಾರ್ಮಸಿಗಳ ವಿರುದ್ಧ ಕ್ರಮ ಕೈಗೊಳ್ಳದ್ದಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧವೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಅರ್ಜಿದಾರ ಕೋರಿದ್ದಾರೆ.

About The Author

Leave a Reply