ದರೋಜಿ-ಬಾಗಲಕೋಟ ಹೊಸ ರೈಲ್ವೆ ಲೈನ್ ಗೆ ಸಂಸದ ಸಂಗಣ್ಣನವರಿಂದ ಸಚಿವರಿಗೆ ಪತ್ರ
ಗಂಗಾವತಿ: ಬಳ್ಳಾರಿ ಜಿಲ್ಲೆಯ ದರೋಜಿ ಗ್ರಾಮದಿಂದ ಬಾಗಲಕೋಟ ನಗರದವರೆಗೆ ನೂತನ ರೇಲ್ವೆ ಲೈನ್ ರಚಿಸಲು ಕೊಪ್ಪಳ ಸಂಸದ ಸಂಗಣ್ಣ ಕರಡಿಯವರು ರೇಲ್ವೆ ಸಚಿವ ಅಶ್ವಿನ ವೈಷ್ನವ್ ಅವರಿಗೆ ಪತ್ರ ಬರೆದಿದ್ದಾರೆ.ಈ ಪತ್ರಕ್ಕೆ ಬಾಗಲಕೋಟ ಸಂಸದ ಪಿ.ಸಿ.ಗದ್ದಿಗೌಡರ್ ಮತ್ತು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಸಹಿ ಮಾಡಿದ್ದಾರೆ.
ದರೋಜಿ-ಗಂಗಾವತಿ ರೇಲ್ವೆ ಲಿಂಕ್ ಲೈನ್ ರಚಿಸಬೇಕೆಂದು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಹಾಗೂ ನ್ಯಾಯವಾದಿ ಅಶೋಕಸ್ವಾಮಿ ಹೇರೂರ,ರೇಲ್ವೆ ಇಲಾಖೆಯನ್ನು ಒತ್ತಾಯಿಸುತ್ತಾ ಬಂದಿದ್ದು , ಕೊಪ್ಪಳ,ಬಳ್ಳಾರಿ ಸಂಸದರು,ಸಚಿವ ಬಿ.ಶ್ರೀರಾಮುಲು,ಬಳ್ಳಾರಿ ನಗರ, ಕಂಪ್ಲಿ , ಕನಕಗಿರಿ, ಗಂಗಾವತಿ ಶಾಸಕರುಗಳು ಸಹ ರೇಲ್ವೆ ಸಚಿವಾಲಯ ಮತ್ತು ರೇಲ್ವೆ ಮಂಡಳಿಗೆ ಪತ್ರ ಬರೆದು ಈ ನೂತನ ಸಂಪರ್ಕ ರೇಲ್ವೆ ಮಾರ್ಗಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದಾರೆ.
ಕಂಪ್ಲಿಯಲ್ಲಿ ದರೋಜಿ-ಗಂಗಾವತಿ ನೂತನ ರೇಲ್ವೆ ಲೈನ್ ಹೋರಾಟ ಸಮಿತಿ ರಚನೆಯಾಗಿದ್ದು ,ಈ ಮಾರ್ಗದ ಬೇಡಿಕೆಗಾಗಿ ಅಲ್ಲಿನ ನಾಗರಿಕರು ಸಹ ಆಗ್ರಹಿಸುತ್ತಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಅವರ ನೇತ್ರತ್ವದಲ್ಲಿ ದರೋಜಿ-ಬಾಗಲಕೋಟ ಹೊಸ ರೇಲ್ವೆ ಮಾರ್ಗ ಹೋರಾಟ ಸಮಿತಿ ರಚನೆಯಾಗಿದ್ದು ,ದರೋಜಿ-ಕಂಪ್ಲಿ-ಗಂಗಾವತಿ-ಹೇರೂರ-ಕೆಸರಹಟ್ಟಿ-ಕನಕಗಿರಿ-ತಾವರಗೇರಾ-ಕುಷ್ಟಗಿ-ಇಲಕಲ್-ಹುನಗುಂದ-ಸಿರೂರು-ಬಾಗಲಕೋಟ ಮೂಲಕ ನೂತನ ರೇಲ್ವೆ ಲೈನ್ ಆರಂಭಿಸಬೇಕೆಂದು ಈ ಹೋರಾಟ ಸಮಿತಿಯ ಒತ್ತಾಯವಾಗಿದೆ.
ಈ ಭಾಗದ ವಾಣಿಜ್ಯೋದ್ಯಮ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಈ ನೂತನ ರೇಲ್ವೆ ಮಾರ್ಗದ ಅವಶ್ಯಕತೆ ಇದೆ ಎಂದು ಎಚ್.ಆರ್.ಶ್ರೀನಾಥ ಅವರು ಅಭಿಪ್ರಾಯ ಪಟ್ಟಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ಅಶೋಕಸ್ವಾಮಿ ಹೇರೂರ ತಿಳಿಸಿದ್ದಾರೆ.
ಗಂಗಾವತಿ ರೇಲ್ವೆ ನಿಲ್ದಾಣದಿಂದ ಸಾಕಷ್ಟು ಭತ್ತ ಸಾಗಾಣಿಕೆಯಾಗುತ್ತಿದ್ದು , ಅತಿ ಹೆಚ್ಚಿನ ಲಾಭ ರೇಲ್ವೆ ಇಲಾಖೆಗೆ ದೊರೆಯುತ್ತಿದೆ.ಈ ನೂತನ ರೇಲ್ವೆ ಮಾರ್ಗದಿಂದ ರೇಲ್ವೆಗೆ ಇನ್ನು ಹೆಚ್ಚಿನ ಲಾಭ ದೊರೆಯಲಿದ್ದು, ಈ ಭಾಗದ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ವಾಣಿಜ್ಯೋದ್ಯಮ ಸಂಸ್ಥೆ ಅಭಿಪ್ರಾಯ ಪಟ್ಟಿದೆ.