

ಗಂಗಾವತಿ-ಹಂಪಿ ರಸ್ತೆ ನಿರ್ಮಾಣಕ್ಕೆ ಹೈದ್ರಾಬಾದ ಕರ್ನಾಟಕ ಚೇಂಬರ್ ಆಫ಼್ ಕಾಮರ್ಸ್ ಒತ್ತಾಯ
ಕೊಪ್ಪಳ: ಗಂಗಾವತಿ-ಹಂಪಿ,ಗಂಗಾವತಿ-ಆನೆಗುಂದಿ-ಹುಲಿಗಿ ಮತ್ತು ಹೊಸಪೇಟೆ- ಹಂಪಿ ರಸ್ತೆಗಳನ್ನು ಹೆರಿಟೇಜ್ ರಸ್ತೆಗಳನ್ನಾಗಿ ಅಭಿವೃದ್ಧಿಗೊಳಿಸಬೇಕೆಂದು ಕಲಬುರ್ಗಿಯ ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸರಕಾರವನ್ನು ಒತ್ತಾಯಿಸಿದೆ.
ಈ ಬಗ್ಗೆ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರಿಗೆ ಪತ್ರ ಬರೆದಿರುವ ಸಂಸ್ಥೆಯ ಅದ್ಯಕ್ಷ ಪ್ರಶಾಂತ ಎಸ್.ಮಾನಕರ್ ಮತ್ತು ಕಾರ್ಯದರ್ಶಿ ಶರಣಬಸಪ್ಪ ಎಮ್.ಪಪ್ಪಾ ಈ ಭಾಗದಲ್ಲಿರುವ ಪಾರಂಪಾರಿಕ ಸ್ಮಾರಕಗಳನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ಜನರು ಬರುತ್ತಾರೆ. ಆದರೆ
ಗಂಗಾವತಿ-ಹಂಪಿ ಮತ್ತು ಹೊಸಪೇಟೆ-ಹಂಪಿ ರಸ್ಥೆಗಳು ಹಳ್ಳಿ ರಸ್ತೆಗಳಾಗಿಯೇ ಉಳಿದಿವೆ.
ಹಂಪಿಯೂ ಸೇರಿದಂತೆ,ಹಂಪಿ ಕನ್ನಡ ವಿಶ್ವವಿದ್ಯಾಲಯ ಮತ್ತು ಕರಡಿ ಧಾಮ ಸಂಪರ್ಕಿಸುವ ರಸ್ತೆಗಳನ್ನು ಉನ್ನತ ಮಟ್ಟದಲ್ಲಿ ಅಭಿವೃದ್ಧಿಗೊಳಿಸುವ ಅವಶ್ಯಕತೆ ಇದೆ.ಇದೇ ರೀತಿ ಆಂಜನೇಯ ಜನ್ಮಸ್ಥಳ, ಆಂಜನಾದ್ರಿ ಬೆಟ್ಟ ಮತ್ತು ಹುಲಿಗಿಯನ್ನು ಸಂಪರ್ಕಿಸುವ ರಸ್ತೆಯನ್ನು ಸಹ ಅಭಿವೃದ್ಧಿಗೊಳಿಸಬೇಕು ಎಂದು ಅವರು ಪತ್ರದಲ್ಲಿ ಅಗ್ರಹಿಸಿದ್ದಾರೆ.
ಈ ಬಗ್ಗೆ ಕೊಪ್ಪಳ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಸರಕಾರಕ್ಕೆ ಪತ್ರ ಬರೆದಿದ್ದರು,ಇದನ್ನು ಬೆಂಬಲಿಸಿ ಹೈದ್ರಾಬಾದ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಕಲಬುರ್ಗಿ ಈ ಸಂಸ್ಥೆಯಿಂದ ಸಚಿವರಿಗೆ ಪತ್ರ ಬರೆಯಲಾಗಿದೆ.
ಅಗ್ರಾ ಸಂಪರ್ಕಿಸುವ ರಸ್ತೆಯ ಮಾದರಿಯಲ್ಲಿ ಈ ರಸ್ತೆಗಳನ್ನು ನಿರ್ಮಿಸಬೇಕೆಂದು ಹೇರೂರ ಸರಕಾರಕ್ಕೆ ಒತ್ತಾಯಿಸುತ್ತಾ ಬಂದಿದ್ದು,ಈ ಬಗ್ಗೆ ಸ್ಥಳೀಯ ಜನ ಪ್ರತಿನಿಧಿಗಳ ನಿರ್ಲಕ್ಷ್ಯ ತೋರುತ್ತಾ ಬರುತ್ತಿದ್ದಾರೆಂದು ಅವರು ಅಪಾದಿಸಿದ್ದಾರೆ.