ಪಂಜಾಬಿನ ಎರಡನೇ ಮಾಲ್ವಾ ಆಗಲಿದೆಯಾ ತುಂಗಭದ್ರಾ ಪ್ರದೇಶ !
ಗಂಗಾವತಿ: ಪಂಜಾಬ್ ರಾಜ್ಯದ ಮಾಲ್ವಾ ಎಂಬ ಪ್ರದೇಶಕ್ಕೆ ಯಾರೂ ಹೆಣ್ಣು ಕೊಡುವುದಿಲ್ಲ.ಅಲ್ಲಿಗೆ ಹೊರಗಿನವರು ಯಾರು ಭೇಟಿ ಕೊಡುವುದಿಲ್ಲ.ಆ ಭಾಗದಲ್ಲಿ ವಾಸಿಸುವ ಎಲ್ಲರಿಗೂ ಕ್ಯಾನ್ಸರ್ !
ಕ್ರಿಮಿನಾಶಕ, ರಾಸಾಯನಿಕ ಗೊಬ್ಬರದ ವಿಪರೀತವಾದ ಬಳಕೆಯಿಂದಾಗಿ ಅಲ್ಲಿನ ಭೂಮಿ, ನೀರು, ಗಾಳಿ ಎಲ್ಲವೂ ವಿಷಪೂರಿತ.ಹೀಗಾಗಿ ಅಲ್ಲಿ ಎಲ್ಲರೂ ಕ್ಯಾನ್ಸರ್ ಪೀಡಿತರೆ !
ತುಂಗಭದ್ರಾ ಅಚ್ಚುಕಟ್ಟು ಪ್ರದೇಶವೂ ಇದರಿಂದ ಹೊರತಾಗಿಲ್ಲ.ರಸಾಯನಿಕ ಗೊಬ್ಬರ ಮತ್ತು ಕೀಟ ನಾಶಕಗಳನ್ನು ಈ ಭಾಗದಲ್ಲಿ ಭತ್ತದ ಬೆಳೆಗೆ ಬಳಸುತ್ತಿರುವುದರಿಂದ ಮುಂದೊಂದು ದಿನ ಈ ಪ್ರದೇಶದ ಜನ ಕ್ಯಾನ್ಸರ್ ರೋಗದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಪರಿಸರ ಮತ್ತು ಔಷಧ ತಜ್ಞ ಡಾ.ಶ್ರೀಶೈಲ ಬದಾಮಿ ಎಚ್ಚರಿಸಿದ್ದರು.
ಅವರು ಇತ್ತೀಚೆಗೆ ಕೊಪ್ಪಳ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
2040 ರ ಹೊತ್ತಿಗೆ ಸಂತಾನೋತ್ಪತ್ತಿಯಲ್ಲಿ ಕೊರತೆ ಉ೦ಟಾಗಲಿದ್ದು, ಹೆಣ್ಣು ಮಕ್ಕಳು ಗಂಡು ಮಕ್ಕಳಂತೆ, ಗಂಡು ಮಕ್ಕಳು ಹೆಣ್ಣು ಮಕ್ಕಳಂತೆ ಬದುಕ ಬೇಕಾದ ಅಪಾಯವಿದೆ.
“ಪಿ.ಸಿ.ಓ.ಎಸ್” ಅಥವಾ “ಪಿ.ಸಿ.ಓ.ಡಿ” ಸಮಸ್ಯೆಯಿಂದ ಹೆಣ್ಣು ಮಕ್ಕಳ ಮುಖದ ಮೇಲೆ ಕೂದಲು ಬೆಳೆಯುತ್ತವೆ. ಐದಾರು ವರ್ಷದ ಹೆಣ್ಣು ಮಕ್ಕಳಿಗೆ ದೊಡ್ಡ ಆಕಾರದಲ್ಲಿ ಸ್ಥನಗಳ ಬೆಳವಣಿಗೆ ಆರಂಭವಾಗಿ, ಬೇಗ ಋತುಮತಿಯರಾಗುತ್ತಾರೆ ಮತ್ತು ಅವರಿಗೆ ಬೇಗನೇ ಮುಟ್ಟು ನಿಲ್ಲುತ್ತದೆ.ಗಂಡು ಮಕ್ಕಳಲ್ಲಿ ವೃಷಣಗಳ ಬೆಳವಣಿಗೆಯಲ್ಲಿ ಕುಂಠಿತವಾಗುತ್ತದೆ. ಇದರಿಂದ ಸಂತಾನ ಹೀನತೆ ಉಂಟಾಗುತ್ತದೆ.
