

ಗಂಗಾವತಿ:ಗಂಗಾವತಿ ತಾಲೂಕಿನ ಚಿಕ್ಕ ಬೆಣಕಲ್, ಹಿರೇ ಬೆಣಕಲ್, ಮುಕ್ಕುಂಪಿ ಮತ್ತು ಜಬ್ಬಲಗುಡ್ಡಾ ಭಾಗದಲ್ಲಿ ಕರಡಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ,ಅವು ಆಹಾರ ಹುಡುಕಿಕೊಂಡು ರಸ್ತೆಗೆ ಬರುತ್ತಿವೆ.ಇದರಿಂದ ವಾಹನಗಳಿಗೆ ಸಿಕ್ಕಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿವೆ. ಅದಕ್ಕಾಗಿ ಈ ಭಾಗದಲ್ಲಿ ಕರಡಿ ಧಾಮ ನಿರ್ಮಿಸಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆ ,ಅರಣ್ಯ ಖಾತೆ ಸಚಿವ ಆನಂದ ಸಿಂಗ್ ಅವರಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಇಲಾಖೆಯಿಂದ ಸಕಾರಾತ್ಮಕ ಪ್ರತಿಕ್ರೀಯೆ ದೊರೆತಿದೆ.
ಸಚಿವರ ಆಪ್ತ ಕಾರ್ಯದರ್ಶಿಗಳಾದ ರಮೇಶ್ ಬಾಬು ಎನ್.ಅವರ ಟಿಪ್ಪಣೆಯ ಅನ್ವಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ಬೆಂಗಳೂರು ಇವರು, ಕೊಪ್ಪಳ ಜಿಲ್ಲೆಯ ಉಪ ಆರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಸೂಕ್ತ ಪ್ರಸ್ಥಾವನೆ ಸಲ್ಲಿಸಲು ಪತ್ರದ ಮೂಲಕ ಸೂಚಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ತಿಳಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಅರಣ್ಯ ಅಧಿಕಾರಿಗಳು ಸೂಕ್ತ ಪ್ರಸ್ಥಾವನೆ ಸಲ್ಲಿಸಿದಲ್ಲಿ ಗಂಗಾವತಿ ತಾಲ್ಲೂಕಿನಲ್ಲಿ ಕರಡಿ ಧಾಮ ಆರಂಭವಾಗಲಿದೆ ಎಂದು ಅಶೋಕಸ್ವಾಮಿ ಹೇರೂರ ಆಶಯ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಜನ ಪ್ರತಿನಿಧಿಗಳು ತಮ್ಮ ಬೆಂಬಲವನ್ನು ಅವರು ನಿರಿಕ್ಷಿಸಿರುವುದಾಗಿ ಅವರು ಹೇಳಿದ್ದಾರೆ.
