ಸಿದ್ದಾಪೂರ:ಟ್ರೇನ್ ಬಂತು ಟ್ರೇನ್ ! ಕೇಕೆ ಹಾಕಿದ ಜನ.
ಗಂಗಾವತಿ: ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ತಿನ ಚುನಾವಣೆ ಘೋಷಣೆಯ ಹಿನ್ನೆಲೆಯಲ್ಲಿ ಸಂಸದರ,ಸಚಿವರ,ಶಾಸಕರ ಮತ್ತು ಇತರ ಜನ ಪ್ರತಿನಿಧಿಗಳ ಗೈರು ಹಾಜರಿಯಲ್ಲಿ ಹುಬ್ಬಳ್ಳಿ-ಗಂಗಾವತಿ ಟ್ರೇನ್, ಈ ಮೊದಲೆ ನಿಗದಿಯಾಗಿದ್ದಂತೆ ಇಂದು ಕಾರಟಗಿ ಪಟ್ಟಣದವರೆಗೂ ಸಂಚಾರವನ್ನು ವಿಸ್ತರಿಸಿತು.
ಈ ಹಿನ್ನೆಲೆಯಲ್ಲಿ ಕಾರಟಗಿ ಪಟ್ಟಣದ ಜನತೆಯಂತೆ ಸಿದ್ದಾಪೂರ ಗ್ರಾಮದಲ್ಲಿಯೂ ನೂತನ ಟ್ರೇನ್ ನ್ನು ಸಾರ್ವಜನಿಕರು ಸ್ವಾಗತಿಸಿದರು.
ಹಿರಿಯರು-ಕಿರಿಯರು ಎನ್ನದೆ ಎಲ್ಲರೂ ಟ್ರೇನ್ ಬಂತು ಟ್ರೇನ್ ಎಂದು ಕೇಕೆ ಹಾಕಿ ಆನಂದ ಪಟ್ಟರು.
ವಿಧಾನ ಪರಿಷತ್ ಚುನಾವಣೆ ಘೋಷಣೆಯಾದ ಕೂಡಲೇ ತಮ್ಮ ಊರಿಗೆ ಬರುವ ಟ್ರೇನ್ ಸಂಚಾರದ ಕಾರ್ಯಕ್ರಮ, ಮುಂದೂಡಲ್ಪಟ್ಟಿತು ಎಂದು ದುಗುಡಗೊಂಡಿದ್ದ ಜನ,ನಿಗದಿತ ಕಾರ್ಯಕ್ರಮದಂತೆ ಟ್ರೇನ್ ಯಾವ ಅಡೆ-ತಡೆಯೂ ಇಲ್ಲದಂತೆ ಸಂಚಾರ ಆರಂಭಿಸಿದ್ದು ಎಲ್ಲರ ಖುಷಿಗೆ ಕಾರಣವಾಯ್ತು.
ಹುಬ್ಬಳ್ಳಿ-ಗಂಗಾವತಿ ನಡುವೆ ಇದ್ದ ಟ್ರೇನ್ ಸಂಚಾರವನ್ನು ಕಾರಟಗಿ ಪಟ್ಟಣದವರೆಗೂ ವಿಸ್ತರಿಸಲು ಕಾರಣೀಭೂತರಾದ ಕೊಪ್ಪಳ ಲೋಕ ಸಭಾ ಸದಸ್ಯರಾದ ಸಂಗಣ್ಣ ಕರಡಿಯವರಿಗೆ ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ ಅಭಿನಂದನೆಗಳನ್ನು ಹೇಳಿದ್ದಾರೆ.