

ದರೋಜಿ ರೇಲ್ವೆ ಲೈನ್ ಸಿಗದ ಅನುದಾನ ಅಸಮಧಾನ:ಅಶೋಕಸ್ವಾಮಿ ಹೇರೂರ
ಗಂಗಾವತಿ: ಬಹು ನಿರೀಕ್ಷಿತ ಗಂಗಾವತಿ-ದರೋಜಿ ನೂತನ ಬ್ರಾಡಗೇಜ್ ರೇಲ್ವೆ ಲೈನ್ ನಿರ್ಮಾಣಕ್ಕೆ ಕೇಂದ್ರದ ಮುಂಗಡ ಪತ್ರದಲ್ಲಿ ಅನುದಾನ ಸಿಗದಿರುವುದಕ್ಕೆ ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ರೇಲ್ವೆ ಸೌಲಭ್ಯ ಆರಂಭವಾದಾಗಿನಿಂದ ಗಂಗಾವತಿ ಭಾಗದಿಂದ ರೇಲ್ವೆ ವಿಭಾಗಕ್ಕೆ ಪ್ರತಿ ತಿಂಗಳೂ ಕೋಟ್ಯಾಂತರ ರೂಪಾಯಿಗಳು, ಸಾಗಾಣಿಕೆಯ ಬಾಬತ್ತಿಗೆ ಪಾವತಿಯಾಗುತ್ತಿವೆ.ವರ್ಷಕ್ಕೆ ನೂರಾರು ಕೋಟಿ ಹಣ ಸಂದಾಯವಾಗುತ್ತದೆ.ಆದಾಗ್ಯೂ ರೇಲ್ವೆ ಸಚಿವರು ಮತ್ತು ಅಧಿಕಾರಿಗಳು ಅನುದಾನ ಪಡೆಯುವಲ್ಲಿ ವಿಫ಼ಲರಾಗಿದ್ದಾರೆಂದು ಅವರು ಹೇಳಿದ್ದಾರೆ.
ಗಂಗಾವತಿ ನಗರದ ಒಂದೇ ಒಂದು ರೈಸ್ ಮಿಲ್ ನಿಂದ ಕೇವಲ ಹನ್ನೊಂದು ತಿಂಗಳುಗಳಲ್ಲಿ ಐದು ಕೋಟಿ ರೂಪಾಯಿಗಳನ್ನು ಬಾಡಿಗೆ ರೂಪದಲ್ಲಿ ಪಾವತಿಸಲಾಗಿದೆ.ಆದರೂ ಇನ್ನೂ ಹೆಚ್ಚಿನ ಆದಾಯ ತರುವ ಮತ್ತು 60 ಕಿ.ಮಿ. ಅಂತರವನ್ನು ಕಡಿಮೆಮಾಡುವ,ಇಂಧನ ವ್ಯಚ್ಚ ,ಬಾಡಿಗೆ ಮತ್ತು ಸಮಯವನ್ನು ಕಡಿತಗೊಳಿಸುವ ಗಂಗಾವತಿ-ದರೋಜಿ ರೇಲ್ವೆ ಲೈನ್ ಮಾರ್ಗವನ್ನು ನಿರ್ಲಕ್ಷಿಸಿದ್ದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರು ಮತ್ತು ಚನೈಗಳಿಗೆ ಅಕ್ಕಿ ಕಳುಹಿಸಬೇಕಾದರೆ ಗಂಗಾವತಿ-ಗಿಣಿಗೇರಾ-ದರೋಜಿ-ಬಳ್ಳಾರಿ ಮೂಲಕ ಹಾದು ಹೋಗಬೇಕು.ಇದು 129 ಕಿ.ಮಿ.ಅಂತರವಾಗುತ್ತದೆ.ಈ ಮಾರ್ಗವಾಗಿ ರೈಲು ಸಂಚರಿಸಬೇಕಾದರೆ ಗಿಣಿಗೇರಾದಲ್ಲಿ ಪುನಃ ರೇಲ್ವೆ ಎಂಜಿನ್ ಗಳನ್ನು ತಿರುಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.
ಗಂಗಾವತಿ-ದರೋಜಿ ರೇಲ್ವೆ ಮಾರ್ಗ ರಚನೆಯಾದರೆ 60 ಕಿ.ಮಿ.ಗಿಂತಲೂ ಕಡಿಮೆ ಅಂತರವಾಗುತ್ತದೆ. ಇದರಿಂದ ಸಮಯ ಮತ್ತು ಇಂಧನ ಎರಡೂ ವ್ಯಯವಾಗುವುದು ತಪ್ಪುತ್ತದೆ ಎಂದು ಅಶೋಕಸ್ವಾಮಿ ವಿವರಿಸಿದ್ದಾರೆ.
ಕೊಪ್ಪಳ ಕ್ಷೇತ್ರದ ಸಂಸದ ಸಂಗಣ್ಣ ಕರಡಿಯವರು ಈ ನೂತನ ಮಾರ್ಗವನ್ನು ಪ್ರಥಮ ಆದ್ಯತೆಯನ್ನಾಗಿ ಪರಿಗಣಿಸಿದ್ದು , ಹೆಚ್ಚುವರಿ ಆಯವ್ಯಯ ಪಟ್ಟಿಯಲ್ಲಿ ಬಜೆಟ್ ಮಂಜೂರು ಮಾಡಿಸುತ್ತಾರೆಂಬ ಭರವಸೆ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರ ಜೊತೆಗೂಡಿ, ಸಂಗಣ್ಣ ಕರಡಿ, ಕೇಂದ್ರ ಸರಕಾರದಿಂದ ಈ ನೂತನ ಕಾಮಗಾರಿಗೆ ಅನುದಾನವನ್ನು ಪಡೆಯುತ್ತಾರೆಂಬ ವಿಶ್ವಾಸವನ್ನು ಹೇರೂರ ವ್ಯಕ್ತಪಡಿಸಿದ್ದಾರೆ.