ತುಂಗಭದ್ರಾ ನದಿ ನೀರಿನಲ್ಲಿ ಭತ್ತ ಬೆಳೆಯುವ ಪ್ರದೇಶದ ಎಲ್ಲರಿಗೂ ಇದರಿಂದ ತೊಂದರೆಯಾಗುತ್ತದೆ.ಪ್ರಮುಖವಾಗಿ ಗಂಗಾವತಿ ಮತ್ತು ಸಿಂಧನೂರು ಪ್ರದೇಶ ವಾಸಿಗಳು ಎಚ್ಚತ್ತು ಕೊಳ್ಳದಿದ್ದರೆ ಕೇರಳದ ಕಾಸರಗೋಡು, ರಾಜಸ್ಥಾನದ ಬಂತಿಡಾ ಪ್ರದೇಶದಲ್ಲಿನ ಜನರಿಗೆ ಉಂಟಾಗುತ್ತಿರುವ ಆರೋಗ್ಯದ ಮೇಲಿನ ಕೆಟ್ಟ ಪರಿಣಾಮಗಳು ಇಲ್ಲಿಯೂ ಸಂಭವಿಸುತ್ತವೆ.
ಅಂಗವಿಕಲ ಮತ್ತು ಬುದ್ದಿಮಾಂದ್ಯ ಮಕ್ಕಳು ಈಗಾಗಲೇ ಗಂಗಾವತಿಯಲ್ಲಿ ಜನಿಸುತ್ತಿವೆ ಎಂದು ಹೇಳಿ ಗಂಗಾವತಿ ನಗರದ ಆಸ್ಪತ್ರೆಗಳಲ್ಲಿಯೇ ಹುಟ್ಟಿದ ಅಂತಹ ಮಕ್ಕಳ ಬಗ್ಗೆ ಚಿತ್ರ ಸಮೇತ ಮಾಹಿತಿ ನೀಡಿದರು.
ಈ ಭಾಗದ ಭತ್ತಕ್ಕೆ ಬಳಸುವ ರಸಾಯನಿಕ ಎಲ್ಲರ ದೇಹದಲ್ಲಿಯೂ ಬರೀ ಆಹಾರದಿಂದಲ್ಲ ,ನೀರು, ಗಾಳಿ ಮೂಲಕ ಸೇರಿಕೊಂಡಿದೆ.ಸದ್ಯದ ಯುವಕರಿಕೆ ಮಕ್ಕಳಾಗಬಹುದು ಆದರೆ ಅವರಿಗೆ ಮಕ್ಕಳಾಗುವ ಗ್ಯಾರಂಟಿ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ನಿಮ್ಮ ವಂಶ ಬೆಳೆಯ ಬೇಕೆಂದರೆ ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಮುಟ್ಟಾದಾಗ ಪ್ಯಾಡ ಬದಲಿಗೆ ಬಟ್ಟೆಯನ್ನು ಬಳಸಲು ಹೇಳಿ. ಚಿಕ್ಕ ಮಕ್ಕಳಿಗೆ ಡೈಪರ್ ಹಾಕ ಬೇಡಿ,ಬೇಕರಿ ಐಟಮ್ ಕೊಡಬೇಡಿ, ನೀವು ಕೂಡ ಅಕ್ಕಿ ,ಮೈದಾ, ಸಕ್ಕರೆ ತ್ಯಜಿಸಿ ಎಂದು ಕರೆ ನೀಡಿದರು