ಗಂಗಾವತಿಯಿಂದ ರೇಲ್ವೆಗೆ ನಾಲ್ಕೈದು ಕೋಟಿ ರೂ. ಆದಾಯ,ಆದರೂ ನಿರ್ಲಕ್ಷ್ಯ ! ಆರೋಪ.
ಗಂಗಾವತಿ:ಗಿಣಿಗೇರಾ-ಗಂಗಾವತಿ ರೇಲ್ವೆ ಲೈನ್ ಆರಂಭವಾದಾಗಿನಿಂದ ಪ್ರತಿ ತಿಂಗಳೂ ಸರಕು ಸಾಗಾಣಿಕೆಯಿಂದ ರೇಲ್ವೆ ಇಲಾಖೆಗೆ ಸರಾಸರಿ ನಾಲ್ಕೈದು ಕೋಟಿ ಆದಾಯ ಬರುತ್ತಿದೆ ಎಂದು ಅಂದಾಜಿಸಲಾಗಿದೆ.
ಫ಼ೆಬ್ರುವರಿ 2021 ರಿಂದ ಜನೇವರಿ 2022 ರ ಅವಧಿಯಲ್ಲಿ ರೂ.5 ಕೋಟಿ 22 ಸಾವಿರಕ್ಕೂ ಹೆಚ್ಚು ಮೊತ್ತವನ್ನು ಬಾಡಿಗೆ ರೂಪದಲ್ಲಿ ರೇಲ್ವೆ ಇಲಾಖೆಗೆ ಎನ್.ಆರ್.ರೈಸ್ ಮಿಲ್ ಒಂದರಿಂದಲೇ ಸಂದಾಯವಾಗಿದೆ ಎಂದು ಉದ್ಯಮಿ ಎನ್.ಆರ್.ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ಆದರೂ ಗಂಗಾವತಿ-ದರೋಜಿ ನೂತನ ಸಂಪರ್ಕ ರೇಲ್ವೆ ಮಾರ್ಗದ ಜೊತೆಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ ಎಂದು
ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಅಪಾಧಿಸಿದ್ದಾರೆ.
ಗಂಗಾವತಿ-ಹುಬ್ಬಳ್ಳಿ ನಡುವೆ ಸಂಚರಿಸುತ್ತಿರುವ ಎರಡು ರೇಲ್ವೆಗಳಲ್ಲಿ ಒಂದನ್ನು ಗೋವಾದವರೆಗೂ ವಿಸ್ತರಿಸುವ ಮತ್ತು ಕಾರಟಗಿ-ಯಶವಂತಪೂರ ಮಧ್ಯೆ ಸಂಚರಿಸುವ ರೇಲ್ವೆ ತೆಗೆದುಕೊಳ್ಳುವ ಸಮಯವನ್ನು ಕಡಿತಗೊಳಿಸುವ ಕೆಲಸ ಆಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ದರೋಜಿ-ಗಂಗಾವತಿ ರೇಲ್ವೆ ಲೈನ್ ಆರಂಭವಾದರೆ ಜಿಂದಾಲ್ ನಿಂದ ಸರಕು ಸಾಗಣೆಯ ವಹಿವಾಟು ದ್ವಿಗುಣಗೊಳ್ಳಲಿದೆ.ಕರೋನಾ ಸೊಂಕು ಮತ್ತು ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿಯವರ ನಿಧನದಿಂದ ಕರ್ನಾಟಕ ರಾಜ್ಯದಲ್ಲಿ ಆರಂಭವಾಗಬೇಕಿದ್ದ ರೇಲ್ವೆ ಇಲಾಖೆಯ ಹಲವು ಯೋಜನೆಗಳಿಗೆ ಹಿನ್ನೆಡೆಯಾಗಿದೆ ಎಂದು ಹತಾಸೆ ವ್ಯಕ್ತಪಡಿಸಿರುವ ಅಶೋಕಸ್ವಾಮಿ ನೂತನ ರೇಲ್ವೆ ಸಚಿವರು ಸಕಾರಾತ್ಮಕ ಸ್ಪಂದಿಸುತ್ತಿಲ್ಲ ಎಂದಿದ್ದಾರೆ.
ಈ ಬಗ್ಗೆ ಕೊಪ್ಪಳದ ಸಂಸದ ಸಂಗಣ್ಣ ಕರಡಿಯವರು ಸತತ ಪ್ರಯತ್ನ ನಡೆಸಿದ್ದು ,ಇಲಾಖೆಯ ಅಧಿಕಾರಿಗಳು ರೇಲ್ವೆ ಬೋರ್ಡಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಹಾಗೂ ತಮ್ಮ ಸಂಸ್ಥೆಯ ಹಲವಾರು ಮನವಿಗಳಿಗೆ ಉತ್ತರಿಸುತ್ತಿಲ್ಲ ಎಂದು ಹೇರೂರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕೇವಲ 20 ರಿಂದ 25 ಕಿ.ಮಿ.ಅಂತರದ ಗಂಗಾವತಿ-ದರೋಜಿ ನೂತನ ರೇಲ್ವೆ ಲಿಂಕ್ ಲೈನನ್ನು ಆರಭಿಸಲು ನೂತನ ರೇಲ್ವೆ ಸಚಿವರು ಮೀನ-ಮೇಷ ಎಣಿಸುತ್ತಿರುವುದು ವಿಷಾದಕರ ಎಂದವರು ಹೇಳಿದ್ದಾರೆ.
ದೇಶದಲ್ಲಿ ಸಾಂಕ್ರಾಮಿಕ ರೋಗದ ಹಾವಳಿ ಕಡಿಮೆಯಾದ ಕೂಡಲೇ ಸಂಸದ ಸಂಗಣ್ಣ ಕರಡಿಯವರ ನೇತ್ರತ್ವದಲ್ಲಿ ದೆಹಲಿಗೆ ನಿಯೋಗ ಕೊಂಡಯ್ಯೊಲಾಗುವುದು,ರೇಲ್ವೆ ಇಲಾಖೆ ಸ್ಪಂದಿಸದಿದ್ದರೆ ಕಂಪ್ಲಿ ಮತ್ತು ಗಂಗಾವತಿ ಬಂದ್ ಕರೆ ಕೊಡಲಾಗುವುದು ಎಂದಿರುವ ವಾಣಿಜ್ಯೋದ್ಯಮ ಸಂಸ್ಥೆ , ಸಂಸದ ಸಂಗಣ್ಣನವರು ರೇಲ್ವೆ ಸಚಿವರ ಮೇಲೆ ತೀವ್ರ ಒತ್ತಡ ಹಾಕಬೇಕಾದ ಅನಿವಾರ್ಯತೆ ಇದೆ, ಅವರು ಈ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತಾರೆ ಎನ್ನುವ ಆಶಾಭಾವನೆ ಹೊಂದಿದೆ.