

ಗಂಗಾವತಿ-ಬಳ್ಳಾರಿ ರಸ್ತೆ ಮೇಲ್ದರ್ಜೆಗೇರಿಸಲು ಒತ್ತಾಯ.
ಗಂಗಾವತಿ: ಗಂಗಾವತಿ ಮತ್ತು ಬಳ್ಳಾರಿ ನಗರವನ್ನು ಸಂಪರ್ಕಿಸುವ ರಸ್ತೆಗಳೆರಡೂ ರಾಜ್ಯ ಹೆದ್ದಾರಿಗಳಾಗಿದ್ದರೂ, ಗುಣ ಮಟ್ಟದ ಕೊರತೆಯಿಂದ ಪ್ರತಿ ವರ್ಷವೂ ಹದಗೆಡುತ್ತಿವೆ ಇದರಿಂದ ಪ್ರತಿ ದಿನ ಈ ರಸ್ತೆಯ ಮೂಲಕ ಸಂಚರಿಸುವ ಸಾವಿರಾರು ವಾಹನಗಳಿಗೆ ತೊಂದರೆಯಾಗುತ್ತಿದೆ.
ಗಂಗಾವತಿ-ದರೋಜಿ-ಕುಡತಿನಿ ಮತ್ತು ಗಂಗಾವತಿ-ಕುರುಗೋಡು-ಕೋಳೂರು ಈ ಎರಡೂ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಈ ಭಾಗದ ವಾಣಿಜ್ಯ ವಹಿವಾಟು,ಕೃಷಿ ಉತ್ಪನ್ನಗಳ ಸಾಗಾಣಿಕೆ ಮತ್ತು ವಾಹನಗಳ ಸಂಚಾರಕ್ಕೆ ಸುಗಮವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಕಲಬುರ್ಗಿಯ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದೆ.
ಈ ಬಗ್ಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರಿಗೆ ಪತ್ರ ಬರೆದಿರುವ ಸಂಸ್ಥೆಯ ಅದ್ಯಕ್ಷ ಪ್ರಶಾಂತ ಎಸ್.ಮಾನಕರ್ ಮತ್ತು ಕಾರ್ಯದರ್ಶಿ ಶರಣಬಸಪ್ಪ ಎಮ್.ಪಪ್ಪಾ ಈ ಮನವಿ ಮಾಡಿದ್ದಾರೆ.
ದೇಶ ಸ್ವತಂತ್ರವಾದಾಗಿನಿಂದಲೂ ಈ ರಸ್ತೆಗಳ ಸ್ಥಿತಿ ಸುಧಾರಣೆಯಾಗಿಲ್ಲ.ಗಂಗಾವತಿಯಿಂದ ಬಳ್ಳಾರಿಗೆ ಸಂಚರಿಸುವ ವಾಹನಗಳ ಮಾಲೀಕರು , ಚಾಲಕರು ದಿನ ನಿತ್ಯ ಹಿಂಸೆ ಅನುಭವಿಸುತ್ತಿದ್ದಾರೆ.ಇದರಿಂದಾಗಿ ಬಳ್ಳಾರಿ ಮತ್ತು ಗಂಗಾವತಿ ನಡುವೆ ನಡೆಯುವ ವ್ಯವಹಾರಿಕ ಚಟುವಟಿಕೆಗಳಿಗೆ ಅಡಚಣೆಯಾಗಿದೆ ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಕಲ್ಯಾಣ ಕರ್ನಾಟಕವನ್ನು ಪ್ರತಿನಿಧಿಸುವ ಹೈದ್ರಾಬಾದ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಗಮನ ಸೆಳೆದಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸದರಿ ಸಂಸ್ಥೆ ರಾಜ್ಯ ಸರಕಾರಕ್ಕೆ ಪತ್ರ ಬರೆಯುವ ಮೂಲಕ ಬೆಂಬಲ ವ್ಯಕ್ತಪಡಿಸಿದೆ.ಈ ಬಗ್ಗೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಂಡು, ಈ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರಕಾರಕ್ಕೆ ಪ್ರಸ್ಥಾವನೆಯನ್ನು ಕಳುಹಿಸುತ್ತಾರೆಂಬ ಭರವಸೆಯನ್ನು ಸಂಸ್ಥೆಯ ಪದಾಧಿಕಾರಿಗಳು ಹೊಂದಿದ್ದಾರೆ.