ದರೋಜಿಗೆ ರೇಲ್ವೆ ಮಾರ್ಗ ರಾಯಚೂರು ಚೇಂಬರ್ ಒತ್ತಾಯ.
ಗಂಗಾವತಿ ನಗರದಿಂದ ದರೋಜಿ ಗ್ರಾಮದವರೆಗೆ ರೇಲ್ವೆ ಲಿಂಕ್ ಲೈನ್ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ರಾಯಚೂರು ಜಿಲ್ಲಾ ಚೇಂಬರ್ ಆಫ಼್ ಕಾಮರ್ಸ್ & ಇಂಡಸ್ಟ್ರಿ ಒತ್ತಾಯಿಸಿದೆ.
ಗಂಗಾವತಿಯಿಂದ ರಸ್ತೆ ಮಾರ್ಗವಾಗಿ ಕೇವಲ 35 ಕಿ.ಮಿ. ಅಂತರದಲ್ಲಿರುವ ದರೋಜಿಯವರೆಗೆ ರೇಲ್ವೆ ಸಂಪರ್ಕ ಕಲ್ಪಿಸಬೇಕು.ಇದರಿಂದ ಭತ್ತ ,ಅಕ್ಕಿ ಮತ್ತು ಅದರ ಉಪ ಉತ್ಪನ್ನಗಳನ್ನು ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ರಫ಼್ತು ಮಾಡಲು ಅನುಕೂಲವಾಗುತ್ತದೆ.
ನೂರಾರು ರೈಸ್ ಮಿಲ್ ಗಳನ್ನು ಹೊಂದಿರುವ ಗಂಗಾವತಿ ನಗರದಿಂದ ಈಗಾಲೇ ಹಲವು ರಾಜ್ಯಗಳಿಗೆ ಮತ್ತು ಬಾಂಗ್ಲಾ ದೇಶಕ್ಕೆ ಅಕ್ಕಿಯನ್ನು ಕಳುಹಿಸಲಾಗುತ್ತಿದೆ.
ಪ್ರತಿ ತಿಂಗಳೂ ಲಕ್ಷಾಂತರ ರೂಪಾಯಿಗಳ ಆದಾಯ ರೇಲ್ವೆ ಇಲಾಖೆಗೆ ಸಂಗ್ರಹವಾಗುತ್ತಿದೆ. ಈ ನೂತನ ರೇಲ್ವೆ ಮಾರ್ಗದಿಂದ ಮತ್ತಷ್ಟು ಅನುಕೂಲವಾಗುತ್ತದೆ.
ಉದ್ದೇಶಿತ ಈ ರೈಲು ಮಾರ್ಗ ಬಳ್ಳಾರಿ, ಗುಂತಕಲ್, ಗು೦ಟೂರ್ ರೇಲ್ವೆ ಜಂಕ್ಷನ್ ಗೆ ನೇರವಾಗಿ ತಲುಪುವುದರಿಂದ ಅಕ್ಕಿ ರಫ಼್ತುದಾರರಿಗೆ ಸಹಾಯವಾಗುತ್ತದೆ ಮತ್ತು ರೇಲ್ವೆ ಇಲಾಖೆಗೆ ಹೆಚ್ಚಿನ ಆದಾಯ ಸಂಗ್ರಹವಾಗುತ್ತದೆ.
ಧಾರ್ಮಿಕ ಕ್ಷೇತ್ರಗಳಾದ ಶ್ರೀಶೈಲ, ತಿರುಪತಿ ಸೇರಿದಂತೆ ಬೆಂಗಳೂರು, ಮದ್ರಾಸ್ ಗಳಿಗೆ ನೇರ ಸಂಪರ್ಕ ಏರ್ಪಡುತ್ತದೆ ಎಂದು ಕೃಷಿ ವಿಜ್ಞಾನಿಗಳ ವಿಶ್ವ ವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಸದಸ್ಯರೂ ಆಗಿರುವ ತ್ರಿವಿಕ್ರಮ ಜೋಶಿ,
ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೆ ಮತ್ತು ಹುಬ್ಬಳ್ಳಿಯ ರೇಲ್ವೆ ಜನರಲ್ ಮ್ಯಾನೇಜರ್ ಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.